2026ರ ಐಪಿಎಲ್ ಟೂರ್ನಿಗೆ ಸಿದ್ಧತೆಗಳು ನಡೆಯುತ್ತಿದ್ದು, ಮೂರು ಪ್ರಮುಖ ತಂಡಗಳು ತಮ್ಮ ನಾಯಕರನ್ನು ಬದಲಾಯಿಸುವ ಸಾಧ್ಯತೆಯಿದೆ. ಸಂಜು ಸ್ಯಾಮ್ಸನ್ ರಾಜಸ್ಥಾನ ತೊರೆಯುವ ಸಾಧ್ಯತೆಯಿದ್ದು, ರವೀಂದ್ರ ಜಡೇಜಾ ನಾಯಕರಾಗಬಹುದು.
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಮುಂಬರುವ ಡಿಸೆಂಬರ್‌ನಲ್ಲಿ 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜು ನಡೆಯಲಿದೆ. ಇನ್ನು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಇದೆ ನವೆಂಬರ್ 15 ಕೊನೆಯ ದಿನಾಂಕವಾಗಿದ್ದು, ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚಟುವಟಿಕೆಗಳು ಗರಿಗೆದರಿವೆ. ಇನ್ನು ಈ ಬಾರಿಯ ಹರಾಜು ಮುಕ್ತಾಯವಾಗುತ್ತಿದ್ದಂತೆಯೇ ಮೂರು ಐಪಿಎಲ್ ತಂಡಗಳಿಗೆ ಹೊಸ ನಾಯಕ ನೇಮಕವಾಗುವುದು ಬಹುತೇಕ ಖಚಿತ ಎನಿಸಿದೆ.
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಈ ಬಾರಿ ತಂಡ ತೊರೆಯುವುದು ಬಹುತೇಕ ಖಚಿತವಾಗಿದೆ. ಸಂಜು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹೊಸ ನಾಯಕನ ನೇಮಕವಾಗುವುದು ಶತಸಿದ್ದ ಎನಿಸಿಕೊಂಡಿದೆ.
ರಾಜಸ್ಥಾನ ರಾಯಲ್ಸ್‌ಗೆ ಹೊಸ ನಾಯಕ:
ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಳ್ಳಲು ಬದಲಿ ಆಟಗಾರರ ರೂಪದಲ್ಲಿ ಸ್ಯಾಮ್ ಕರ್ರನ್ ಹಾಗೂ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ನೀಡುತ್ತಿದೆ. ರಾಜಸ್ಥಾನ ರಾಯಲ್ಸ್ ಸೇರುವ ಮುನ್ನ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ತಮಗೆ ರಾಯಲ್ಸ್ ತಂಡದ ನಾಯಕತ್ವ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಮುಂಬರುವ ಆವೃತ್ತಿಯಲ್ಲಿ ಜಡ್ಡು ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾದರೇ ಅಚ್ಚರಿಯೇನಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್:
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಕ್ಷರ್ ಪಟೇಲ್ ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ ಡೆಲ್ಲಿ ಪ್ಲೇ ಆಫ್‌ಗೇರಲು ವಿಫಲವಾಗಿತ್ತು. ಟೂರ್ನಿಯಲ್ಲಿ ಸತತ ನಾಲ್ಕು ಗೆಲುವುಗಳೊಂದಿಗೆ ಶುಭಾರಂಭ ಮಾಡಿದ್ದ ಡೆಲ್ಲಿ ಆ ಬಳಿಕ ಮಂಕಾಗಿ ಹೋಯಿತು. ಅಕ್ಷರ್ ಪಟೇಲ್ ಆಟಗಾರನಾಗಿ ಗಮನ ಸೆಳೆದರೂ ನಾಯಕನಾಗಿ ತಮ್ಮ ಛಾಪು ಮೂಡಿಸಲು ವಿಫಲವಾದರು. ಹೀಗಾಗಿ ಡೆಲ್ಲಿ ಫ್ರಾಂಚೈಸಿ ಈ ಬಾರಿ ಕೆ ಎಲ್ ರಾಹುಲ್ ಇಲ್ಲವೇ ಹೊಸ ಆಟಗಾರನಿಗೆ ನಾಯಕ ಪಟ್ಟ ಕಟ್ಟುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಕೋಲ್ಕತಾ ನೈಟ್ ರೈಡರ್ಸ್:
ಶ್ರೇಯಸ್ ಅಯ್ಯರ್ 2025ರ ಐಪಿಎಲ್ ಟೂರ್ನಿಗೂ ಮುನ್ನ ಕೆಕೆಆರ್ ನಾಯಕತ್ವ ತೊರೆದ ಬಳಿಕ ಕೋಲ್ಕತಾ ನೈಟ್ ರೈಡರ್ಸ್ ಅಕ್ಷರಶಃ ನಾವಿಕನಿಲ್ಲದ ದೋಣಿಯಂತಾಗಿದೆ. ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್ ತಂಡವು ಕಳೆದ ಆವೃತ್ತಿಯಲ್ಲಿ ಮ್ಯಾಜಿಕ್ ಮಾಡಲು ವಿಫಲವಾಗಿತ್ತು. ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡವು 14 ಪಂದ್ಯಗಳನ್ನಾಡಿ ಕೇವಲ 5 ಪಂದ್ಯಗಳಲ್ಲಿ ಗೆಲ್ಲಲಷ್ಟೇ ಶಕ್ತವಾಗಿತ್ತು. ಹೀಗಾಗಿ ಈ ಬಾರಿ ಹರಾಜಿನ ಬಳಿಕ ಕೆಕೆಆರ್ ತಂಡದಲ್ಲಿ ಹೊಸ ನಾಯಕ ಕಾಣಿಸಿಕೊಳ್ಳುವುದು ಬಹುತೇಕ ಖಚಿತ.
