ಅಶಿಸ್ತಿನ ಕಾರಣಕ್ಕೆ ತಂಡದಿಂದ ಹೊರಬಿದ್ದು, ಕುಟುಂಬದ ಜವಾಬ್ದಾರಿಗಾಗಿ ಟ್ರಕ್ ಡ್ರೈವರ್ ಆಗಲು ನಿರ್ಧರಿಸಿದ್ದ ಯುವ ಕ್ರಿಕೆಟಿಗನಿಗೆ ಸೌರವ್ ಗಂಗೂಲಿ ಆಸರೆಯಾದರು. ಆಯ್ಕೆ ಸಮಿತಿಯ ವಿರೋಧದ ನಡುವೆಯೂ ತಂಡಕ್ಕೆ ಆಯ್ಕೆಯಾದ ಆ ಆಫ್ ಸ್ಪಿನ್ನರ್, 2001ರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹ್ಯಾಟ್ರಿಕ್ ಸಹಿತ 32 ವಿಕೆಟ್ ಪಡೆದು ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.
- ಸುದರ್ಶನ್, ಏಷ್ಯಾನೆಟ್ ಸುವರ್ಣ ನ್ಯೂಸ್
ಪಂಜಾಬ್‌ನ ಜಲಂಧರ್‌ನ ಆ ಮನೆಯ ಯಜಮಾನ ಸ್ವಾತಂತ್ರ್ಯ ಹೋರಾಟಗಾರ. ಅವರಿಗೊಬ್ಬ ಮಗ. ಐವರು ಹೆಣ್ಮು ಮಕ್ಕಳು. ಕ್ರಿಕೆಟ್ ಆಡುತ್ತಿದ್ದ ಮಗನಿಗೆ ತಂದೆಯ ಶ್ರೀರಕ್ಷೆ. ‘‘ನೀನು ಆಡು ಮಗನೇ.. ನಾನಿದ್ದೇನೆ ನಿನ್ನ ಜೊತೆ’’ ತಂದೆಯ ಅದೊಂದು ಮಾತು ಸಾಕಾಗಿತ್ತು ಅವನಿಗೆ. 17ನೇ ವರ್ಷಕ್ಕೆ ಭಾರತ ಪರ ಟೆಸ್ಟ್ ಆಡಿಬಿಟ್ಟ. ಟೆಸ್ಟ್ ಪದಾರ್ಪಣೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ.
ಹುಡುಗ ಮಹಾ ಮುಂಗೋಪಿ. ಒಂದು ಕಡೆ ಬೌಲಿಂಗ್ ಆ್ಯಕ್ಷನ್’ನಲ್ಲಿ ಲೋಪ. ಮತ್ತೊಂದು ಕಡೆ ಮೂಗಿನ ತುದಿಯಲ್ಲೇ ಕೋಪ. ಬೌಲಿಂಗ್’ನಲ್ಲಿ ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಭಾರತ ತಂಡದಿಂದ ಹೊರ ಬಿದ್ದವನು ಕೋಪದ ಕೈಗೆ ಬುದ್ಧಿ ಕೊಟ್ಟು ತನ್ನ ತಲೆ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡ.
ಅಶಿಸ್ತಿನಿಂದಾಗಿ ಎನ್‌ಸಿಎನಿಂದ ಹೊರಾಬಿದ್ದಿದ್ದ ಭಜ್ಜಿ
ಅಶಿಸ್ತಿನ ಕಾರಣಕ್ಕೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಹೊರ ಬಿದ್ದವನು ಜಲಂಧರ್’ಗೆ ಮರಳಿದ. ಕೆಲವೇ ತಿಂಗಳುಗಳಲ್ಲಿ ತಂದೆಯನ್ನು ಕಳೆದುಕೊಂಡ. ಇಡೀ ಕುಟುಂಬದ ಆಸರೆಯೇ ಅಲುಗಾಡಿ ಬಿಟ್ಟಿತು. ಐವರು ಅಕ್ಕ ತಂಗಿಯರು. ಅಸಹಾಯಕ ತಾಯಿ. ಕ್ರಿಕೆಟ್ ಬಿಟ್ಟು ಕುಟುಂಬದ ಜವಾಬ್ದಾರಿಗೆ ಹೆಗಲು ಕೊಡಲೇಬೇಕಾದ ಪರಿಸ್ಥಿತಿ. ಕೆನಡಾಗೆ ತೆರಳಿ ಟ್ರಕ್ ಓಡಿಸುವುದೆಂದು ನಿರ್ಧರಿಸಿದ. ಆದರೆ ಮಗ ಕ್ರಿಕೆಟಿಗನಾಗಬೇಕೆಂಬುದು ತಂದೆಯ ಕನಸು. ಆದರೆ ಮನೆಯ ಪರಿಸ್ಥಿತಿ ಆ ಕನಸಿಗೆ ಪೂರಕವಾಗಿರಲಿಲ್ಲ. ಹೇಗೋ ಸಂಭಾಳಿಸಿದ. ಕ್ರಿಕೆಟ್ ಮೈದಾನಕ್ಕೆ ಮರಳಿದ.
