ಚಾಂಪಿಯನ್ಸ್ ಟ್ರೋಫಿ ಮುಗಿದಿದ್ದು, 2027ರ ಏಕದಿನ ವಿಶ್ವಕಪ್‌ಗೆ ಭಾರತ ಸಿದ್ಧವಾಗುತ್ತಿದೆ. ರೋಹಿತ್, ಕೊಹ್ಲಿ ನಿವೃತ್ತಿ ವದಂತಿಗಳ ನಡುವೆಯೂ, ಬಿಸಿಸಿಐ ಇವರಿಬ್ಬರ ಅನುಭವದ ಮೇಲೆ ನಿರೀಕ್ಷೆ ಇಟ್ಟಿದೆ. ದಕ್ಷಿಣ ಆಫ್ರಿಕಾ, ನಮೀಬಿಯಾ, ಜಿಂಬಾಬ್ವೆಯಲ್ಲಿ ವಿಶ್ವಕಪ್ ನಡೆಯಲಿದ್ದು, ಅನುಭವಿ ಆಟಗಾರರ ತಂಡವನ್ನು ಮುಂದುವರಿಸಲು ಮತ್ತು ಯುವ ಆಟಗಾರರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತಿಸುತ್ತಿದೆ. ವಿಶ್ವಕಪ್‌ಗೆ ಮುನ್ನ ಭಾರತ 27 ಏಕದಿನ ಪಂದ್ಯಗಳನ್ನು ಆಡಲಿದೆ.

ನವದೆಹಲಿ: ಚಾಂಪಿಯನ್ಸ್‌ ಟ್ರೋಫಿ ಈಗ ಮುಗಿದ ಅಧ್ಯಾಯ. ಪ್ರಶಸ್ತಿ ವಿಜೇತ ಭಾರತ ತಂಡ ಇನ್ನು 2027ರ ಏಕದಿನ ವಿಶ್ವಕಪ್‌ಗೆ ಸಜ್ಜಾಗಬೇಕಿದೆ. ಅದಕ್ಕೆ ಈಗಲೇ ಸಿದ್ಧತೆ ಆರಂಭಗೊಳ್ಳಬೇಕಿದೆ. 2026ರಲ್ಲಿ ಟಿ20 ವಿಶ್ವಕಪ್‌ ಇದ್ದರೂ, ಭಾರತದ ಪ್ರಮುಖ ಟಾರ್ಗೆಟ್‌ 2027ರ ಏಕದಿನ ವಿಶ್ವಕಪ್‌.

ಈ ಬಾರಿ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಯ ನಿವೃತ್ತಿ ಬಗ್ಗೆ ವದಂತಿಗಳು ಹರಿದಾಡುತ್ತಿದ್ದವು. ಆದರೆ ರೋಹಿತ್‌ ಶರ್ಮಾ ನಿವೃತ್ತಿ ವದಂತಿ ತಳ್ಳಿ ಹಾಕಿದ್ದರೆ, ಕೊಹ್ಲಿ ತಮ್ಮ ಆಟದ ಮೂಲಕವೇ ಇನ್ನೊಂದಿಷ್ಟು ವರ್ಷ ಆಡುವ ಮುನ್ಸೂಚನೆ ನೀಡಿದ್ದಾರೆ. ಈ ನಡುವೆ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡವನ್ನೇ ಮುಂದಿನ ವಿಶ್ವಕಪ್‌ವರೆಗೂ ಮುಂದುವರಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇದನ್ನೂ ಓದಿ: 'ಈಗ ನಾವ್ಯಾರು ರಿಟೈರ್ಡ್‌ ಅಗ್ತಿಲ್ಲ; ಕೊಹ್ಲಿ ಬಳಿ ಕೂಗಿ ಹೇಳಿದ ರೋಹಿತ್ ಶರ್ಮಾ! ವಿಡಿಯೋ ವೈರಲ್

ರೋಹಿತ್‌ ಶರ್ಮಾಗೆ ಈಗ 37 , ವಿರಾಟ್ ಕೊಹ್ಲಿಗೆ 36 ವರ್ಷ. ಮುಂದಿನ ವಿಶ್ವಕಪ್‌ ಆಡುವುದು ಇಬ್ಬರಿಗೂ ಸಮಸ್ಯೆಯೇನಲ್ಲ. ಆದರೆ ತೀರಾ ಇತ್ತೀಚಿನವರೆಗೂ ಇವರಿಬ್ಬರ ನಿವೃತ್ತಿ ಬಗ್ಗೆ ಸುದ್ದಿಯಾಗಿದ್ದೇ ಜಾಸ್ತಿ. ಚಾಂಪಿಯನ್ಸ್‌ ಟ್ರೋಫಿ ಬಳಿಕ ನಿವೃತ್ತಿಯಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ ಬಿಸಿಸಿಐ ಇವರಿಬ್ಬರ ಮೇಲೆ ಮತ್ತಷ್ಟು ನಿರೀಕ್ಷೆ ಇಟ್ಟುಕೊಂಡಿದೆ.

