ಐಪಿಎಲ್ ತಂಡವಾದ ರಾಜಸ್ಥಾನ ರಾಯಲ್ಸ್‌ಗೆ ₹12000 ಕೋಟಿಯ ಬೃಹತ್ ಬಿಡ್ ಸಲ್ಲಿಕೆಯಾಗಿದೆ ಎಂದು ವರದಿಯಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ಸೇರಿದಂತೆ ಹಲವು ಸಂಸ್ಥೆಗಳು ತಂಡದ ಖರೀದಿಗೆ ಆಸಕ್ತಿ ತೋರಿದ್ದು, ಆರ್‌ಸಿಬಿಗಿಂತ ಕಡಿಮೆ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆಗಳನ್ನು ಲೇಖನವು ವಿಶ್ಲೇಷಿಸುತ್ತದೆ.
ನವದೆಹಲಿ: ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ಮಾಲೀಕತ್ವ ಮಾರಾಟ ಪ್ರಕ್ರಿಯೆ ಕೊನೆ ಹಂತಕ್ಕೆ ತಲುಪಿರುವಾಗಲೇ, ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬರೋಬ್ಬರಿ ₹12000 ಕೋಟಿ ಬಿಡ್ ಆಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.
ಇತ್ತೀಚೆಗೆ ರಾಜಸ್ಥಾನ ಬಗ್ಗೆ ಹರಿದಾಡುತ್ತಿದ್ದ ಸುದ್ದಿ ಪ್ರಕಾರ, ತಂಡದ ಖರೀದಿಗಾಗಿ ಬರೋಬ್ಬರಿ 1 ಬಿಲಿಯನ್ ಡಾಲರ್(9209 ಕೋಟಿ ರು.) ಮೌಲ್ಯದ ಬಿಡ್ ಸಲ್ಲಿಕೆಯಾಗಿದೆ ಎಂದು ವರದಿಯಾಗಿತ್ತು. ಆದರೆ ಈಗಿನ ವರದಿ ಪ್ರಕಾರ, ತಂಡದ ಖರೀದಿಗೆ 1.1 ಬಿಲಿಯನ್ ಡಾಲರ್‌ನಿಂದ 1.30 ಬಿಲಿಯನ್ ಡಾಲರ್‌ವರೆಗೆ ಬಿಡ್ ಸಲ್ಲಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಅಂದರೆ, ₹10,211 ಕೋಟಿಯಿಂದ ₹12,068 ಕೋಟಿವರೆಗೂ ಬಿಡ್ ಆಗಬಹುದು ಎಂದು ವರದಿಯಾಗಿದೆ.
ರಾಜಸ್ಥಾನ ತಂಡ ಸದ್ಯ ಎಮರ್ಜಿಂಗ್ ಮೀಡಿಯಾ ವೆಂಚರ್ಸ್ ಒಡೆತನದಲ್ಲಿದೆ. ತಂಡದ ಶೇಕಡಾ 65ರಷ್ಟು ಶೇರ್ ಈ ಸಂಸ್ಥೆ ಹೊಂದಿದೆ. ಉಳಿದಂತೆ ರೆಡ್‌ಬರ್ಡ್ ಕ್ಯಾಪಿಟಲ್ ಪಾರ್ಟ್ನರ್ಸ್ ಶೇ.15, ಬ್ರಿಟನ್ ಉದ್ಯಮಿ ಲಾಚ್ಲಾನ್ ಮುರ್ಡೋಕ್ ಶೇ.13ರಷ್ಟು ಪಾಲು ಹೊಂದಿದ್ದಾರೆ. ಉಳಿದ ಶೇರ್‌ಗಳನ್ನು ಇತರ ಕೆಲ ಉದ್ಯಮಿಗಳು ಪಡೆದುಕೊಂಡಿದ್ದಾರೆ.
