ಐಪಿಎಲ್ ನಾಕೌಟ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ನ ವೈಭವ್‌ ಸೂರ್ಯವಂಶಿ 97 ರನ್‌ಗಳ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್‌ ಸಿಡಿಸುವ ಮೂಲಕ, ಅವರು ಕ್ರಿಸ್ ಗೇಲ್ ಅವರ ಒಂದು ಸೀಸನ್‌ನಲ್ಲಿ ಗರಿಷ್ಠ ಸಿಕ್ಸರ್‌ಗಳ ದಾಖಲೆಯನ್ನು ಮುರಿದು ಆರೆಂಜ್ ಕ್ಯಾಪ್ ಪಡೆದರು.

ಚಂಡೀಗಢ (ಮೇ.27): ಐಪಿಎಲ್‌ನ ಫೈನಲ್‌ಗೇರುವ ನಿಟ್ಟಿನಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವಿನ ಅತ್ಯಂತ ಪ್ರಮುಖವಾದ ಎಲಿಮಿನೇಟರ್‌ ನಾಕೌಟ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಬ್ಯಾಟಿಂಗ್‌ ರೌದ್ರಾವತಾರ ಮೆರೆದಿದೆ. ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ನೇತೃತ್ವದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಬೌಲರ್‌ಗಳ ಮೇಲೆ ಪ್ರಹಾರ ನಡೆಸಿದ ರಾಜಸ್ಥಾನ ರಾಯಲ್ಸ್‌ ತಂಡ ಕೇವಲ 50 ಎಸೆತಗಳಲ್ಲಿ ಟೀಮ್‌ ಹಂಡ್ರೆಡ್‌ ಪೂರೈಸಿದೆ. ಇದು ಐಪಿಎಲ್‌ನ ನಾಕೌಟ್‌ ಪಂದ್ಯದಲ್ಲಿ 2ನೇ ಅತ್ಯಂತ ವೇಗದ ಟೀಮ್‌ ಹಂಡ್ರೆಡ್‌ ಎನಿಸಿದೆ. ಇದಕ್ಕೂ ಮುನ್ನ 2014ರಲ್ಲಿ ಕ್ವಾಲಿಫೈಯರ್‌ 2 ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಪಂಜಾಬ್‌ ವಿರುದ್ಧ ಕೇವಲ 6 ಓವರ್‌ಗಳಲ್ಲಿ 100 ರನ್‌ ಸಿಡಿಸಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

11 ಸಿಕ್ಸರ್‌ ಸಿಡಿಸಿ ಅಬ್ಬರಿಸಿದ ವೈಭವ್‌ ಸೂರ್ಯವಂಶಿ

ರಾಜಸ್ಥಾನ ಬ್ಯಾಟಿಂಗ್‌ನ ಹೈಲೈಟ್‌ ಎನಿಸಿದ್ದು, ಎಂದಿನಂತೆ ವೈಭವ್‌ ಸೂರ್ಯವಂಶಿ. ಕೇವಲ 29 ಎಸೆತ ಎದುರಿಸಿದ ಯುವ ಬ್ಯಾಟ್ಸ್‌ಮನ್‌ 5 ಬೌಂಡರಿ ಹಾಗೂ ಬರೋಬ್ಬರಿ 12 ಸಿಕ್ಸರ್‌ಗಳ ಮೂಲಕ 97 ರನ್‌ ಸಿಡಿಸಿದರು. ಸುಲಭವಾಗಿ ಶತಕ ಬಾರಿಸುತ್ತಾರೆ ಎನ್ನುವ ಹೊತ್ತಿನಲ್ಲಿಯೇ ಪ್ರಫುಲ್‌ ಹಿಂಗೆ ಎಸೆತದಲ್ಲಿ ಕನ್ನಡಿಗ ಸಮ್ರಣ್‌ ರವಿಚಂದ್ರನ್‌ ಹಿಡಿದ ಕ್ಯಾಚ್‌ಗೆ ಬಲಿಯಾದರು.

