ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಸಿಕ್ಸರ್‌ಗಳ ಮೂಲಕ ಛಾಪು ಮೂಡಿಸಿದ ಐದು ಪ್ರಸಿದ್ಧ ನಾಯಕರನ್ನು ಈ ಲೇಖನ ಪರಿಚಯಿಸುತ್ತದೆ. ಮಿಸ್ಬಾ-ಉಲ್-ಹಕ್, ಬ್ರೆಂಡನ್ ಮೆಕಲಮ್, ಎಂ.ಎಸ್. ಧೋನಿ, ಬ್ರಿಯಾನ್ ಲಾರಾ, ಮತ್ತು ಕ್ಲೈವ್ ಲಾಯ್ಡ್ ಅವರ ನಾಯಕತ್ವದ ಅವಧಿಯಲ್ಲಿನ ರನ್, ಸಿಕ್ಸರ್, ಮತ್ತು ಶತಕಗಳ ವಿವರವಾದ ವರದಿಯನ್ನು ಇಲ್ಲಿ ನೀಡಲಾಗಿದೆ.
ಟೆಸ್ಟ್ ಕ್ರಿಕೆಟ್ ಎಂದರೆ ತಕ್ಷಣ ನೆನಪಿಗೆ ಬರುವುದು ತಾಳ್ಮೆ, ಶಾಂತತೆ ಮತ್ತು ಕ್ರೀಸ್‌ನಲ್ಲಿ ಗಂಟೆಗಟ್ಟಲೆ ನಿಂತು ರನ್ ಗಳಿಸುವ ಸಾಂಪ್ರದಾಯಿಕ ಶೈಲಿ. ಆದರೆ ನಾಯಕತ್ವದ ಭಾರ ಹೊತ್ತ ಮೇಲೆಯೂ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಧೈರ್ಯ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸಿದ ಕೆಲವು ನಾಯಕರಿದ್ದಾರೆ. ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆ ಗೈದು ಟೆಸ್ಟ್ ಕ್ರಿಕೆಟ್‌ಗೆ ಹೊಸ ಮೆರುಗು ನೀಡಿದ ಇಂತಹ ಐದು ಪ್ರಸಿದ್ಧ ನಾಯಕರ ಪಟ್ಟಿ ಹಾಗೂ ಅವರ ರನ್ ಸಂಕಲನದ ವರದಿ ಇಲ್ಲಿದೆ.
ಪಟ್ಟಿಯಲ್ಲಿ ಇರುವ ನಾಯಕರು ಯಾರು?
ಈ ಪಟ್ಟಿಯಲ್ಲಿ ಪಾಕಿಸ್ತಾನದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಿಸ್ಬಾ-ಉಲ್-ಹಕ್ ಪ್ರಥಮ ಸ್ಥಾನದಲ್ಲಿದ್ದಾರೆ. ಸಾಮಾನ್ಯವಾಗಿ ತಮ್ಮ ನಿಧಾನಗತಿಯ ಬ್ಯಾಟಿಂಗ್ ಶೈಲಿಯಿಂದಾಗಿ "ಟಕ್-ಟಕ್" ಎಂದು ಕರೆಯಲ್ಪಡುತ್ತಿದ್ದ ಮಿಸ್ಬಾ, ಒಮ್ಮೆ ಸಿಡಿದು ನಿಂತರೆ ದಾಖಲೆಗಳನ್ನೇ ನಿರ್ಮಿಸುತ್ತಿದ್ದರು. 2010 ರಿಂದ 2017 ರ ಅವಧಿಯಲ್ಲಿ 56 ಟೆಸ್ಟ್ ಪಂದ್ಯಗಳ 99 ಇನ್ನಿಂಗ್ಸ್‌ಗಳಲ್ಲಿ ಪಾಕಿಸ್ತಾನವನ್ನು ಮುನ್ನಡೆಸಿದ ಇವರು, 17 ಬಾರಿ ಅಜೇಯರಾಗಿ ಉಳಿದು 51.39 ರ ಅತ್ಯುತ್ತಮ ಸರಾಸರಿಯಲ್ಲಿ 4,214 ರನ್ ಗಳಿಸಿದರು. ಈ ಅವಧಿಯಲ್ಲಿ 8 ಶತಕ ಮತ್ತು 35 ಅರ್ಧಶತಕ ಬಾರಿಸಿದ ಮಿಸ್ಬಾ, ನಾಯಕನಾಗಿ ಒಟ್ಟು 72 ಸಿಕ್ಸರ್ ಮತ್ತು 405 ಬೌಂಡರಿಗಳನ್ನು ಸಿಡಿಸಿದ್ದಾರೆ. 135 ರನ್ ನಾಯಕನಾಗಿ ಇವರ ಗರಿಷ್ಠ ಸ್ಕೋರ್ ಆಗಿದೆ.
ದ್ವಿತೀಯ ಸ್ಥಾನದಲ್ಲಿ ಮೆಕಲಮ್!
ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಹೊಸ ಭಾಷ್ಯ ಬರೆದ ಮೆಕಲಮ್, 2013 ರಿಂದ 2016 ರ ನಡುವೆ ಕೇವಲ 31 ಟೆಸ್ಟ್ ಪಂದ್ಯಗಳ 54 ಇನ್ನಿಂಗ್ಸ್‌ಗಳಲ್ಲಿ ತಂಡದ ನೇತೃತ್ವ ವಹಿಸಿದ್ದರು. ಕೇವಲ 31 ಪಂದ್ಯಗಳಲ್ಲೇ 45.28 ರ ಸರಾಸರಿಯಲ್ಲಿ 2,355 ರನ್ ಗಳಿಸಿದ ಇವರು, ನಾಯಕನಾಗಿ 59 ಸಿಕ್ಸರ್ ಹಾಗೂ 281 ಬೌಂಡರಿಗಳನ್ನು ಬಾರಿಸಿದರು. ಇವರ ನಾಯಕತ್ವದಲ್ಲಿ 6 ಶತಕ ಮತ್ತು 7 ಅರ್ಧಶತಕಗಳು ದಾಖಲಾಗಿದ್ದು, ಇದರಲ್ಲಿ ಇತಿಹಾಸ ನಿರ್ಮಿಸಿದ 302 ರನ್‌ಗಳ ತ್ರಿಶತಕವೂ ಸೇರಿದೆ.
