2026ರ ಐಪಿಎಲ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 92 ರನ್‌ಗಳಿಂದ ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್‌ಗೆ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ, ಆರ್‌ಸಿಬಿ ತಂಡವು ಪ್ಲೇ ಆಫ್‌ನಲ್ಲಿ ಗರಿಷ್ಠ ಬೌಂಡರಿ, ಗರಿಷ್ಠ ಸ್ಕೋರ್ ಸೇರಿದಂತೆ ನಾಲ್ಕು ಅಪರೂಪದ ದಾಖಲೆಗಳನ್ನು ನಿರ್ಮಿಸಿದೆ.

ಧರ್ಮಶಾಲಾ: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತೊಮ್ಮೆ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಮೇ 26ರಂದು ಇಲ್ಲಿನ HPCA ಕ್ರಿಕೆಟ್ ಮೈದಾನದಲ್ಲಿ ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಆರ್‌ಸಿಬಿ ತಂಡವು 92 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಇನ್ನು ಇದೇ ಪಂದ್ಯದಲ್ಲಿ ಆರ್‌ಸಿಬಿ ತಂಡವು ನಾಲ್ಕು ಅಪರೂಪದಲ್ಲೇ ಅಪರೂಪದ ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಯಾವುದವು ದಾಖಲೆಗಳು ಎನ್ನುವುದನ್ನು ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1. ಐಪಿಎಲ್‌ ಪ್ಲೇ ಆಫ್‌ ಪಂದ್ಯಗಳಲ್ಲಿ ಗರಿಷ್ಠ ಬೌಂಡರಿ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಪ್ಲೇ ಆಫ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಗರಿಷ್ಠ ಬೌಂಡರಿ ಬಾರಿಸಿದ ತಂಡ ಎನ್ನುವ ಅಪರೂಪದ ದಾಖಲೆ ತಮ್ಮದಾಗಿಸಿಕೊಂಡಿತು. ಗುಜರಾತ್ ಟೈಟಾನ್ಸ್ ಎದುರಿನ ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್‌ಸಿಬಿ ತಂಡವು 38 ಬೌಂಡರಿ ಬಾರಿಸುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದೆ. ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡವು 2012ರ ಐಪಿಎಲ್ ಪ್ಲೇ ಆಫ್‌ನಲ್ಲಿ ಕ್ಯಾಪಿಟಲ್ಸ್ ಎದುರು 33 ಬೌಂಡರಿ ಬಾರಿಸಿತ್ತು. ಈ ದಾಖಲೆಯನ್ನು ಆರ್‌ಸಿಬಿ ನುಚ್ಚುನೂರು ಮಾಡಿದೆ.

2. ಐಪಿಎಲ್‌ ಪ್ಲೇ ಆಫ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ತಂಡ ಆರ್‌ಸಿಬಿ!

ಗುಜರಾತ್ ಟೈಟಾನ್ಸ್ ಎದುರು ಆರ್‌ಸಿಬಿ ಬ್ಯಾಟರ್‌ಗಳು ಮೈಚಳಿ ಬಿಟ್ಟು ಬ್ಯಾಟ್ ಬೀಸಿದರು. ಪರಿಣಾಮ, ಐಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ ಗರಿಷ್ಠ ರನ್ ಬಾರಿಸಿದ ತಂಡ ಎನ್ನುವ ಅಪರೂಪದ ದಾಖಲೆಗೆ ಆರ್‌ಸಿಬಿ ಪಾತ್ರವಾಗಿದೆ. ನಿನ್ನೆ ಆರ್‌ಸಿಬಿ ತಂಡವು ಗುಜರಾತ್ ಎದುರು ನಿಗದಿತ 20 ಓವರ್‌ಗಳಲ್ಲಿ 254 ರನ್ ಚಚ್ಚಿತು. ಇದಕ್ಕೂ ಮೊದಲು ಗುಜರಾತ್ ಟೈಟಾನ್ಸ್ ತಂಡವು 2023ರ ಐಪಿಎಲ್‌ ಪ್ಲೇ ಆಫ್‌ನಲ್ಲಿ ಮುಂಬೈ ಇಂಡಿಯನ್ಸ್ ಎದುರು 233 ರನ್ ಸಿಡಿಸಿತ್ತು. ಇದೀಗ ಆರ್‌ಸಿಬಿ ಆರ್ಭಟದ ಮುಂದೆ ಗುಜರಾತ್ ಟೈಟಾನ್ಸ್ ರೆಕಾರ್ಡ್ಸ್‌ ಧೂಳೀಪಟವಾಗಿದೆ.