ಭಾರತೀಯ ಕ್ರಿಕೆಟ್’ಗೆ ಮ್ಯಾಚ್ ಫಿಕ್ಸಿಂಗ್ ಬಿರುಗಾಳಿ ಅಪ್ಪಳಿಸಿ ಇಡೀ ಕ್ರಿಕೆಟ್ ವ್ಯವಸ್ಥೆಯ ಬುನಾದಿ, ನಂಬಿಕೆಯೇ ಅಲುಗಾಡಿದ್ದ ಸಮಯ. ಮ್ಯಾಚ್ ಫಿಕ್ಸಿಂಗ್ ಕಳಂಕ ಹೊತ್ತು ಭಾರತ ತಂಡದಿಂದ ಹೊರ ಬಿದ್ದಿದ್ದ ಆಗಿನ ಯಶಸ್ವಿ ನಾಯಕ ಮೊಹಮ್ಮದ್ ಅಜರುದ್ದೀನ್. ಕತ್ತಲು ಕವಿದ ಕ್ರಿಕೆಟ್ ತಂಡಕ್ಕೆ ಆಗ ಬೇಕಿದ್ದದ್ದು ನಾಯಕನಲ್ಲ, ಲೀಡರ್. ಹಾಗೆ ಲೀಡರ್ ರೂಪದಲ್ಲಿ ಸಿಕ್ಕವರು ಬಂಗಾಳದ ಮಹಾರಾಜ ಸೌರವ್ ಗಂಗೂಲಿ.
ಭಾರತ ತಂಡದ ನಾಯಕನಾಗುತ್ತಿದ್ದಂತೆ ಹೊಸ ಹುಡುಗರ ಹುಡುಕಾಟಕ್ಕಿಳಿದು ಬಿಟ್ಟರು ದಾದಾ. ಲೆಗ್ ಸ್ಪಿನ್ನರ್ ಆಗಿ ಗಂಗೂಲಿ ಬತ್ತಳಿಕೆಯಲ್ಲಿ ಅನಿಲ್ ಕುಂಬ್ಳೆ ಎಂಬ ಬ್ರಹ್ಮಾಸ್ತವೇ ಇತ್ತು. ಒಬ್ಬ ಒಳ್ಳೆಯ ಆಫ್’ಸ್ಪಿನ್ನರ್’ನ ಹುಡುಕಾಟದಲ್ಲಿದ್ದರು ಗಂಗೂಲಿ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬಂದಿದ್ದ ದಾದಾ ಅಭ್ಯಾಸಕ್ಕೆಂದು ಮೈದಾನಕ್ಕಿಳಿದವರು ನಿಂತಲ್ಲೇ ನಿಂತು ಬಿಡುತ್ತಾರೆ. ಅಲ್ಲೊಬ್ಬ ತಲೆಗೆ ಪಂಜಾಬಿ ಪೇಟ ಕಟ್ಟಿಕೊಂಡಿದ್ದ ಚಿಗುರು ಮೀಸೆಯ ಹುಡುಗ ಬೌಲಿಂಗ್ ಮಾಡುತ್ತಿದ್ದ.
