2026ರ ಐಪಿಎಲ್ ಸೀಸನ್‌ಗೂ ಮುನ್ನ, ಕೋಲ್ಕತಾ ನೈಟ್ ರೈಡರ್ಸ್ ತಂಡವು ಆಸ್ಟ್ರೇಲಿಯಾದ ದಿಗ್ಗಜ ಆಲ್ರೌಂಡರ್ ಶೇನ್ ವಾಟ್ಸನ್ ಅವರನ್ನು ಸಹಾಯಕ ಕೋಚ್ ಆಗಿ ನೇಮಿಸಿದೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ವಾಟ್ಸನ್, ಇದೀಗ ಅಭಿಷೇಕ್ ನಾಯರ್ ನೇತೃತ್ವದ ಕೆಕೆಆರ್ ಕೋಚಿಂಗ್ ಬಳಗವನ್ನು ಸೇರಿಕೊಂಡಿದ್ದಾರೆ. 

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಎಲ್ಲಾ ಹತ್ತು ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಆಟಗಾರರ ರೀಟೈನ್ಷನ್‌ಗೆ ನವೆಂಬರ್ 15 ಡೆಡ್‌ಲೈನ್ ಆಗಿದ್ದು, ಎಲ್ಲಾ ಫ್ರಾಂಚೈಸಿಗಳು ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂದು ಅಳೆದುತೂಗಿ ಲೆಕ್ಕಾಚಾರ ಹಾಕುತ್ತಿವೆ. ಹೀಗಿರುವಾಗಲೇ ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಆಸ್ಟ್ರೇಲಿಯಾ ಮೂಲದ ದಿಗ್ಗಜ ಆಲ್ರೌಂಡರ್ ಶೇನ್ ವಾಟ್ಸನ್ ಅವರನ್ನು ಕರೆ ತಂದಿದೆ.

ಹೌದು, ಶೇನ್ ವಾಟ್ಸನ್ ಅವರನ್ನು ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮೊದಲೇ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹಾಯಕ ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ಈ ಮೊದಲು ಶೇನ್ ವಾಟ್ಸನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

Scroll to load tweet…

ಸದ್ಯ ಕೋಲ್ಕತಾ ನೈಟ್ ರೈಡರ್ಸ್ ತಂಡದ ಹೆಡ್ ಕೋಚ್ ಆಗಿ ಅಭಿಷೇಕ್ ನಾಯರ್ ಇತ್ತೀಚೆಗಷ್ಟೇ ನೇಮಕವಾಗಿದ್ದರು. ವಾಟ್ಸನ್ ಅವರಿಗೆ ಐಪಿಎಲ್‌ನಲ್ಲಿ ಆಟಗಾರನಾಗಿ ಹಾಗೂ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ ಅಪಾರ ಅನುಭವವಿದೆ. ಅಂದಹಾಗೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲ. 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡವು 14 ಪಂದ್ಯಗಳನ್ನಾಡಿ ಕೇವಲ 5 ಗೆಲುವು ಹಾಗೂ 7 ಸೋಲು ಕಾಣುವ ಮೂಲಕ ಲೀಗ್ ಹಂತದಲ್ಲಿಯೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು.

ಶೇನ್ ವಾಟ್ಸನ್ ಹೆಗಲೇರಿದ ಮಹತ್ವದ ಜವಾಬ್ದಾರಿ:

ಕೋಲ್ಕತಾ ನೈಟ್ ರೈಡರ್ಸ್ ತಂಡವು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದರಿಂದಾಗಿ ಕೋಚಿಂಗ್ ಸಿಬ್ಬಂದಿಗಳ ವಿಚಾರದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಕೆಕೆಆರ್ ಹೆಡ್‌ಕೋಚ್ ಆಗಿ ಅಭಿಷೇಕ್ ನಾಯರ್ ನೇಮಕವಾದರೇ, ಸಹಾಯಕ ಕೋಚ್ ಆಗಿ ಶೇನ್ ವಾಟ್ಸನ್ ಕಾರ್ಯ ನಿರ್ವಹಿಸಲಿದ್ದಾರೆ. ಶೇನ್ ವಾಟ್ಸನ್ ಈ ಮೊದಲು, ರಿಕಿ ಪಾಂಟಿಂಗ್ ಅವರಿಗೆ ಸಹಾಯಕರಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರು. ಇದೀಗ ಮೂರು ಬಾರಿಯ ಚಾಂಪಿಯನ್ ಕೆಕೆಆರ್ ತಂಡದ ಸಹಾಯಕ ಕೋಚ್ ಎನ್ನುವ ಮಹತ್ವದ ಜವಾಬ್ದಾರಿ ಆಸೀಸ್ ಕ್ರಿಕೆಟಿಗನ ಹೆಗಲೇರಿದೆ.

ಶೇನ್ ವಾಟ್ಸನ್ 12 ಆವೃತ್ತಿಗಳಲ್ಲಿ ವಿವಿಧ ಐಪಿಎಲ್ ತಂಡಗಳನ್ನು ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ. ಶೇನ್ ವಾಟ್ಸನ್, ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದಾರೆ. ಇನ್ನು ಕೆಕೆಆರ್ ತಂಡದ ಮೆಂಟರ್ ಆಗಿ ಡ್ವೇನ್ ಬ್ರಾವೋ ಅವರು ನೇಮಕವಾಗಿದ್ದಾರೆ.

ಹಲವು ಆಟಗಾರರಿಗೆ ಗೇಟ್‌ಪಾಸ್?

ಇನ್ನು 2024ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ದಶಕದ ಬಳಿಕ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಮರು ವರ್ಷವೇ ಶ್ರೇಯಸ್ ಅಯ್ಯರ್ ಕೆಕೆಆರ್ ತಂಡವನ್ನು ತೊರೆದಿದ್ದರು. ಅಜಿಂಕ್ಯ ರಹಾನೆ ಮಾರ್ಗದರ್ಶನದಲ್ಲಿ 2025ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನೀರಸ ಪ್ರದರ್ಶನ ತೋರಿ ಪ್ಲೇಆಫ್‌ಗೇರಲು ವಿಫಲವಾಗಿತ್ತು. ಹೀಗಾಗಿ ಮಿನಿ ಹರಾಜಿಗೂ ಮುನ್ನ ಕೆಲವು ಸ್ಟಾರ್ ಆಟಗಾರರಿಗೆ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ.

ಕೆಕೆಆರ್ ತಂಡವು ಈ ಬಾರಿಯ ಮಿನಿ ಹರಾಜಿಗೂ ಮುನ್ನ ನಾಯಕ ಅಜಿಂಕ್ಯ ರಹಾನೆ, 23.75 ಕೋಟಿ ರುಪಾಯಿಗೆ ತಂಡ ಕೂಡಿಕೊಂಡ ವೆಂಕಟೇಶ್ ಅಯ್ಯರ್ ಸೇರಿದಂತೆ ಹಲವು ಪ್ರಮುಖ ಆಟಗಾರರನ್ನು ಕೆಕೆಆರ್ ಫ್ರಾಂಚೈಸಿ ರಿಲೀಸ್ ಮಾಡಲಿದೆ ಎಂದು ವರದಿಯಾಗಿದೆ.