ಅನುಭವಕ್ಕೆ ಮಣೆ: 2027ರ ವಿಶ್ವಕಪ್‌ ದಕ್ಷಿಣ ಆಫ್ರಿಕಾ, ನಮೀಬಿಯಾ, ಜಿಂಬಾಬ್ವೆಯಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾ ಸೇರಿ ಕೆಲ ಆಟಗಾರರರಿಷ್ಟೇ ಈ ದೇಶಗಳಲ್ಲಿ ಆಡಿದ ಅನುಭವವಿದೆ. ಈಗಾಗಲೇ ಟಿ20ಗೆ ನಿವೃತ್ತಿ ಹೇಳಿರುವ ಇವರಿಬ್ಬರಿಂದ ಏಕದಿನಕ್ಕೂ ನಿವೃತ್ತಿ ಕೊಡಿಸಿದರೆ ತಂಡದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ಐಪಿಎಲ್‌, ಟೆಸ್ಟ್‌ ಪಂದ್ಯಗಳ ನಡುವೆ ಏಕದಿನ ವಿಶ್ವಕಪ್‌ಗೆ ಒಂದೂವರೆ ವರ್ಷದಲ್ಲಿ ಸಮರ್ಥ ತಂಡವನ್ನು ಕಟ್ಟುವುದು ಸವಾಲಾಗಿ ಪರಿಣಮಿಸಬಹುದು. ಮತ್ತೊಂದೆಡೆ, ಇಬ್ಬರೂ ಮತ್ತೆ ತಮ್ಮ ಎಂದಿನ ಲಯಕ್ಕೆ ಮರಳಿದ್ದಾರೆ. ಹೀಗಾಗಿ ಇವರಿಬ್ಬರನ್ನೂ ತಂಡದಲ್ಲಿ ಮುಂದುವರಿಸುವ ಬಗ್ಗೆ ಬಿಸಿಸಿಐ ಒಲವು ಹೊಂದಿದೆ.

ಇದನ್ನೂ ಓದಿ: 'ಆರ್‌ಸಿಬಿ ಈ ಸಲವೂ ಕಪ್ ಗೆಲ್ಲಬಾರ್ದು ಎಂದು ಪ್ರಾರ್ಥಿಸ್ತೇನೆ': ಮತ್ತೆ ವಿಷ ಕಾರಿದ CSK ಮಾಜಿ ಕ್ರಿಕೆಟಿಗ!

ಉಳಿದಂತೆ ಕೆ.ಎಲ್‌.ರಾಹುಲ್‌, ಮೊಹಮ್ಮದ್‌ ಶಮಿ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶ್ರೇಯಸ್‌ ಅಯ್ಯರ್‌ ತಂಡದಲ್ಲಿರುವ ಹಿರಿಯ ಆಟಗಾರರು. ಯಾವುದೇ ದೇಶದಲ್ಲಾದರೂ ಒತ್ತಡಕ್ಕೊಳಗಾಗದಂತೆ ಆಡುವ ಸಾಮರ್ಥ್ಯ ಇವರಿಗಿದೆ. ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯರಾಗಿದ್ದ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಕೂಡಾ ವಿದೇಶದಲ್ಲಿ ಮಿಂಚಬಲ್ಲರು. ಹೀಗಾಗಿ ಇವರೆ ಮೇಲೇ ಹೆಚ್ಚಿನ ನಿಗಾ ಇಟ್ಟಿರುವ ತಂಡದ ಆಡಳಿತ, ಮುಂದಿನ ಸರಣಿಗಳಲ್ಲಿ ಅನಗತ್ಯ ಪ್ರಯೋಗಕ್ಕೆ ಕೈಹಾಕುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ.

ಯುವ ಆಟಗಾರರು ರೆಡಿ: ಭಾರತ ತಂಡದಲ್ಲಿ ಶುಭ್‌ಮನ್‌ ಗಿಲ್‌, ಯಶಸ್ವಿ ಜೈಸ್ವಾಲ್‌, ಹರ್ಷಿತ್‌ ರಾಣಾ, ಅರ್ಶ್‌ದೀಪ್‌ ಸಿಂಗ್‌, ವಾಷಿಂಗ್ಟನ್‌ ಸುಂದರ್‌ ಸೇರಿ ಹಲವು ಯುವ ಆಟಗಾರರೂ ಇದ್ದಾರೆ. ಇವರನ್ನು 2027ರ ಏಕದಿನ ವಿಶ್ವಕಪ್‌ಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಮುಂದಿನ ಸರಣಿಗಳಲ್ಲಿ ಹೆಚ್ಚಿನ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಇವರೇ ನೋಡಿ ಟೀಂ ಇಂಡಿಯಾ ಗೆಲುವಿನ ಟಾಪ್‌ 5 ಸೂಪರ್ ಹೀರೋಗಳು!

ವಿಶ್ವಕಪ್‌ಗೂ ಮುನ್ನ ಭಾರತ ತಂಡಕ್ಕೆ 27 ಏಕದಿನ ಪಂದ್ಯಗಳು

ಭಾರತ ತಂಡ ಕಳೆದ ವರ್ಷ ಕೇವಲ 3 ಏಕದಿನ ಪಂದ್ಯಗಳನ್ನಾಡಿತ್ತು. ಈ ವರ್ಷದ ಚಾಂಪಿಯನ್ಸ್‌ ಟ್ರೋಫಿಗೆ ಮುನ್ನ ಇಂಗ್ಲೆಂಡ್‌ ವಿರುದ್ಧ ಆಡಿದ್ದ ಭಾರತ, 2027ರ ವಿಶ್ವಕಪ್‌ಗೂ ಮುನ್ನ ಒಟ್ಟು 27 ಏಕದಿನ ಪಂದ್ಯಗಳನ್ನಾಡಲಿವೆ. ಐಪಿಎಲ್‌ ಬಳಿಕ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ಸರಣಿ ಮೂಲಕ ಭಾರತ ವಿಶ್ವಕಪ್‌ ಸಿದ್ಧತೆ ಆರಂಭಿಸಲಿದೆ. ಬಳಿಕ ಇದೇ ವರ್ಷ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧವೂ ಏಕದಿನ ಸರಣಿ ಆಡಲಿದೆ.