* ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಶ್ರೀಲಂಕಾ ಆತಿಥ್ಯ* 2018ರಲ್ಲಿ ಕೊನೆಯ ಬಾರಿ ನಡೆದಿದ ಏಷ್ಯಾ ಕಪ್‌ ಟೂರ್ನಿ* ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಟೂರ್ನಿ ಶ್ರೀಲಂಕಾಗೆ ಸ್ಥಳಾಂತರ

ಕೊಲಂಬೊ(ಮಾ.20): 15ನೇ ಆವೃತ್ತಿಯ ಏಷ್ಯಾ ಕಪ್‌ 2022 (Asia Cup 2022) ಟಿ20 ಟೂರ್ನಿಗೆ ಶ್ರೀಲಂಕಾ ಆತಿಥ್ಯ ವಹಿಸಲಿದೆ. ಶನಿವಾರ ನಡೆದ ಏಷ್ಯನ್‌ ಕ್ರಿಕೆಟ್‌ ಸಮಿತಿ(ಎಸಿಸಿ) ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಟೂರ್ನಿ ಆಗಸ್ಟ್‌ 27ರಿಂದ ಸೆಪ್ಟಂಬರ್‌ 11ರ ವರೆಗೆ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 6 ತಂಡಗಳು ಪಾಲ್ಗೊಳ್ಳಲಿವೆ. ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಇದೀಗ ಶ್ರೀಲಂಕಾಗೆ ಸ್ಥಳಾಂತರಿಸಲಾಗಿದೆ.

ಆತಿಥೇಯ ಶ್ರೀಲಂಕಾ, ಭಾರತ, ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಟೂರ್ನಿಗೆ ಅರ್ಹತೆ ಪಡೆದುಕೊಂಡಿದ್ದು, ಮತ್ತೊಂದು ತಂಡ ಯಾವುದೆಂದು ಅರ್ಹತಾ ಟೂರ್ನಿ ಬಳಿಕ ನಿರ್ಧಾರವಾಗಲಿದೆ. ಯುಎಇ, ಕುವೈಟ್‌, ಸಿಂಗಾಪೂರ ಹಾಗೂ ಹಾಂಕಾಂಗ್‌ ನಡುವಿನ ಅರ್ಹತಾ ಸುತ್ತಿನ ಪಂದ್ಯಗಳು ಆಗಸ್ಟ್ 20ರಿಂದ ಆರಂಭವಾಗಲಿದೆ ಎಂದು ಎಸಿಸಿ ತಿಳಿಸಿದೆ. 2018ರಲ್ಲಿ ಕೊನೆಯ ಬಾರಿ ನಡೆದಿದ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಆಗಿತ್ತು. ಬಳಿಕ 2020ರಲ್ಲಿ ಟೂರ್ನಿ ನಡೆಯಬೇಕಿದ್ದರೂ ಕೋವಿಡ್‌ ಸಾಂಕ್ರಾಮಿಕದ (COVID 19) ಕಾರಣದಿಂದ ಮುಂದೂಡಲಾಗಿತ್ತು. 2022ರ ಟೂರ್ನಿ ಮೊದಲು ಪಾಕಿಸ್ತಾನದಲ್ಲಿ ನಿಗದಿಯಾಗಿದ್ದರೂ, ಅದನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಗಿದೆ. ಪಾಕಿಸ್ತಾನ 2023ರ ಟೂರ್ನಿಗೆ ಆತಿಥ್ಯ ವಹಿಸಲಿದೆ.

Ranji Trophy: ಬೆಂಗಳೂರಿನಲ್ಲಿ ರಣಜಿ ಟ್ರೋಫಿ ನಾಕೌಟ್‌..?

