ಕೋವಿಡ್ ಪರಿಹಾರ ನಿಧಿಗೆ ವಿರುಷ್ಕಾ 2 ಕೋಟಿ ರೂ ದೇಣಿಗೆ, 7 ಕೋಟಿ ಸಂಗ್ರಹಿಸುವ ಗುರಿ
ಇಡೀ ದೇಶವೇ ಎರಡನೇ ಹಂತದ ಕೋವಿಡ್ ಅಲೆ ಎದುರು ಸಮರೋಪಾದಿಯಲ್ಲಿ ಹೋರಾಡುತ್ತಿದೆ. ಈ ಸಂದರ್ಭದಲ್ಲಿ ವಿರುಷ್ಕಾ ದಂಪತಿ 2 ಕೋಟಿ ರುಪಾಯಿ ಕೋವಿಡ್ ಪರಿಹಾರ ನಿಧಿಗೆ ಅರ್ಪಿಸಿದ್ದು, ಕೆಟ್ಟೋ ಮೂಲಕ 7 ಕೋಟಿ ರುಪಾಯಿ ದೇಣಿಗೆ ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.07):ಇಡೀ ದೇಶವೇ ಕೋವಿಡ್ ಎರಡನೇ ಅಲೆಯ ವಿರುದ್ದ ಹೋರಾಟ ನಡೆಸುತ್ತಿದೆ. ಹೀಗಿರುವಾಗಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಈ ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಧಾವಿಸಿದ್ದು, ಕೋವಿಡ್ ಪರಿಹಾರ ನಿಧಿಗೆ 2 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ.
ಬಯೋ ಬಬಲ್‌ನೊಳಗೆ ಕೋವಿಡ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಇದರ ಬೆನ್ನಲ್ಲೇ ಕೊರೋನಾ ವಿರುದ್ದ ಹೋರಾಟಕ್ಕಿಳಿದಿರುವ ವಿರುಷ್ಕಾ ದಂಪತಿ ಸದ್ಯ 2 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ. ಮಾತ್ರವಲ್ಲದೇ 7 ಕೋಟಿ ರುಪಾಯಿ ದೇಣಿಗೆ ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ.
ಈ ಕುರಿತಂತೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಟ್ವಿಟರ್‌ನಲ್ಲಿ ಜತೆಯಾಗಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನಮ್ಮ ಇಡೀ ದೇಶ ಕೋವಿಡ್ ಎರಡನೇ ಅಲೆಯ ವಿರುದ್ದ ಹೋರಾಡುತ್ತಿದೆ. ಈ ಸಂದರ್ಭದಲ್ಲಿ ನಮ್ಮ ವೈದ್ಯಕೀಯ ವ್ಯವಸ್ಥೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ವೈದ್ಯಕೀಯ ಸೌಲಭ್ಯ ಪಡೆಯಲು ನಮ್ಮ ಜನರು ಪರದಾಡುವುದನ್ನು ನೋಡಿದರೇ ನೋವಾಗುತ್ತದೆ. ಹೀಗಾಗಿ ನಾನು ಮತ್ತು ವಿರಾಟ್ ಸೇರಿ ಕೆಟ್ಟೋ ದೊಂದಿಗೆ #InThisTogether ಅಭಿಯಾನದ ಮೂಲಕ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕೊರೋನಾ ವಿರುದ್ದ ಹೋರಾಟಕ್ಕಿಳಿದ ವಿರಾಟ್ ಕೊಹ್ಲಿ..!
ಇನ್ನು ವಿರಾಟ್ ಕೊಹ್ಲಿ ಮಾತನಾಡಿ, ಇಡೀ ದೇಶವೇ ಹಿಂದೆಂದೂ ಕಂಡು ಕೇಳರಿಯದ ಪಿಡುಗನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಉಳಿಸುವ ಕೆಲಸ ಮಾಡಬೇಕಿದೆ. ಕಳೆದೊಂದು ವರ್ಷದಿಂದ ಜನರು ಪರದಾಡುತ್ತಿರುವುದನ್ನು ನೋಡಿ ನಾನು ಹಾಗೂ ಅನುಷ್ಕಾ ಆಘಾತಕ್ಕೊಳಗಾಗಿದ್ದೇವೆ. ಹೀಗಾಗಿ ನಾವೆಲ್ಲಾ ಒಟ್ಟಾಗಿ ಕೈ ಜೋಡಿಸಿ ಕೆಲಸ ಮಾಡುವ ಮೂಲಕ ಸಾಕಷ್ಟು ಜನರಿಗೆ ನೆರವಾಗಬಹುದಾಗಿದೆ. ಇಡೀ ದೇಶವೇ ನಮ್ಮ ನಿಮ್ಮೆಲ್ಲರ ನೆರವರನ್ನು ಎದುರು ನೋಡುತ್ತಿದೆ. ಹೀಗಾಗಿ ಕೋವಿಡ್ ವಿರುದ್ದದ ಹೋರಾಟಕ್ಕೆ ನಾವು ದೇಣಿಗೆ ಸಂಗ್ರಹಿಸಲು ಮುಂದಾಗಿದ್ದೇವೆ. ನಾವು ಸಾಕಷ್ಟು ದೇಣಿಗೆ ಸಂಗ್ರಹಿಸುವ ವಿಶ್ವಾಸವಿದ್ದು, ಅದನ್ನು ನಿಜಕ್ಕೂ ಅಗತ್ಯವಿರುವವರು ಬಳಸುವಂತೆ ಮಾಡಲಿದ್ದೇವೆ. ಈ ಸಂಕಷ್ಟದ ಸಂದರ್ಭದಲ್ಲಿ ದೇಶದ ಜನರು ಈ ಅಭಿಯಾನವನ್ನು ಬೆಂಬಲಿಸಲಿದ್ದಾರೆ ಎನ್ನುವ ವಿಶ್ವಾಸವಿದೆ. ಹಾಗೆಯೇ ನಾವೆಲ್ಲಾ ಒಟ್ಟಾಗಿ ಹೋರಾಟ ಮಾಡಿದರೇ, ಈ ಸಂಕಷ್ಟದಿಂದ ಪಾರಾಗಬಹುದು ಎಂದು ಮನವಿ ಮಾಡಿಕೊಂಡಿದ್ದಾರೆ.
ಕೆಟ್ಟೋ ಮೂಲಕ ಒಂದು ವಾರ(7 ದಿನ)ಗಳ ಕಾಲ ಅಭಿಯಾನ ನಡೆಯಲಿದ್ದು, ದೇಣಿಗೆಯಿಂದ ಬಂದ ಹಣವನ್ನು ಆಕ್ಸಿಜನ್ ಸಿಲಿಂಡರ್, ವೈದ್ಯಕೀಯ ಸೌಲಭ್ಯ, ಲಸಿಕೆಯ ಕುರಿತಂತೆ ಜಾಗೃತಿ ಹಾಗೂ ಟೆಲಿ ಮೆಡಿಸಿನ್ ಪೂರೈಸಲು ಬಳಕೆ ಮಾಡಲು ತೀರ್ಮಾನಿಸಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona