ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ ತಮ್ಮ ಮೂರು ದಿನಗಳ ಭಾರತ ಪ್ರವಾಸದ ಭಾಗವಾಗಿ ಮುಂಬೈಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸಚಿನ್ ತೆಂಡೂಲ್ಕರ್, ಸುನಿಲ್ ಛೆಟ್ರಿ ಅವರಂತಹ ಕ್ರೀಡಾ ದಿಗ್ಗಜರನ್ನು ಭೇಟಿಯಾಗಲಿದ್ದು, ಚಾರಿಟಿ ಫ್ಯಾಷನ್ ಶೋ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಮುಂಬೈ: ಅರ್ಜೆಂಟೀನಾದ ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಇದರ ಭಾಗವಾಗಿ ಮೊದಲಿಗೆ ಕೋಲ್ಕತಾಗೆ ಬಂದಿಳಿದ ಮೆಸ್ಸಿ, ಇದಾದ ನಂತರ ಹೈದರಾಬಾದ್ ತೆರಳಿದ್ದರು. ಹೈದರಾಬಾದ್‌ನಲ್ಲಿ ಪ್ರದರ್ಶನ ಪಂದ್ಯ ಹಾಗೂ ಕಾರ್ಯಕ್ರಮಗಳನ್ನು ಮುಗಿಸಿ, ಇದೀಗ ಎರಡನೇ ದಿನವಾದ ಇಂದು ಲಿಯೋನೆಲ್ ಮೆಸ್ಸಿ ಮುಂಬೈನಲ್ಲಿರಲಿದ್ದಾರೆ. ಮುಂಬೈನಲ್ಲಿ ಮೆಸ್ಸಿ ಹಲವು ಸೆಲಿಬ್ರಿಟಿಗಳನ್ನು ಭೇಟಿ ಮಾಡಲಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಲಿಯೋನೆಲ್ ಮೆಸ್ಸಿ, ಚಾರಿಟಿಗೋಸ್ಕರ್ ಒಂದು ಫ್ಯಾಷನ್ ಶೋ, ಕ್ರಿಕೆಟ್ ತಾರೆಗಳ ಜತೆ ಒಂದು ಪೆಡಲ್ ಮ್ಯಾಚ್ ಹಾಗೂ ಕೋಚಿಂಗ್ ಕ್ಲೀನಿಕ್ ಉದ್ಘಾಟಿಸಲಿದ್ದಾರೆ. ಇದನ್ನು ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಆಯೋಜನೆ ಮಾಡಿದೆ. ಇದಾದ ಬಳಿಕ ಲಿಯೋನೆಲ್ ಮೆಸ್ಸಿ, ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ.

ಸಚಿನ್ ಹಾಗೂ ಛೆಟ್ರಿ ಭೇಟಿಯಾಗಲಿರುವ ಮೆಸ್ಸಿ!

ಮಾಧ್ಯಮಗಳ ವರದಿಗಳ ಪ್ರಕಾರ, ಲಿಯೋನೆಲ್ ಮೆಸ್ಸಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಭಾರತದ ಫುಟ್ಬಾಲ್ ಲೆಜೆಂಡ್ ಸುನಿಲ್ ಛೆಟ್ರಿ ಅವರನ್ನು ಮುಂಬೈನಲ್ಲಿ ಭೇಟಿ ಮಾಡಲಿದ್ದಾರೆ. ಸಚಿನ್, ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಮೆಸ್ಸಿ ಅವರ ಜತೆ ಪ್ಯಾಡಲ್ ಮ್ಯಾಚ್ ಆಡಲಿದ್ದಾರೆ. ಇದಷ್ಟೇ ಅಲ್ಲದೇ ಟೀಂ ಇಂಡಿಯಾ ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ಮಹೇಂದ್ರ ಸಿಂಗ್ ಧೋನಿ ಕೂಡಾ, ಮುಂಬೈನಲ್ಲಿ ಮೆಸ್ಸಿಯವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನು ವಿರುಷ್ಕಾ ದಂಪತಿ ನಿನ್ನೆಯಷ್ಟೇ ಮುಂಬೈಗೆ ಬಂದಿಳಿದ್ದರು. ಆದರೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ, ಮೆಸ್ಸಿಯನ್ನು ಭೇಟಿಯಾಗುವ ಬಗ್ಗೆ ಯಾವುದೇ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.

ಫ್ಯಾಷನ್ ಶೋನಲ್ಲಿ ಭಾಗಿಯಾಗಲಿರುವ ಮೆಸ್ಸಿ!

ಇನ್ನು ಲಿಯೋನೆಲ್ ಮೆಸ್ಸಿ, ಮುಂಬೈನಲ್ಲಿ ಒಂದು ಚಾರಿಟಿಗಾಗಿ ಫ್ಯಾಷನ್ ಶೋನಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಬಾಲಿವುಡ್ ತಾರೆಯರಾದ ಜಾನ್ ಅಬ್ರಾಹಂ, ಕರೀನಾ ಕಪೂರ್ ಹಾಗೂ ಜಾಕಿ ಶ್ರಾಫ್, ಮೆಸ್ಸಿಗೆ ಸಾಥ್ ನೀಡಲಿದ್ದಾರೆ. ಈ ಫ್ಯಾಷನ್ ಶೋ ಕಾರ್ಯಕ್ರಮವು 45 ನಿಮಿಷಗಳ ಕಾಲ ನಡೆಯಲಿದೆ.

ಇನ್ನು ಕೋಲ್ಕತಾ ಹಾಗೂ ಹೈದರಾಬಾದ್‌ನಂತೆ ಲಿಯೋನೆಲ್ ಮೆಸ್ಸಿ, ವಾಂಖೆಡೆ ಸ್ಟೇಡಿಯಂನಲ್ಲಿ ಒಂದು ಕೋಚಿಂಗ್ ಕ್ಲೀನಿಕ್ ಉದ್ಘಾಟಿಸಲಿದ್ದಾರೆ.