ರಾಜಸ್ಥಾನ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ, ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 29 ಎಸೆತಗಳಲ್ಲಿ 97 ರನ್ ಸಿಡಿಸಿ ಅಬ್ಬರಿಸಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ, ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (65) ಬಾರಿಸಿದ ಕ್ರಿಸ್ ಗೇಲ್ ಅವರ ವಿಶ್ವದಾಖಲೆಯನ್ನು ಮುರಿದಿದ್ದಾರೆ.
ಜೈಪುರ: ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಈ ಹುಡುಗ ಕೇವಲ 29 ಎಸೆತಗಳಲ್ಲಿ 97 ರನ್ ಚಚ್ಚಿ ಅಬ್ಬರಿಸಿದ್ದಾರೆ. ಈ ಸ್ಫೋಟಕ ಇನಿಂಗ್ಸ್‌ನಲ್ಲಿ ಬರೋಬ್ಬರಿ 12 ಸಿಕ್ಸರ್‌ಗಳನ್ನು ಸಿಡಿಸಿದ ವೈಭವ್, ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ, 2012ರಲ್ಲಿ ಆರ್‌ಸಿಬಿ ಪರ 59 ಸಿಕ್ಸರ್‌ಗಳನ್ನು ಸಿಡಿಸಿದ್ದ 'ಯೂನಿವರ್ಸ್ ಬಾಸ್' ಕ್ರಿಸ್ ಗೇಲ್ ಅವರ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ವೈಭವ್ ತಮ್ಮ ಎರಡನೇ ಐಪಿಎಲ್ ಸೀಸನ್‌ನ 15 ಪಂದ್ಯಗಳಿಂದ ಒಟ್ಟು 65 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಅತಿವೇಗದ ಶತಕ ಸಿಡಿಸುವ ಅವಕಾಶ ಜಸ್ಟ್ ಮಿಸ್
ಕ್ರಿಸ್ ಗೇಲ್ ಹೆಸರಿನಲ್ಲಿರುವ ಐಪಿಎಲ್‌ನ ಅತಿ ವೇಗದ ಶತಕದ (30 ಎಸೆತ) ದಾಖಲೆಯನ್ನು ಮುರಿಯುವ ಸುವರ್ಣಾವಕಾಶ ವೈಭವ್‌ಗೆ ಇತ್ತು. 28 ಎಸೆತಗಳಲ್ಲಿ 97 ರನ್ ಗಳಿಸಿದ್ದ ಅವರು, ಗೇಲ್ ದಾಖಲೆ ಮುರಿಯುವ ಯತ್ನದಲ್ಲಿ ಪ್ರಫುಲ್ ಹಿಂಗೆ ಅವರ ಎಸೆತದಲ್ಲಿ ಥರ್ಡ್ ಮ್ಯಾನ್‌ನಲ್ಲಿದ್ದ ಸ್ಮರಣ್ ರವಿಚಂದ್ರನ್‌ಗೆ ಕ್ಯಾಚ್ ನೀಡಿ ಔಟಾದರು. ಕೇವಲ 3 ರನ್‌ಗಳಿಂದ ಶತಕ ವಂಚಿತರಾದರು. ಅವರ ಈ ಭರ್ಜರಿ ಇನಿಂಗ್ಸ್‌ನಲ್ಲಿ 12 ಸಿಕ್ಸರ್‌ಗಳ ಜೊತೆಗೆ 5 ಬೌಂಡರಿಗಳು ಸೇರಿದ್ದವು. ವೈಭವ್ ಅವರ ಈ ಮಿಂಚಿನ ಆಟದಿಂದಾಗಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ, ಪವರ್‌ಪ್ಲೇನಲ್ಲಿ 80 ರನ್ ಗಳಿಸಿತು ಮತ್ತು ಮೊದಲ ವಿಕೆಟ್‌ಗೆ 8 ಓವರ್‌ಗಳಲ್ಲಿ 125 ರನ್‌ಗಳ ಜೊತೆಯಾಟವಾಡಿತು.
