ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯು ಆರಂಭವಾಗಲಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ಭಾಗವಹಿಸಲಿದ್ದಾರೆ. ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ತನ್ನ ಮೊದಲ ಪಂದ್ಯವನ್ನು ಜಾರ್ಖಂಡ್ ವಿರುದ್ಧ ಆಡಲಿದೆ.
ಬೆಂಗಳೂರು: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಪಂದ್ಯಗಳು ಬುಧವಾರ ಆರಂಭಗೊಳ್ಳಲಿವೆ. ಒಟ್ಟು 32 ತಂಡಗಳ ನಡುವಿನ ಮಹತ್ವದ ಟೂರ್ನಿಯ ಪಂದ್ಯಗಳಿಗೆ ಬೆಂಗಳೂರು, ರಾಜ್‌ಕೋಟ್, ಜೈಪುರ ಹಾಗೂ ಅಹಮದಾಬಾದ್‌ನಲ್ಲಿ ನಡೆಯಲಿವೆ.
ಈ ಬಾರಿ ಟೂರ್ನಿಯು ತಾರಾ ಕ್ರಿಕೆಟಿಗರ ಉಪಸ್ಥಿತಿಯಿಂದಾಗಿ ಹೆಚ್ಚಿನ ಗಮನ ಸೆಳೆಯುತ್ತಿವೆ. ವಿರಾಟ್ ಕೊಹ್ಲಿ(ಡೆಲ್ಲಿ), ರೋಹಿತ್ ಶರ್ಮಾ(ಮುಂಬೈ), ಶುಭ್‌ಮನ್ ಗಿಲ್(ಪಂಜಾಬ್), ಸೂರ್ಯಕುಮಾರ್ ಯಾದವ್(ಮುಂಬೈ), ರಿಷಭ್ ಪಂತ್(ಡೆಲ್ಲಿ) ಸೇರಿ ಬಹುತೇಕ ಎಲ್ಲಾ ಪ್ರಮುಖ ಕ್ರಿಕೆಟಿಗರು ಟೂರ್ನಿಯಲ್ಲಿ ಆಡಲಿದ್ದಾರೆ.
15 ವರ್ಷಗಳ ಬಳಿಕ ವಿಜಯ್ ಹಜಾರೆ ಆಡುತ್ತಿರುವ ಕೊಹ್ಲಿ
15 ವರ್ಷದ ಬಳಿಕ ವಿಜಯ್ ಹಜಾರೆ ಆಡುತ್ತಿರುವ ಕೊಹ್ಲಿ ಈ ಬಾರಿ ಕನಿಷ್ಠ 2 ಪಂದ್ಯಗಳನ್ನಾದರೂ ಆಡುವ ನಿರೀಕ್ಷೆಯಿದೆ. ದ.ಆಫ್ರಿಕಾ ವಿರುದ್ಧ ಅಬ್ಬರಿಸಿದ್ದ ಅವರು, ಡೆಲ್ಲಿ ಪರವೂ ಮಿಂಚಬಲ್ಲರೇ ಎಂಬ ಕುತೂಹಲವಿದೆ. ಈ ಸರಣಿಯ ಬಳಿಕ ಅವರು ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಸಜ್ಜಾಗಲಿದ್ದಾರೆ. ಇನ್ನು, ಹಲವು ಯುವ ಕ್ರಿಕೆಟಿಗರು ಭಾರತ ತಂಡಕ್ಕೆ ಆಯ್ಕೆಯಾಗಲು ಕಾಯುತ್ತಿದ್ದು, ವಿಜಯ್ ಹಜಾರೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ.
ಎಲ್ಲಾ ಪಂದ್ಯಗಳು ಬೆಳಗ್ಗೆ 9ಕ್ಕೆ ಆರಂಭ
ಸೀಮಿತ ಪಂದ್ಯಗಳು ಮಾತ್ರ ನೇರಪ್ರಸಾರ
-- ಕರ್ನಾಟಕಕ್ಕೆ ಜಾರ್ಖಂಡ್ ಸವಾಲು
ಹಾಲಿ ಚಾಂಪಿಯನ್ ಕರ್ನಾಟಕ ತಂಡ ಈ ಬಾರಿ ‘ಎ’ ಗುಂಪಿನಲ್ಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಆಡಲಿದೆ. ತಂಡದ ಎಲ್ಲಾ ಪಂದ್ಯಗಳು ಅಹಮದಾಬಾದ್‌ನಲ್ಲಿ ನಿಗದಿಯಾಗಿವೆ. ತಂಡಕ್ಕೆ ಮಯಾಂಕ್ ಅಗರ್‌ವಾಲ್ ನಾಯಕತ್ವ ವಹಿಸಲಿದ್ದು, ಕರುಣ್ ನಾಯರ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಕೆ.ಎಲ್.ರಾಹುಲ್, ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್, ರವಿಚಂದ್ರನ್ ಸ್ಮರಣ್, ಶ್ರೇಯಸ್ ಗೋಪಾಲ್ ಕೂಡಾ ತಂಡದಲ್ಲಿದ್ದಾರೆ.
ಕರ್ನಾಟದಕ ವೇಳಾಪಟ್ಟಿ
ದಿನಾಂಕ ಎದುರಾಳಿ
ಡಿ.24 ಜಾರ್ಖಂಡ್
ಡಿ.26 ಕೇರಳ
ಡಿ.29 ತಮಿಳುನಾಡು
ಡಿ.31 ಪುದುಚೇರಿ
ಜ.3 ತ್ರಿಪುರಾ
ಜ.6 ರಾಜಸ್ಥಾನ
ಜ.8 ಮಧ್ಯಪ್ರದೇಶ
* ಎಲ್ಲಾ ಪಂದ್ಯಗಳು ಅಹಮದಾಬಾದ್‌ನಲ್ಲಿ
-
ಬೆಂಗ್ಳೂರಲ್ಲಿ ಏಕಕಾಲಕ್ಕೆ
4 ಪಂದ್ಯ ಆಯೋಜನೆ!
ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಯದಿದ್ದರೂ ಬೆಂಗಳೂರಿನಲ್ಲಿ ಏಕಕಾಲಕ್ಕೆ 4 ಪಂದ್ಯಗಳು ಆಯೋಜನೆಗೊಳ್ಳಲಿವೆ. ಹರ್ಯಾಣ-ರೈಲ್ವೇಸ್, ಗುಜರಾತ್-ಸರ್ವಿಸಸ್, ಒಡಿಶಾ-ಸೌರಾಷ್ಟ್ರ ಪಂದ್ಯಗಳು ಆಲೂರಿನಲ್ಲಿರುವ 3 ಮೈದಾನಗಳಲ್ಲಿ ನಡೆಯಲಿವೆ. ಡೆಲ್ಲಿ ಹಾಗೂ ಆಂಧ್ರ ನಡುವಿನ ಪಂದ್ಯಕ್ಕೆ ದೇವನಹಳ್ಳಿ ಸಮೀಪದ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಆತಿಥ್ಯ ವಹಿಸಲಿದೆ.