12 ಸಿಕ್ಸರ್‌ ಸಿಡಿಸುವ ಮೂಲಕ ವೈಭವ್‌ ಸೂರ್ಯವಂಶಿ ಐಪಿಎಲ್‌ನ ನಾಕೌಟ್‌ ಪಂದ್ಯದಲ್ಲಿ ಗರಿಷ್ಠ ಸಿಕ್ಸರ್‌ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. 2023ರಲ್ಲಿ ಶುಭ್‌ಮನ್‌ ಗಿಲ್‌ ಅಹಮದಾಬಾದ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 10 ಸಿಕ್ಸರ್‌ ಸಿಡಿಸಿರುವುದು 2ನೇ ಸ್ಥಾನದಲ್ಲಿದ್ದರೆ, ಇದೇ ವರ್ಷದ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಆರ್‌ಸಿಬಿಯ ರಜತ್‌ ಪಟಿದಾರ್‌ ಗುಜರಾತ್‌ ಟೈಟನ್ಸ್‌ ವಿರುದ್ಧ 9 ಸಿಕ್ಸರ್‌ ಸಿಡಿಸಿರುವುದು ನಂತರದ ಸ್ಥಾನದಲ್ಲಿದೆ.

14 ವರ್ಷಗಳಿಂದ ಇದ್ದ ಗೇಲ್‌ ರೆಕಾರ್ಡ್‌ ಬ್ರೇಕ್‌

ಈ ಪಂದ್ಯದಲ್ಲಿ 12 ಸಿಕ್ಸರ್‌ ಸಿಡಿಸುವ ಮೂಲಕ ವೈಭವ್‌ ಸೂರ್ಯವಂಶಿ ಕಳೆದ 14 ವರ್ಷಗಳಿಂದ ಅಚಲವಾಗಿದ್ದ ಆರ್‌ಸಿಬಿಯ ಸ್ಟಾರ್‌ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅವರ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್‌ನ ಸೀಸನ್‌ ಒಂದರಲ್ಲಿ ಗರಿಷ್ಠ ಸಿಕ್ಸರ್‌ ಸಿಡಿಸಿದ ದಾಖಲೆ ಈವರೆಗೂ ಕ್ರಿಸ್‌ ಗೇಲ್‌ ಹೆಸರಲ್ಲಿತ್ತು. 2012ರ ಸೀಸನ್‌ನಲ್ಲಿ ಗೇಲ್‌ ಆಡಿದ 15 ಪಂದ್ಯದ 14 ಇನ್ನಿಂಗ್ಸ್‌ಗಳಿಂದ 59 ಸಿಕ್ಸರ್‌ ಸಿಡಿಸಿದ್ದರು. ಈ ಬಾರಿ ವೈಭವ್‌ ಸೂರ್ಯವಂಶಿ ಆಡಿದ 15 ಪಂದ್ಯಗಳ 15 ಇನ್ನಿಂಗ್ಸ್‌ಗಳಿಂದ 65 ಸಿಕ್ಸರ್‌ ಸಿಡಿಸಿದ್ದಾರೆ. ಆ ಮೂಲಕ ಗೇಲ್‌ ಹೆಸರಲ್ಲಿ ಐಪಿಎಲ್‌ನಲ್ಲಿದ್ದ ಅಪರೂಪದ ದಾಖಲೆಯನ್ನು ವೈಭವ್‌ ಮುರಿದಿದ್ದಾರೆ.

ಅರೆಂಜ್‌ ಕ್ಯಾಪ್‌ ಪಡೆದ ವೈಭವ್‌

ಇಷ್ಟು ಮಾತ್ರವಲ್ಲದೆ ತಮ್ಮ ಸ್ಪೋಟಕ ಇನ್ನಿಂಗ್ಸ್‌ನಿಂದ ಹಾಲಿ ಐಪಿಎಲ್‌ನಲ್ಲಿ ಆರೆಂಜ್‌ ಕ್ಯಾಪ್‌ ಪಡೆದುಕೊಂಡಿದ್ದಾರೆ. 15 ಪಂದ್ಯಗಳಿಂದ 1 ಶತಕ ಹಾಗೂ 4 ಅರ್ಧಶತಕದೊಂದಿಗೆ ವೈಭವ್‌ ಸೂರ್ಯವಂಶಿ 680 ರನ್‌ ಬಾರಿಸಿ ಅಗ್ರಸ್ಥಾನಕ್ಕೇರಿದ್ದರೆ, ಗುಜರಾತ್‌ ಟೈಟಾನ್ಸ್‌ನ ಸಾಯಿ ಸುದರ್ಶನ್‌ 652 ರನ್‌ಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.