ಅವನ ಆಫ್’ಸ್ಪಿನ್ ಬೌಲಿಂಗ್’ನಲ್ಲಿದ್ದ ಬೌನ್ಸ್ ಸೌರವ್ ಗಂಗೂಲಿಯವರನ್ನು ಅತ್ತ ಸೆಳೆದು ಬಿಡುತ್ತದೆ. ಸ್ಪಿನ್+ಬೌನ್ಸ್ ಯಾವಾಗಲೂ ಡೆಡ್ಲಿ ಕಾಂಬಿನೇಶನ್. ಎದುರಲ್ಲಿ ನಿಂತಿದ್ದ ಬ್ಯಾಟರ್ ಅವನ ಎಸೆತಗಳ ಮುಂದೆ ತಡಬಡಾಯಿಸುತ್ತಿದ್ದ. ಅಷ್ಟು ಸಾಕಿತ್ತು ದಾದಾಗೆ. ಇವನು ಟೆಸ್ಟ್ ಆಡಲು ಸಿದ್ಧನಿದ್ದಾನೆ ಎಂದು ನಿರ್ಧರಿಸಿದವರೇ ಮುಂದಿನ ಟೆಸ್ಟ್ ಸರಣಿಗೆ ಅವನನ್ನು ಆಡಿಸಲೇಬೇಕೆಂದು ಹಠಕ್ಕೆ ಬೀಳುತ್ತಾರೆ.
ಹಠ ಹಿಡಿದು ಭಜ್ಜಿಯನ್ನು ತಂಡಕ್ಕೆ ಸೇರಿಸಿಕೊಂಡಿದ್ದ ದಾದಾ
ಗಂಗೂಲಿ ಹೇಳಿದ ಹೊಸ ಹುಡುಗನ ಹೆಸರು ಕೇಳಿ ಆಯ್ಕೆ ಸಮಿತಿ ವಿರೋಧ ಮಾಡುತ್ತದೆ. ಕಾರಣ, ಅವನ ಬೆನ್ನಿಗಂಟಿಕೊಂಡಿದ್ದ ಟ್ರ್ಯಾಕ್ ರೆಕಾರ್ಡ್. ಅಶಿಸ್ತಿನ ಕಾರಣಕ್ಕೆ ಅವನನ್ನು ಒಮ್ಮೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಮನೆಗೆ ಕಳುಹಿಸಲಾಗಿತ್ತು. ಆ ಸಮಯದಲ್ಲಿ ಪಂಜಾಬ್ ತಂಡದಲ್ಲೂ ಅವನಿಗೆ ಸ್ಥಾನವಿರಲಿಲ್ಲ. ರಾಜ್ಯ ತಂಡಕ್ಕೇ ಬೇಡವಾದವನನ್ನು ರಾಷ್ಟ್ರೀಯ ತಂಡಕ್ಕೆ ಆಡಿಸುತ್ತೇನೆ ಎಂದರೆ ಆ ವಿರೋಧದಲ್ಲಿ ಅರ್ಥವಿತ್ತು. ಆದರೆ ಅವನಲ್ಲೊಂದು ಕಿಚ್ಚನ್ನು ಕಂಡಿದ್ದರು ದಾದಾ. ಗಂಗೂಲಿಯದ್ದು ಹಿಡಿದ ಹಠವನ್ನು ಸಾಧಿಸುವವರೆಗೆ ಬಿಡುವ ಜಾಯಮಾನವೇ ಅಲ್ಲ.
‘‘ಯಾರನ್ನು ಆಯ್ಕೆ ಮಾಡಲು ಹೇಳುತ್ತಿರುವಿರಿ ನೀವು..? ಇವನನ್ನು ಆಡಿಸಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಸಾಧ್ಯ ಎಂದುಕೊಂಡಿದ್ದೀರಾ’’ ನಾಲ್ಕು ಗೋಡೆಗಳ ಮಧ್ಯೆ ಪ್ರಶ್ನಿಸಿದವರಿಗೆ ಸೌರವ್ ಗಂಗೂಲಿ ಹೇಳಿದ್ದು ಒಂದೇ ಮಾತು. ‘‘ಅವನ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇದೆ, ನನ್ನ ಮೇಲೆ ನೀವು ನಂಬಿಕೆ ಇಡಿ’’
ದಾದಾ ಆಡಿದ ಮಾತಿನಲ್ಲಿ ಅಧಿಕಾರಯುತ ಧಾಟಿಯಿತ್ತು. ಮುಂದಿನದ್ದು ಚರಿತ್ರೆ. ತಲೆಗೆ ಟರ್ಬನ್ ಸುತ್ತಿಕೊಂಡಿದ್ದ ಅಹಂಕಾರದ ಹುಡುಗ ಅಹಂಕಾರವನ್ನೇ ತಲೆ ಮೆಟ್ಟಿ ಬಿಟ್ಟ. ನೆನಪಿದೆಯೇ 2001ರ ಆ ಟೆಸ್ಟ್ ಸರಣಿ..?. ಟೆಸ್ಟ್ ಕ್ರಿಕೆಟ್’ನಲ್ಲಿ ನಮ್ಮನ್ನು ಮುಟ್ಟುವವರು ಯಾರೂ ಇಲ್ಲ ಎಂದು ಮರೆಯುತ್ತಿದ್ದ ಸ್ಟೀವ್ ವ್ಹಾ ಸಾರಥ್ಯದ ಆಸ್ಟ್ರೇಲಿಯಾ ತಂಡ ಟೆಸ್ಟ ಸರಣಿಯನ್ನಾಡಲು ಭಾರತಕ್ಕೆ ಬಂದಿತ್ತು. ಹೆಸರಿಗೆ ತಕ್ಕಂತೆ ಆಡಿ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡವನ್ನು ಹೊಸಕಿ ಹಾಕಿ ಬಿಟ್ಟಿತು ಕಾಂಗರೂ ಪಡೆ. ಕೋಲ್ಕತಾದ ಈಡನ್ ಗಾರ್ಡನ್ಸ್’ನಲ್ಲಿ ಎರಡನೇ ಟೆಸ್ಟ್ ಪಂದ್ಯ. ಆಸ್ಟ್ರೇಲಿಯನ್ನರ ಅಹಂಕಾರವನ್ನು ಅಡಗಿಸಿದವನು ಹರ್ಭಜನ್ ಸಿಂಗ್.