ತಂಡದ ಮಾರಾಟ ಪ್ರಕ್ರಿಯೆ ಆರಂಭಗೊಂಡ ಬಳಿಕ ಖರೀದಿಗೆ ಹಲವು ಸಂಸ್ಥೆಗಳು ಮುಂದೆ ಬಂದಿದ್ದು, ರೇಸ್‌ನಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಮುಂಚೂಣಿಯಲ್ಲಿದೆ. ಪ್ರಮುಖ ಮಾಧ್ಯಮ ಸಂಸ್ಥೆ ಟೈಮ್ಸ್ ಇಂಟರ್ನೆಟ್, ಫೈನಾನ್ಸ್ ಸಂಸ್ಥೆ ಕ್ಯಾಪ್ರಿ ಗ್ಲೋಬಲ್, ಅಮೆರಿಕದ ಮೂಲಕ ಉದ್ಯಮಿ ಕಲ್ ಸೋಮಾನಿ ಕೂಡಾ ಖರೀದಿಗೆ ಒಲವು ತೋರಿದ್ದಾರೆ ಎಂದು ವರದಿಯಾಗಿದೆ.
ಆರ್‌ಸಿಬಿ ಬಳಿಕವೇ ಸೇಲ್?:
ಸದ್ಯದ ವರದಿ ಪ್ರಕಾರ, ಆರ್‌ಸಿಬಿ ತಂಡ ಶೀಘ್ರದಲ್ಲೇ ಮಾರಾಟಗೊಳ್ಳುವ ಸಾಧ್ಯತೆಯಿದೆ. ಇದಕ್ಕಾಗಿ ಮಾ.31ರ ಗಡುವು ಕೂಡಾ ನೀಡಲಾಗಿದ್ದು, ಕೆಲ ದಿನಗಳಲ್ಲೇ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳಬಹುದು ಎನ್ನಲಾಗುತ್ತಿದೆ. ಆದರೆ ರಾಜಸ್ಥಾನ ತಂಡದ ಮಾರಾಟ ಪ್ರಕ್ರಿಯೆ ಕೆಲ ದಿನ ವಿಳಂಬವಾಗಬಹುದು ಎಂದು ವರದಿಯಾಗಿದೆ.
ರಾಯಲ್ಸ್‌ಗಿಂತ ಆರ್‌ಸಿಬಿಗೆ ₹6400 ಕೋಟಿ ಅಧಿಕ ಏಕೆ?
ಸದ್ಯ ಮಾರಾಟ ಪ್ರಕ್ರಿಯೆ ನಡೆಯುತ್ತಿರುವ 2 ತಂಡಗಳ ಪೈಕಿ ಆರ್‌ಸಿಬಿಯು ರಾಜಸ್ಥಾನಕ್ಕಿಂದ ಬರೋಬ್ಬರಿ ₹6000 ಕೋಟಿಗಿಂತಲೂ ಹೆಚ್ಚು ಮೊತ್ತಕ್ಕೆ ಬಿಡ್ ಆಗುವ ಸಾಧ್ಯತೆಯಿದೆ. ಇದಕ್ಕೆ ಕಾರಣ, ಆರ್‌ಸಿಬಿ ಹಾಲಿ ಚಾಂಪಿಯನ್ ಆಗಿದ್ದರೆ, ರಾಜಸ್ಥಾನ ತಂಡ 2008ರ ಬಳಿಕ ಟ್ರೋಫಿ ಗೆದ್ದಿಲ್ಲ. ಆರ್‌ಸಿಬಿಯು ಐಪಿಎಲ್ ಜೊತೆ ಡಬ್ಲ್ಯುಪಿಎಲ್‌ನಲ್ಲೂ ತಂಡ ಹೊಂದಿದ್ದರೆ, ರಾಜಸ್ಥಾನಕ್ಕೆ ಡಬ್ಲ್ಯುಪಿಎಲ್‌ನಲ್ಲಿ ತಂಡವಿಲ್ಲ. ಇನ್ನು ರಾಜಸ್ಥಾನಕ್ಕೆ ಆರ್‌ಸಿಬಿಯ ವಿರಾಟ್ ಕೊಹ್ಲಿ ರೀತಿ ದೊಡ್ಡ ಮಾರುಕಟ್ಟೆ ಒದಗಿಸಬಲ್ಲ ಆಟಗಾರರಿಲ್ಲ.


