ದುಬೈನಲ್ಲಿ ನಡೆದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಗೆದ್ದಿದೆ. ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳಿಂದ ಜಯ ಸಾಧಿಸಿತು. ಇದು ಭಾರತದ ಮೂರನೇ ಚಾಂಪಿಯನ್ಸ್ ಟ್ರೋಫಿ ಮತ್ತು ಒಟ್ಟಾರೆ ಏಳನೇ ಐಸಿಸಿ ಟ್ರೋಫಿಯಾಗಿದೆ. ರೋಹಿತ್, ಕೊಹ್ಲಿ ನಿವೃತ್ತಿ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಕೋಚ್ ಗಂಭೀರ್‌ಗೆ ಇದು ಮೊದಲ ಯಶಸ್ಸು.
ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಟೀಂ ಇಂಡಿಯಾ 12 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮಾರ್ಚ್ 09ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನ್ಯೂಜಿಲೆಂಡ್ ಎದುರು ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಬೌಂಡರಿ ಬಾರಿಸುವ ಮೂಲಕ ಇಡೀ ದೇಶವೇ ಸಂಭ್ರಮದ ಹೊಳೆಯಲ್ಲಿ ತೇಲುವಂತೆ ಮಾಡಿದರು. ಆಗ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಒಬ್ಬರನ್ನೊಬ್ಬರು ಬಿಗಿದಪ್ಪಿ ಸಂಭ್ರ,ಮಿಸುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಇವರೇ ನೋಡಿ ಟೀಂ ಇಂಡಿಯಾ ಗೆಲುವಿನ ಟಾಪ್ 5 ಸೂಪರ್ ಹೀರೋಗಳು!
ಟೀಂ ಇಂಡಿಯ ದಾಖಲೆಯ ಮೂರನೇ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸುತ್ತಿದ್ದಂತೆಯೇ ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭರ್ಜರಿಯಾಗಿಯೇ ಸಂಭ್ರಮಾಚರಣೆ ಮಾಡಿದರು. ಆಗ ರೋಹಿತ್ ಶರ್ಮಾ, 'ಈಗ ನಾವ್ಯಾರು ನಿವೃತ್ತಿಯಾಗುತ್ತಿಲ್ಲ' ಎಂದು ಜೋರಾಗಿ ಕೂಗಿ ಹೇಳಿದ್ದಾರೆ. ಆಗ ಪಕ್ಕದಲ್ಲೇ ಇದ್ದ ವಿರಾಟ್ ಕೊಹ್ಲಿ ಜೋರಾಗಿ ನಗುತ್ತಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ಈ ಪ್ರತಿಷ್ಠಿತ ಟೂರ್ನಿ ಮುಗಿಯುತ್ತಿದ್ದಂತೆಯೇ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಏಕದಿನ ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಲಿದ್ದಾರೆ ಎನ್ನುವಂತಹ ಗಾಳಿಸುದ್ದಿಗಳು ಕ್ರಿಕೆಟ್ ವಲಯದಲ್ಲಿ ಹರಿದಾಡಿತ್ತು. ಆದರೆ ರೋಹಿತ್, ಕೊಹ್ಲಿ ಹಾಗೂ ಜಡೇಜಾ ಟೂರ್ನಿಯುದ್ದಕ್ಕೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಇದರ ಜತೆಗೆ ಸದ್ಯಕ್ಕಂತೂ ಏಕದಿನ ಮಾದರಿಗೆ ಗುಡ್ ಬೈ ಹೇಳುವುದಿಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ.
ಕೋಚ್ ಗಂಭೀರ್‌ಗೆ ಮೊದಲ ಯಶಸ್ಸು
ಕೋಚ್ ಹುದ್ದೆ ಅಲಂಕರಿಸಿದ ಬಳಿಕ ಟೀಕೆಗಳನ್ನೇ ಎದುರಿಸುತ್ತಿದ್ದ ಗೌತಮ್ ಗಂಭೀರ್‌ಗೆ ಮೊದಲ ಯಶಸ್ಸು ಸಿಕ್ಕಿದೆ. ತವರಿನಲ್ಲೇ ನ್ಯೂಜಿಲೆಂಡ್ ವಿರುದ್ಧ ಕ್ಲೀನ್‌ಸ್ವೀಪ್ ಮುಖಭಂಗ, ಆಸ್ಟ್ರೇಲಿಯಾದಲ್ಲಿ ನಿರ್ಣಾಯಕ ಟೆಸ್ಟ್ ಸರಣಿ ಸೋಲಿನಿಂದ ಕುಗ್ಗಿ ಹೋಗಿದ್ದ ಗಂಭೀರ್, ಸದ್ಯ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಮೂಲಕ ನಿರಾಳರಾಗಿದ್ದಾರೆ. ಇದರ ಜೊತೆಗೆ, ಗಂಭೀರ್‌ರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಬೇಕೆಂಬ ಕೂಗಿಗೆ ಬ್ರೇಕ್ ಬೀಳಲಿದೆ.
ಇದನ್ನೂ ಓದಿ: ಭಾರತ ಎದುರು ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋತಿದ್ದೇಕೆ? ಅಚ್ಚರಿ ಕಾರಣ ಕೊಟ್ಟ ಕಿವೀಸ್ ನಾಯಕ ಸ್ಯಾಂಟ್ನರ್!
ಟೀಂ ಇಂಡಿಯಾಗೆ 7ನೇ ಐಸಿಸಿ ಟ್ರೋಫಿ
ಭಾರತ ತಂಡ 7ನೇ ಬಾರಿ ಐಸಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. 1983ರಲ್ಲಿ ಮೊದಲ ಬಾರಿ ಐಸಿಸಿ ಟ್ರೋಫಿ(ಏಕದಿನ ವಿಶ್ವಕಪ್) ಗೆದ್ದಿದ್ದ ಭಾರತ, ಬಳಿಕ 2002ರಲ್ಲಿ ಚಾಂಪಿಯನ್ಸ್ ಟ್ರೋಫಿ, 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದಿದ್ದ ತಂಡ 9 ತಿಂಗಳ ಅಂತರದಲ್ಲಿ ಮತ್ತೊಂದು ಕಪ್ ಮುಡಿಗೇರಿಸಿಕೊಂಡಿದೆ.