ಮೂರು ಕಾರಣಗಳಿಗೆ ನೆನಪಿನಲ್ಲುಳಿದ ಟೆಸ್ಟ್ ಪಂದ್ಯವರು. ಫಾಲೋ ಆನ್ ಸುಳಿಯಿಂದ ಮೇಲೆದ್ದು ಕಾಂಗರೂಗಳನ್ನು ಹೆಡೆಮುರಿ ಕಟ್ಟಿದ್ದು ಒಂದು ಕಾರಣ.. ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರ ಐತಿಹಾಸಿಕ ಜೊತೆಯಾಟ ಎರಡನೇ ಕಾರಣ. ಮೂರನೇ ಕಾರಣ, ಹರ್ಭಜನ್ ಸಿಂಗ್ ಮಾಂತ್ರಿಕ ಸ್ಪಿನ್ ಬೌಲಿಂಗ್. ಆ ಪಂದ್ಯದಲ್ಲಿ ಹ್ಯಾಟ್ರಿಕ್ ಸಹಿತ 13 ವಿಕೆಟ್’ಗಳನ್ನು ಉಡಾಯಿಸಿ ಬಿಟ್ಟ ಭಜ್ಜಿ. ಮುಂದಿನ ಚೆನ್ನೈ ಟೆಸ್ಟ್ ಪಂದ್ಯದಲ್ಲಿ 15 ವಿಕೆಟ್. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 32 ವಿಕೆಟ್.
ಸೌರವ್ ಗಂಗೂಲಿ ತನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಹರ್ಭಜನ್ ಸಿಂಗ್ ಉಳಿಸಿಕೊಂಡಿದ್ದ. ಅಲ್ಲಿಂದ ಭಾರತ ತಂಡದ ಜೊತೆ 15 ವರ್ಷಗಳ ಪ್ರಯಾಣ. ರವಿಚಂದ್ರನ್ ಅಶ್ವಿನ್ ಪ್ರವರ್ಧಮಾನಕ್ಕೆ ಬರುವವರೆಗೆ ಕರ್ನಾಟಕದ ದಂತಕಥೆ ಎರಾಪಳ್ಳಿ ಪ್ರಸನ್ನ ಅವರ ನಂತರ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಆಫ್’ಸ್ಪಿನ್ನರ್ ಹರ್ಭಜನ್ ಸಿಂಗ್. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 711 ವಿಕೆಟ್’ಗಳು. ಟೆಸ್ಟ್ ಕ್ರಿಕೆಟ್’ನಲ್ಲಿ ಎರಡು ಶತಕಗಳು. ಪ್ರಥಮ ದರ್ಜೆ+ಲಿಸ್ಟ್ ಎ+ಟಿ20 ಕ್ರಿಕೆಟ್ ಸೇರಿ ವೃತ್ತಿಪರ ಕ್ರಿಕೆಟ್’ನಲ್ಲಿ 1408 ವಿಕೆಟ್’ಗಳು. ಭಾರತಕ್ಕೆ ಐತಿಹಾಸಿಕ ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಟ್ಟ ಮ್ಯಾಚ್ ವಿನ್ನರ್. 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯ.