ಈ ಪಂದ್ಯಕ್ಕೂ ಮುನ್ನ, ಒಂದೇ ಐಪಿಎಲ್ ಸೀಸನ್‌ನಲ್ಲಿ 50ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ವೈಭವ್ ಈಗಾಗಲೇ ಬರೆದಿದ್ದರು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೇಲ್ ದಾಖಲೆ ಮುರಿಯಲು ಅವರಿಗೆ ಬೇಕಾಗಿದ್ದು ಕೇವಲ 7 ಸಿಕ್ಸರ್‌ಗಳು. ಪ್ಯಾಟ್ ಕಮಿನ್ಸ್ ಎಸೆದ ಮೊದಲ ಓವರ್‌ನ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ವೈಭವ್ ತಮ್ಮ ಸಿಕ್ಸರ್ ಬೇಟೆ ಆರಂಭಿಸಿದರು. ಎರಡನೇ ಓವರ್‌ನಲ್ಲಿ ಇಶಾನ್ ಮಲಿಂಗಾ ವಿರುದ್ಧವೂ ಸಿಕ್ಸರ್ ಬಾರಿಸಿದರು. ಮೂರನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್‌ಗೆ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಅವರು, ಮುಂದಿನ ಓವರ್‌ನಲ್ಲಿ ಸಾಕಿಬ್ ಹುಸೇನ್‌ಗೆ ಸಿಕ್ಸರ್ ಬಾರಿಸಿ ಗೇಲ್ ದಾಖಲೆಯನ್ನು ಸರಿಗಟ್ಟಿದರು. ಅದೇ ಓವರ್‌ನಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಿ ಗೇಲ್ ಅವರನ್ನು ಹಿಂದಿಕ್ಕಿ ಇತಿಹಾಸ ನಿರ್ಮಿಸಿದರು.
ಹಲವು ಅಪರೂಪದ ದಾಖಲೆ ಬರೆದ ವೈಭವ್ ಸೂರ್ಯವಂಶಿ
ನಂತರ, ಸಾಕಿಬ್ ಅವರನ್ನೇ ಮತ್ತೊಮ್ಮೆ ಸಿಕ್ಸರ್‌ಗೆ ಅಟ್ಟಿದ ವೈಭವ್, ಕೇವಲ 16 ಎಸೆತಗಳಲ್ಲಿ ಈ ಸೀಸನ್‌ನ ಐದನೇ ಅರ್ಧಶತಕ ಪೂರೈಸಿದರು. ಅವರ ಅರ್ಧಶತಕದಲ್ಲಿ 8 ಸಿಕ್ಸರ್‌ಗಳಿದ್ದವು. ಈ ಮೂಲಕ, ಐಪಿಎಲ್ ನಾಕೌಟ್ ಹಂತದಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಸುರೇಶ್ ರೈನಾ ಅವರ ದಾಖಲೆಯನ್ನು ಸರಿಗಟ್ಟಿದರು. ಅಷ್ಟೇ ಅಲ್ಲ, ಪವರ್‌ಪ್ಲೇನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (8) ಬಾರಿಸಿದ ಆಟಗಾರ ಎಂಬ ಹೊಸ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು. 2008ರಲ್ಲಿ ಚೆನ್ನೈ ವಿರುದ್ಧ ಮುಂಬೈ ಪರ 7 ಸಿಕ್ಸರ್‌ಗಳನ್ನು ಬಾರಿಸಿದ್ದ ಸನತ್ ಜಯಸೂರ್ಯ ಅವರ ದಾಖಲೆಯನ್ನು ವೈಭವ್ ಮುರಿದರು.
ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ವೈಭವ್ ಈ ಸೀಸನ್‌ನಲ್ಲೇ ತಮ್ಮದಾಗಿಸಿಕೊಂಡಿದ್ದರು. ಇದೇ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ 37 ಎಸೆತಗಳಲ್ಲಿ 103 ರನ್ ಗಳಿಸಿದ್ದಾಗ 12 ಸಿಕ್ಸರ್‌ಗಳನ್ನು ಸಿಡಿಸಿ ಈ ದಾಖಲೆ ಬರೆದಿದ್ದರು. ಅರ್ಧಶತಕದ ನಂತರವೂ ತಮ್ಮ ಸಿಕ್ಸರ್‌ಗಳ ಬೇಟೆಯನ್ನು ಮುಂದುವರಿಸಿದ ವೈಭವ್, ಈವರೆಗೆ ಆಡಿದ 15 ಪಂದ್ಯಗಳಿಂದ ಒಟ್ಟು 680 ರನ್ ಗಳಿಸಿ, ಟೂರ್ನಮೆಂಟ್‌ನ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇದೀಗ ಪರ್ಪಲ್ ಕ್ಯಾಪ್ ವೈಭವ್ ಸೂರ್ಯವಂಶಿ ಪಾಲಾಗಿದೆ.