3. ಐಪಿಎಲ್‌ನಲ್ಲಿ ಮೂರನೇ ಗರಿಷ್ಠ ಸ್ಕೋರ್ ದಾಖಲಿಸಿದ ಆರ್‌ಸಿಬಿ

ಧರ್ಮಶಾಲಾದಲ್ಲಿ ಗುಜರಾತ್ ಟೈಟಾನ್ಸ್ ಎದುರು 5 ವಿಕೆಟ್ ನಷ್ಟಕ್ಕೆ 254 ರನ್ ಬಾರಿಸಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕನೇ ಬಾರಿಗೆ 250+ ರನ್ ಬಾರಿಸಿದ ದಾಖಲೆ ಮಾಡಿದೆ. ಇದಷ್ಟೇ ಅಲ್ಲದೇ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಮೂರನೇ ಗರಿಷ್ಠ ಟೋಟಲ್ ಕಲೆಹಾಕಿದ ಸಾಧನೆ ಮಾಡಿದೆ. ಈ ಮೊದಲು ಆರ್‌ಸಿಬಿ ತಂಡವು 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪುಣೆ ವಾರಿಯರ್ಸ್ ಎದುರು 5 ವಿಕೆಟ್ ನಷ್ಟಕ್ಕೆ 263 ರನ್ ಬಾರಿಸಿತ್ತು. ಇದಾದ ಬಳಿಕ ಕಳೆದೆರಡು ವರ್ಷಗಳ ಹಿಂದೆ ಅಂದರೆ 2024ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು 7 ವಿಕೆಟ್ ನಷ್ಟಕ್ಕೆ ಆರ್‌ಸಿಬಿ ತಂಡವು 262 ರನ್ ಸಿಡಿಸಿತ್ತು. ಇದೀಗ ಆರ್‌ಸಿಬಿ ಗುಜರಾತ್ ಎದುರು 254 ರನ್ ಚಚ್ಚಿರುವುದು ತಂಡದ ಪಾಲಿಗೆ ಮೂರನೇ ಗರಿಷ್ಠ ಟೋಟಲ್ ಎನಿಸಿಕೊಂಡಿದೆ.

4. ಐಪಿಎಲ್ ಪ್ಲೇ ಆಫ್‌ನಲ್ಲಿ ನಾಲ್ಕನೇ ಸಿಕ್ಸರ್ ಕಿಂಗ್ ಪಾಟೀದಾರ್:

ಐಪಿಎಲ್ ಪ್ಲೇ ಆಫ್‌ ವಿಚಾರಕ್ಕೆ ಬಂದರೆ ರಜತ್ ಪಾಟೀದಾರ್ ಬೇರೆಯದ್ದೇ ಅವತಾರ ತಾಳುತ್ತಾರೆ. ಐಪಿಎಲ್‌ ಪ್ಲೇ ಆಫ್‌ನಲ್ಲಿ ರಜತ್ ಪಾಟೀದಾರ್ ಇದುವರೆಗೂ ಆರು ಇನ್ನಿಂಗ್ಸ್‌ ಅಡಿ ಒಂದು ಶತಕ ಎರಡು ಅರ್ಧಶತಕ ಸಹಿತ 338 ರನ್ ಚಚ್ಚಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ಐಪಿಎಲ್‌ ಪ್ಲೇ ಆಫ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರ್‌ಸಿಬಿ ನಾಯಕ ಪಾಟೀದಾರ್ ಇದೀಗ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಪಾಟೀದಾರ್ ಇದುವರೆಗೂ 24 ಸಿಕ್ಸರ್ ಸಿಡಿಸಿದ್ದಾರೆ. ಇನ್ನುಳಿದಂತೆ ಸುರೇಶ್ ರೈನಾ(40), ಎಂ ಎಸ್ ಧೋನಿ(28) ಹಾಗೂ ಕೀರನ್ ಪೊಲ್ಲಾರ್ಡ್(25) ಮಾತ್ರ ಪಾಟೀದಾರ್‌ಗಿಂತ ಮುಂದಿದ್ದಾರೆ.