ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ, 2025ರಲ್ಲಿ ಅತಿ ಹೆಚ್ಚು ಅಂತರಾಷ್ಟ್ರೀಯ ರನ್ ಗಳಿಸಿದ ಆಟಗಾರ್ತಿ ಎಂಬ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಶುಭಮನ್ ಗಿಲ್ ಅವರನ್ನು ಹಿಂದಿಕ್ಕಲು ಅವರಿಗೆ ಕೇವಲ 62 ರನ್‌ಗಳ ಅಗತ್ಯವಿದೆ.
ತಿರುವನಂತಪುರಂ: ಶ್ರೀಲಂಕಾ ವಿರುದ್ಧದ ಕೊನೆಯ ಮಹಿಳಾ ಟಿ20 ಪಂದ್ಯ ಇಂದು ನಡೆಯಲಿದ್ದು, ಭಾರತೀಯ ಆಟಗಾರ್ತಿ ಸ್ಮೃತಿ ಮಂಧನಾ ಮತ್ತೊಂದು ಮೈಲಿಗಲ್ಲಿನ ಸನಿಹದಲ್ಲಿದ್ದಾರೆ. 2025ರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಳ್ಳಲು ಸ್ಮೃತಿ ಸಜ್ಜಾಗಿದ್ದಾರೆ. ಮೂರೂ ಮಾದರಿಗಳಿಂದ ಸ್ಮೃತಿ ಈವರೆಗೆ 1,703 ರನ್ ಗಳಿಸಿದ್ದಾರೆ. 1,764 ರನ್‌ಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಲು ಸ್ಮೃತಿಗೆ ಕೇವಲ 62 ರನ್‌ಗಳ ಅಗತ್ಯವಿದೆ. 2025ರ ಉದ್ದಕ್ಕೂ ಸ್ಮೃತಿ ಮಂಧನಾ ಸ್ಥಿರವಾದ ಫಾರ್ಮ್‌ನಲ್ಲಿದ್ದಾರೆ.
ಒಂದು ವರ್ಷದಲ್ಲಿ ಮಹಿಳಾ ಆಟಗಾರ್ತಿಯೊಬ್ಬರು ಗಳಿಸಿದ ಅತಿ ಹೆಚ್ಚು ರನ್‌ಗಳ ದಾಖಲೆ ಸ್ಮೃತಿ ಹೆಸರಿನಲ್ಲಿದೆ. ಈ ಋತುವಿನಲ್ಲಿ ಭಾರತೀಯ ಮಹಿಳಾ ತಂಡದ ಪ್ರಾಬಲ್ಯಕ್ಕೆ ಸ್ಮೃತಿಯ ಫಾರ್ಮ್ ಕೂಡ ಒಂದು ಪ್ರಮುಖ ಕಾರಣ. ಇಂದು ನಡೆಯಲಿರುವ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಸ್ಮೃತಿ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ.
