ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಫೈನಲ್‌ನಲ್ಲಿ ಕೆ.ಎಲ್.ರಾಹುಲ್ ಅಜೇಯ 34 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ರಾಹುಲ್ ಅವರ ಆಟವನ್ನು ಮಾವ ಸುನಿಲ್ ಶೆಟ್ಟಿ ಶ್ಲಾಘಿಸಿದ್ದಾರೆ. ರಾಹುಲ್ ಟೂರ್ನಿಯಲ್ಲಿ 140 ರನ್ ಗಳಿಸಿದ್ದರು. ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿದೆ.

ಬೆಂಗಳೂರು: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿ ಎರಡು ದಿನಗಳೇ ಕಳೆದಿವೆ. ಹೀಗಿದ್ದೂ, ಭಾರತೀಯರ ಸಂಭ್ರಮಾಚರಣೆಗೆ ಬ್ರೇಕ್‌ ಬಿದ್ದಿಲ್ಲ. ಇನ್ನು ನ್ಯೂಜಿಲೆಂಡ್ ಎದುರಿನ ಫೈನಲ್‌ ಪಂದ್ಯದಲ್ಲಿ ಯಾವುದೇ ಅಪಾಯವಿಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸಿದ ಕನ್ನಡಿಗ ಕೆ ಎಲ್ ರಾಹುಲ್ ಅವರ ಬಗ್ಗೆ ಮಾವ ಸುನಿಲ್ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ 4 ಪದಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಅಗಿದೆ.

ಮಾರ್ಚ್ 09ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ 252 ರನ್‌ಗಳ ಗುರಿ ಬೆನ್ನತ್ತುವಾಗ ಕೆ ಎಲ್ ರಾಹುಲ್ ಅಜೇಯ 34 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ತಮ್ಮ ಮೇಲೆ ಟೀಕೆ ಮಾಡುತ್ತಿದ್ದ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಕೆ ಎಲ್ ರಾಹುಲ್ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡವೇ 2027ರ ಏಕದಿನ ವಿಶ್ವಕಪ್‌ನಲ್ಲಿ ಕಣಕ್ಕೆ?

ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣವಾದ 'ಎಕ್ಸ್‌'ನಲ್ಲಿ ಸುನಿಲ್ ಶೆಟ್ಟಿ, 'INDIA’S WISH !!!! Rahul’s COMMAND' (ಭಾರತೀಯರ ಕೋರಿಕೆ, ರಾಹುಲ್ ಪೂರೈಸಿದರು) ಎಂದು ಟ್ವೀಟ್ ಮಾಡಿದ್ದಾರೆ

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕೆ ಎಲ್ ರಾಹುಲ್, ಭಾರತ ಪರ ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್ ಬಳಿಕ ನಾಲ್ಕನೇ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. ವಿಕೆಟ್ ಕೀಪರ್ ಬ್ಯಾಟರ್ ಕೆ ಎಲ್ ರಾಹುಲ್ 140.00 ಬ್ಯಾಟಿಂಗ್ ಸರಾಸರಿಯಲ್ಲಿ 140 ರನ್ ಸಿಡಿಸಿದ್ದಾರೆ

ತಂಡವನ್ನು ಗೆಲುವಿನ ದಡ ಸೇರಿಸಿದ ಬಳಿಕ ಮಾತನಾಡಿದ ಕೆ ಎಲ್, ಒಂದು ಹಂತದಲ್ಲಿ ನಾನು ನರ್ವಸ್ ಆಗಿದ್ದೆ, ಆದರೆ ಇದಾದ ಬಳಿಕ ಆತ್ಮವಿಶ್ವಾಸದಿಂದ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದೆ ಎಂದು ಕೆ ಎಲ್ ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿ: 'ಈಗ ನಾವ್ಯಾರು ರಿಟೈರ್ಡ್‌ ಅಗ್ತಿಲ್ಲ; ಕೊಹ್ಲಿ ಬಳಿ ಕೂಗಿ ಹೇಳಿದ ರೋಹಿತ್ ಶರ್ಮಾ! ವಿಡಿಯೋ ವೈರಲ್

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸುವ ಮೂಲಕ ಅತಿಹೆಚ್ಚು ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡ ಎನ್ನುವ ಹಿರಿಮೆಗೆ ಪಾತ್ರವಾಗಿದೆ. ಭಾರತ ಇದೀಗ 3 ಬಾರಿ ಚಾಂಪಿಯನ್ಸ್‌ ಟ್ರೋಫಿ ಜಯಿಸಿದ ಸಾಧನೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದೆ. ಇನ್ನು ಆಸ್ಟ್ರೇಲಿಯಾ ಎರಡು ಬಾರಿ ಚಾಂಪಿಯನ್ಸ್ ಟ್ರೋಫಿ ಜಯಿಸಿದೆ. ಕಳೆದ ವರ್ಷ 2024ರ ಐಸಿಸಿ ಟಿ20 ವಿಶ್ವಕಪ್ ಜಯಿಸಿದ್ದ ಟೀಂ ಇಂಡಿಯಾ ಕೇವಲ 10 ತಿಂಗಳ ಅಂತರದಲ್ಲಿ ಮತ್ತೊಂದು ಐಸಿಸಿ ಟ್ರೋಫಿ ಜಯಿಸಿದೆ.