7 ಬಾರಿ ಪ್ರಶಸ್ತಿ ಗೆದ್ದಿರುವ ಭಾರತ

1984ರಲ್ಲಿ ಆರಂಭವಾದ ಟೂರ್ನಿ ಪ್ರತೀ 2 ವರ್ಷಕ್ಕೊಮ್ಮೆ ನಡೆಯುತ್ತದೆ. ಒಮ್ಮೆ ಏಕದಿನ ಮಾದರಿಯಲ್ಲಿ ನಡೆದರೆ ಮುಂದಿನ ಆವೃತ್ತಿ ಟಿ20 ಮಾದರಿಯಾಗಿರುತ್ತದೆ. ಈ ಬಾರಿ ಟಿ20 ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಒಟ್ಟಾರೆ 14 ಆವೃತ್ತಿಗಳಲ್ಲಿ ಭಾರತ ಅತೀ ಹೆಚ್ಚು ಬಾರಿ ಅಂದರೆ 7 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶ್ರೀಲಂಕಾ 5 ಬಾರಿ ಪ್ರಶಸ್ತಿ ಎತ್ತಿ ಹಿಡಿದಿದ್ದು, 2 ಬಾರಿ ಪಾಕಿಸ್ತಾನ ಚಾಂಪಿಯನ್‌ ಆಗಿದೆ.

ಏಷ್ಯಕ್‌ ಕ್ರಿಕೆಟ್‌ ಅಧ್ಯಕ್ಷರಾಗಿ ಜಯ್‌ ಶಾ ಮರು ಆಯ್ಕೆ

ಕೊಲಂಬೊ: ಏಷ್ಯನ್‌ ಕ್ರಿಕೆಟ್‌ ಸಮಿತಿ(ಎಸಿಸಿ) ಅಧ್ಯಕ್ಷರಾಗಿ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ (Jay Shah) ಮರು ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಎಸಿಸಿ ವಾರ್ಷಿಕ ಸಭೆಯಲ್ಲಿ ಶಾ ಅವರ ಅಧ್ಯಕ್ಷ ಸ್ಥಾನದ ಅವಧಿಯನ್ನು ಮತ್ತೊಂದು ವರ್ಷಕ್ಕೆ ಮುಂದುವರಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ(ಬಿಸಿಬಿ) ಅಧ್ಯಕ್ಷ ನಜ್ಮುಲ್‌ ಹಸನ್‌ ಅವರಿಂದ ಕಳೆದ ವರ್ಷ ಜನವರಿಯಲ್ಲಿ ಶಾ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು. ಶಾ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಯಾದ ಅತೀ ಕಿರಿಯ ಎನಿಸಿಕೊಂಡಿದ್ದಾರೆ.

Scroll to load tweet…

ದ.ಆಫ್ರಿಕಾದಲ್ಲಿ ಬಾಂಗ್ಲಾಕ್ಕೆ ಮೊದಲ ಏಕದಿನ ಗೆಲುವು

ಸೆಂಚೂರಿಯನ್‌: ದಕ್ಷಿಣ ಆಫ್ರಿಕಾ ವಿರುದ್ಧ ಅದರದೇ ನೆಲದಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಜಯಗಳಿಸುವ ಮೂಲಕ ಬಾಂಗ್ಲಾದೇಶ ಕ್ರಿಕೆಟ್ ತಂಡವು (Bangladesh Cricket Team) ಇತಿಹಾಸ ನಿರ್ಮಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಬಾಂಗ್ಲಾ 38 ರನ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. 

ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ 7 ವಿಕೆಟ್‌ ನಷ್ಟಕ್ಕೆ 314 ರನ್‌ ಕಲೆ ಹಾಕಿತು. ಶಕೀಬ್‌ ಅಲ್‌ ಹಸನ್‌(77), ಲಿಟನ್‌ ದಾಸ್‌(50), ಯಾಸಿರ್‌ ಅಲಿ(50) ಅರ್ಧಶತಕ ಸಿಡಿಸಿ ತಂಡ ದೊಡ್ಡ ಮೊತ್ತ ಗಳಿಸಲು ನೆರವಾದರು. ಕಠಿಣ ಗುರಿ ಬೆನ್ನತ್ತಿದ ದ.ಆಫ್ರಿಕಾ 48.5 ಓವರ್‌ಗಳಲ್ಲಿ 276ಕ್ಕೆ ಆಲೌಟಾಯಿತು. ವ್ಯಾನ್‌ ಡೆರ್‌ ಡುಸ್ಸೆನ್‌(86), ಡೇವಿಡ್‌ ಮಿಲ್ಲರ್‌(79) ಹೋರಾಟ ವ್ಯರ್ಥವಾಯಿತು. ಮೆಹದಿ ಹಸನ್‌ 4 ವಿಕೆಟ್‌ ಕಿತ್ತರು.