10,000 ರನ್ ಎಲೈಟ್ ಕ್ಲಬ್ ಸೇರಿರುವ ಮಂಧನಾ
ಇತ್ತೀಚೆಗೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಎರಡನೇ ಭಾರತೀಯ ಮಹಿಳೆ ಎಂಬ ದಾಖಲೆಯನ್ನು ಸ್ಮೃತಿ ಬರೆದಿದ್ದರು. 10,000 ರನ್‌ಗಳ ಕ್ಲಬ್ ಸೇರಿದ ಮೊದಲ ಭಾರತೀಯ ಆಟಗಾರ್ತಿ ಮಿಥಾಲಿ ರಾಜ್. ವಿಶ್ವದ ಆಟಗಾರ್ತಿಯರ ಪೈಕಿ ನ್ಯೂಜಿಲೆಂಡ್‌ನ ಮಾಜಿ ಆಟಗಾರ್ತಿ ಸೂಝಿ ಬೇಟ್ಸ್ ಮತ್ತು ಇಂಗ್ಲೆಂಡ್‌ನ ಮಾಜಿ ಆಟಗಾರ್ತಿ ಚಾರ್ಲೋಟ್ ಎಡ್ವರ್ಡ್ಸ್ ಈ ಪಟ್ಟಿಯಲ್ಲಿ ಇನ್ನಿಬ್ಬರು ಆಟಗಾರ್ತಿಯರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಕೇವಲ ಏಳು ಟೆಸ್ಟ್ ಪಂದ್ಯಗಳನ್ನಾಡಿರುವ ಸ್ಮೃತಿ, 57.18ರ ಅತ್ಯುತ್ತಮ ಸರಾಸರಿಯಲ್ಲಿ 629 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಸೇರಿವೆ. ಏಕದಿನದಲ್ಲಿ, 117 ಪಂದ್ಯಗಳಿಂದ 48.38 ಸರಾಸರಿಯಲ್ಲಿ 5,322 ರನ್ ಗಳಿಸಿದ್ದಾರೆ. ಇದರಲ್ಲಿ 14 ಶತಕ ಮತ್ತು 34 ಅರ್ಧಶತಕಗಳು ಸೇರಿವೆ. ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಮಂಧಾನ ಆರನೇ ಸ್ಥಾನದಲ್ಲಿದ್ದಾರೆ. ಟಿ20ಯಲ್ಲಿ 157 ಪಂದ್ಯಗಳಿಂದ 4,102 ರನ್ ಗಳಿಸಿದ್ದಾರೆ. ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಭಾರತಕ್ಕೆ ಕ್ಲೀನ್ ಸ್ವೀಪ್ ಗುರಿ
ತಿರುವನಂತಪುರಂ: ಶ್ರೀಲಂಕಾ ವಿರುದ್ಧ 5ನೇ ಹಾಗೂ ಕೊನೆಯ ಟಿ20 ಪಂದ್ಯ ಮಂಗಳವಾರ ಇಲ್ಲಿ ನಡೆಯಲಿದ್ದು, ಸರಣಿಯಲ್ಲಿ 4-0 ಮುನ್ನಡೆಯಲ್ಲಿರುವ ಭಾರತ ಕ್ಲೀನ್ ಸ್ವೀಪ್ ಮೇಲೆ ಕಣ್ಣಿಟ್ಟಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಮಹತ್ವದ ಸಿದ್ಧತೆ ನಡೆಸುತ್ತಿರುವ ಭಾರತ, ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿ ತೋರುತ್ತಿದ್ದು, ಕಳಪೆ ಫೀಲ್ಡಿಂಗ್‌ನಿಂದಾಗಿ ಒತ್ತಡಕ್ಕೆ ಸಿಲುಕಿದೆ.
ಸರಣಿಯ 4 ಪಂದ್ಯಗಳಲ್ಲಿ ಭಾರತ ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದೆ. ವಿಕೆಟ್ ಕೀಪರ್ ರಿಚಾ ಘೋಷ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದಾರೆ ಹೊರತು ಕೀಪಿಂಗ್‌ನಲ್ಲಿ ಅವರು ಸಾಕಷ್ಟು ಸುಧಾಕರಣೆ ಕಾಣಬೇಕಿದೆ. ವಿಶ್ವಕಪ್‌ಗೂ ಮುನ್ನ ಭಾರತ ತನ್ನ ಫೀಲ್ಡಿಂಗ್ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ.
ಕಳೆದ ಪಂದ್ಯದಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ್ದನ್ನು ಹೊರತುಪಡಿಸಿದರೆ ಸರಣಿಯಲ್ಲಿ ಲಂಕಾದ ಪ್ರದರ್ಶನ ಕಳಪೆಯಾಗಿದೆ. ಈ ಪಂದ್ಯದಲ್ಲಿ ಪುಟಿದೆದ್ದು ಸಮಾಧಾನಕರ ಗೆಲುವಿನೊಂದಿಗೆ ಭಾರತ ಪ್ರವಾಸಕ್ಕೆ ಗುಡ್‌ಬೈ ಹೇಳಲು ಲಂಕಾ ಹಪಹಪಿಸುತ್ತಿದೆ.
ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್‌ಸ್ಟಾರ್


