ದುಬೈನಲ್ಲಿ ನಡೆಯುತ್ತಿರುವ ಅಂಡರ್ 19 ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆರಂಭಿಕ ಆಘಾತ ಅನುಭವಿಸಿತು. ಕಳೆದ ಪಂದ್ಯದ ಶತಕವೀರ ವೈಭವ್ ಸೂರ್ಯವಂಶಿ ಅಲ್ಪ ಮೊತ್ತಕ್ಕೆ ಔಟಾದರು, ಆದರೆ ಆರೋನ್ ಜಾರ್ಜ್ ಅವರ 85 ರನ್‌ಗಳ ನೆರವಿನಿಂದ ಭಾರತ ಚೇತರಿಸಿಕೊಂಡು ಸ್ಪರ್ಧಾತ್ಮಕ ಮೊತ್ತದತ್ತ ಸಾಗಿತು.
ದುಬೈ: ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿಂದು ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಲಿಳಿದ ಭಾರತ ಯುವ ಪಡೆ ಆರಂಭಿಕ ಆಘಾತ ಅನುಭವಿಸಿದೆ. ಯುಎಇ ಎದುರಿನ ಅಂಡರ್ 19 ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ ಯುಎಇ ಎದುರು ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದ ವೈಭವ್ ಸೂರ್ಯವಂಶಿ, ಇದೀಗ ಪಾಕಿಸ್ತಾನ ಎದುರು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ.
ಪಾಕಿಸ್ತಾನ ಎದುರಿನ ಪಂದ್ಯಕ್ಕೂ ಮುನ್ನ ಎಲ್ಲರ ಚಿತ್ತ ವೈಭವ್ ಸೂರ್ಯವಂಶಿ ಅವರ ಮೇಲಿತ್ತು. ಆದರೆ ವೈಭವ್ ಸೂರ್ಯವಂಶಿ ಕೇವಲ 6 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಹತ್ವದ ಪಂದ್ಯದಲ್ಲಿ ಸೂರ್ಯವಂಶಿ ಸಾಧಾರಣ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ.
ಪಾಕಿಸ್ತಾನ ಎದುರು ವೈಭವ್ ಫೇಲ್:
ಭಾರತ ಹಾಗೂ ಪಾಕಿಸ್ತಾನ ನಡುವಿನ ಅಂಡರ್ 19 ಏಷ್ಯಾಕಪ್ ಪಂದ್ಯಕ್ಕೆ ದುಬೈನ ಐಸಿಸಿ ಅಕಾಡೆಮಿ ಗ್ರೌಂಡ್ ಆತಿಥ್ಯ ವಹಿಸಿತ್ತು. ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆರಂಭದಲ್ಲೇ ಬೌಂಡರಿ ಬಾರಿಸಿದ ವೈಭವ್ ಸೂರ್ಯವಂಶಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಅದರೆ ನಾಲ್ಕನೇ ಓವರ್‌ನಲ್ಲೇ ಸೂರ್ಯವಂಶಿ ಮೊಹಮ್ಮದ್ ಸಯ್ಯಮ್ ಬೌಲಿಂಗ್‌ನಲ್ಲಿ ಅವರಿಗೆ ಸುಲಭ ಕ್ಯಾಚಿತ್ತು ಪೆವಿಲಿಯನ್ ವಾಪಾಸ್ಸಾದರು.
ಸ್ಪರ್ಧಾತ್ಮಕ ಮೊತ್ತದತ್ತ ಭಾರತ ಯುವ ಪಡೆ ದಾಪುಗಾಲು:
ಇನ್ನು ವೈಭವ್ ಸೂರ್ಯವಂಶಿ ವಿಕೆಟ್ ಪತನದ ಬಳಿಕ ಎರಡನೇ ವಿಕೆಟ್‌ಗೆ ನಾಯಕ ಆಯುಷ್ ಮಾತ್ರೆ ಹಾಗೂ ಆರೋನ್ ಜಾರ್ಜ್ 49 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಇನ್ನು ಆಯುಷ್ 38 ರನ್ ಸಿಡಿಸಿ ಮಹಮ್ಮದ್ ಸಯ್ಯಮ್‌ಗೆ ಎರಡನೇ ಬಲಿಯಾದರು. ಇನ್ನು ಆರೋನ್ ಜಾರ್ಜ್ ಕೇವಲ 88 ಎಸೆತಗಳಲ್ಲಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 85 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಸದ್ಯ ಭಾರತ ಯುವ ಪಡೆ 33 ಓವರ್ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿದ್ದು, ಸ್ಪರ್ಧಾತ್ಮಕ ಮೊತ್ತ ಕಲೆಹಾಕುವತ್ತ ದಾಪುಗಾಲಿಡುತ್ತಿದೆ. ಸದ್ಯ ಕನಿಷ್ಕ ಚೌಹ್ಹಾಣ್(4) ಹಾಗೂ ಖಿಲಾನ್ ಪಟೇಲ್(5) ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.