3ನೇ ಸ್ಥಾನದಲ್ಲಿ ಧೋನಿ!
ಭಾರತೀಯ ಕ್ರಿಕೆಟ್ ಅನ್ನು ಯಶಸ್ಸಿನ ತುತ್ತತುದಿಗೆ ಕೊಂಡೊಯ್ದ ಮಹೇಂದ್ರ ಸಿಂಗ್ ಧೋನಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. 2008 ರಿಂದ 2014 ರವರೆಗೆ ಭಾರತದ 60 ಟೆಸ್ಟ್ ಪಂದ್ಯಗಳ 96 ಇನ್ನಿಂಗ್ಸ್‌ಗಳಲ್ಲಿ ನಾಯಕತ್ವ ವಹಿಸಿದ್ದ ಧೋನಿ, 40.63 ರ ಸರಾಸರಿಯಲ್ಲಿ 3,454 ರನ್ ಬಾರಿಸಿದ್ದಾರೆ. ಭಾರತದ ನಾಯಕನಾಗಿ ಟೆಸ್ಟ್ ಮಾದರಿಯಲ್ಲಿ 51 ಸಿಕ್ಸರ್ ಮತ್ತು 368 ಬೌಂಡರಿಗಳನ್ನು ಬಾರಿಸಿದ ಕೀರ್ತಿ ಇವರಿಗಿದೆ. ಧೋನಿ ನಾಯಕನಾಗಿ 5 ಶತಕ ಮತ್ತು 24 ಅರ್ಧಶತಕಗಳನ್ನು ಬಾರಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ಗಳಿಸಿದ 224 ರನ್‌ಗಳ ದ್ವಿಶತಕ ಇವರ ಅತ್ಯುತ್ತಮ ಸಾಧನೆಯಾಗಿದೆ.
4 ನೇ ಸ್ಥಾನದಲ್ಲಿ ಬ್ರಿಯಾನಾ ಲಾರಾ!
ವಿಶ್ವ ಕ್ರಿಕೆಟ್‌ನ ದಂತಕಥೆ ಮತ್ತು ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್ ಲಾರಾ ನಾಲ್ಕನೇ ಸ್ಥಾನದಲ್ಲಿದ್ದಾರೆ. 1997 ರಿಂದ 2006 ರ ಅವಧಿಯಲ್ಲಿ ವೆಸ್ಟ್ ಇಂಡೀಸ್‌ನ 47 ಟೆಸ್ಟ್ ಪಂದ್ಯಗಳ 85 ಇನ್ನಿಂಗ್ಸ್‌ಗಳಲ್ಲಿ ತಂಡವನ್ನು ಮುನ್ನಡೆಸಿದ ಲಾರಾ, 57.83 ರ ಅದ್ಭುತ ಸರಾಸರಿಯಲ್ಲಿ 4,685 ರನ್ ಗಳಿಸಿದರು. ನಾಯಕನಾಗಿ 49 ಸಿಕ್ಸರ್ ಮತ್ತು 620 ಬೌಂಡರಿಗಳನ್ನು ಸಿಡಿಸಿದ ಲಾರಾ, 14 ಶತಕ ಹಾಗೂ 19 ಅರ್ಧಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನೊಬ್ಬ ಗಳಿಸಿದ ಅತ್ಯುನ್ನತ ವೈಯಕ್ತಿಕ ಸ್ಕೋರ್ (400 ನಾಟ್ ಔಟ್) ದಾಖಲೆ ಇಂದಿಗೂ ಲಾರಾ ಹೆಸರಿನಲ್ಲೇ ಇದೆ.
5 ನೇ ಸ್ಥಾನದಲ್ಲಿ ಕ್ಲೈವ್ ಲಾಯ್ಡ್!
ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಸುವರ್ಣ ಯುಗದ ನಾಯಕ ಕ್ಲೈವ್ ಲಾಯ್ಡ್ ಈ ಐತಿಹಾಸಿಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. 1974 ರಿಂದ 1985 ರ ನಡುವೆ ಸುದೀರ್ಘ 74 ಟೆಸ್ಟ್ ಪಂದ್ಯಗಳ 111 ಇನ್ನಿಂಗ್ಸ್‌ಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಿದ ಇವರು, 51.30 ರ ಸರಾಸರಿಯಲ್ಲಿ 5,233 ರನ್ ಗಳಿಸಿದರು. ತಮ್ಮ ಸುದೀರ್ಘ ನಾಯಕತ್ವದ ಅವಧಿಯಲ್ಲಿ ಲಾಯ್ಡ್ 48 ಸಿಕ್ಸರ್ ಮತ್ತು 517 ಕ್ಕೂ ಹೆಚ್ಚು ಬೌಂಡರಿಗಳನ್ನು ಜಡಿದರು. ನಾಯಕನಾಗಿ 14 ಶತಕ ಮತ್ತು 27 ಅರ್ಧಶತಕಗಳನ್ನು ಗಳಿಸಿದ ಲಾಯ್ಡ್ ಅವರ ಗರಿಷ್ಠ ಸ್ಕೋರ್ 242 ರನ್ ಆಗಿದೆ.


