ಒಂದು ವಾರದಲ್ಲಿ 11 ಕೋಟಿ ರೂ ದೇಣಿಗೆ ಸಂಗ್ರಹಿಸಿದ ವಿರುಷ್ಕಾ ಜೋಡಿ..!
* ಕೆಟ್ಟೋ ಸಹಭಾಗಿತ್ವದಲ್ಲಿ ಒಂದೇ ವಾರದಲ್ಲಿ 11 ಕೋಟಿ ರುಪಾಯಿ ಸಂಗ್ರಹಿಸಿದ ವಿರುಷ್ಕಾ ಜೋಡಿ
* ಕೋವಿಡ್ ವಿರುದ್ದದ ಹೋರಾಟಕ್ಕೆ ಧುಮುಕಿದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ
* ದೇಣಿಗೆ ನೀಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ವಿರುಷ್ಕಾ ದಂಪತಿ
ನವದೆಹಲಿ(ಮೇ.14): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಜತೆಯಾಗಿ ಕೋವಿಡ್ ವಿರುದ್ದದ ಹೋರಾಟಕ್ಕೆ ಕೇವಲ ಒಂದೇ ವಾರದಲ್ಲಿ ನಿರೀಕ್ಷೆಗೂ ಮೀರಿ ದೇಣಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. 7 ದಿನಗಳಲ್ಲಿ ಸಂಗ್ರಹವಾದ ಹಣವನ್ನು ಆಕ್ಸಿಜನ್ ಸಿಲಿಂಡರ್, ವೈದ್ಯಕೀಯ ಸೌಲಭ್ಯ, ಟೆಲಿ ಮೆಡಿಸಿನ್ ಪೂರೈಸಲು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ
14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಅನಿರ್ದಿಷ್ಟಾವಧಿಗೆ ಮುಂದೂಡಿದ ಹಿನ್ನೆಲೆಯಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಕೋವಿಡ್ ವಿರುದ್ದದ ಹೋರಾಟಕ್ಕೆ 2 ಕೋಟಿ ರುಪಾಯಿ ದೇಣಿಗೆ ನೀಡಿದ್ದರು. ಇಷ್ಟಕ್ಕೆ ಸುಮ್ಮನಾಗದ ವಿರುಷ್ಕಾ ಜೋಡಿ, ಕೆಟ್ಟೋ ಸಹಭಾಗಿತ್ವದಲ್ಲಿ ಕಳೆದ ಶನಿವಾರ(ಮೇ.7)ದಿಂದ ಒಂದು ವಾರದ ಅವಧಿಯಲ್ಲಿ ಕನಿಷ್ಠ 7 ಕೋಟಿ ರುಪಾಯಿ ಸಂಗ್ರಹಿಸುವ ಗುರಿ ಹೊಂದಿ ಅಭಿಯಾನ ಆರಂಭಿಸಿದ್ದರು. ವಿರುಷ್ಕಾ ಜೋಡಿ ಆರಂಭಿಸಿದ ಈ ಅಭಿಯಾನಕ್ಕೆ ಮೊದಲ ದಿನವೇ ಮೂರುವರೆ ಕೋಟಿ ರುಪಾಯಿ ಹರಿದು ಬರುವ ಮೂಲಕ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಕೋವಿಡ್ ಪರಿಹಾರ ನಿಧಿಗೆ ವಿರುಷ್ಕಾ 2 ಕೋಟಿ ರೂ ದೇಣಿಗೆ, 7 ಕೋಟಿ ಸಂಗ್ರಹಿಸುವ ಗುರಿ
ಇದೀಗ 7 ದಿನಗಳ ಅಂತರದಲ್ಲಿ ವಿರುಷ್ಕಾ ಜೋಡಿ ಬರೋಬ್ಬರಿ 11 ಕೋಟಿ 39 ಲಕ್ಷದ 11 ಸಾವಿರದ 820 ರುಪಾಯಿ(11,39,11,820 ರುಪಾಯಿ) ದೇಣಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಸಮಾಜಮುಖಿ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಿರುಷ್ಕಾ ದಂಪತಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ನಮ್ಮ ಗುರಿಯನ್ನು ಎರಡರಷ್ಟು ತಲುಪಿದ್ದೇವೆ. ನೀವು ತೋರಿದ ಬೆಂಬಲವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಹೃದಯ ತುಂಬಿ ಬಂದಿದೆ. ಈ ಅಭಿಯಾನಕ್ಕೆ ದೇಣಿಗೆ ನೀಡಿದ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಅನಂತ ಧನ್ಯವಾದಗಳು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡಾ ದೇಶದ ಜನತೆಗೆ ಧನ್ಯವಾದಗಳನ್ನು ಅರ್ಪಿಸಿದ್ದು, ನೀವಿಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.