ಭಾರತದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ನಾಲ್ಕನೇ ಮಹಿಳಾ ಆಟಗಾರ್ತಿಯಾಗಿದ್ದಾರೆ. ಕೇವಲ 281 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವ ಮೂಲಕ, ಅತಿವೇಗವಾಗಿ 10 ಸಾವಿರ ರನ್ ಗಳಿಸಿದ ಆಟಗಾರ್ತಿ ಎಂಬ ವಿಶ್ವದಾಖಲೆ ಬರೆದಿದ್ದಾರೆ.
ತಿರುವನಂತಪುರಂ: ಸ್ಮೃತಿ ಮಂಧನಾ ಪಾಲಿಗೆ 2025ರ ವರ್ಷ ಕ್ರಿಕೆಟ್ ವಿಚಾರದಲ್ಲಿ ಅತ್ಯಂತ ಅವಿಸ್ಮರಣೀಯ ವರ್ಷವಾಗಿ ಪರಿಣಮಿಸಿದೆ. ಭಾರತದ ಎಡಗೈ ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಸಿಡಿಸುವ ಮೂಲಕ ಅಪರೂಪದಲ್ಲೇ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ 10,000 ರನ್‌ಗಳ ಎಲೈಟ್ ಕ್ಲಬ್ ಸೇರಲು ಕೇವಲ 27 ರನ್‌ಗಳ ಅಗತ್ಯವಿತ್ತು. ಲಂಕಾ ಎದುರಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಇದೀಗ ದಿಗ್ಗಜ ಆಟಗಾರ್ತಿಯರಾದ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್, ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ ಹಾಗೂ ಇಂಗ್ಲೆಂಡ್‌ನ ಚಾರ್ಲೆಟ್ಟೆ ಎಡ್ವರ್ಡ್ಸ್ ಅವರ ಸಾಲಿಗೆ ಸ್ಮೃತಿ ಮಂಧನಾ ಸೇರ್ಪಡೆಯಾಗಿದ್ದಾರೆ.
ಸ್ಮೃತಿ ಮಂಧನಾ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 5322 ರನ್, ಟಿ20ಯಲ್ಲಿ 4,022 ರನ್ ಹಾಗೂ 7 ಟೆಸ್ಟ್ ಪಂದ್ಯಗಳಿಂದ 629 ರನ್ ಸಿಡಿಸಿದ್ದಾರೆ. ಒಟ್ಟಾರೆ ಭಾರತ ಪರ 281 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 10 ಸಾವಿರ ರನ್ ಸಿಡಿಸಿದ್ದಾರೆ. ಇದರ ಜತೆಗೆ ಅತಿವೇಗವಾಗಿ 10 ಸಾವಿರ ಅಂತಾರಾಷ್ಟ್ರೀಯ ರನ್ ಬಾರಿಸಿದ ಮಹಿಳಾ ಬ್ಯಾಟರ್ ಎನ್ನುವ ಅಪರೂಪದ ವಿಶ್ವದಾಖಲೆ ಬರೆದಿದ್ದಾರೆ.
ಅತಿವೇಗವಾಗಿ 10 ಸಾವಿರ ರನ್ ಪೂರೈಸಿ ದಾಖಲೆ ಬರೆದ ಮಂಧನಾ!
ಹೌದು, ಸ್ಮೃತಿ ಮಂಧನಾ ಕೇವಲ 281 ಇನ್ನಿಂಗ್ಸ್‌ಗಳನ್ನಾಡಿ 10 ಸಾವಿರ ಅಂತಾರಾಷ್ಟ್ರೀಯ ರನ್ ಪೂರೈಸಿದ್ದಾರೆ. ಇದಕ್ಕೂ ಮೊದಲು ಮಾಜಿ ನಾಯಕಿ ಮಿಥಾಲಿ ರಾಜ್ 291 ಇನ್ನಿಂಗ್ಸ್‌ಗಳನ್ನಾಡಿ 10 ಸಾವಿರ ರನ್ ಸಿಡಿಸಿದ್ದರು. ಇದೀಗ ಆ ದಾಖಲೆಯನ್ನು ಬ್ರೇಕ್ ಮಾಡುವಲ್ಲಿ ಇದೀಗ ಸ್ಮೃತಿ ಮಂಧನಾ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ಚಾರ್ಲೆಟ್ಟೆ ಎಡ್ವರ್ಡ್ಸ್ 308 ಇನ್ನಿಂಗ್ಸ್ ಹಾಗೂ ಸುಜಿ ಬೇಟ್ಸ್ 314 ಇನ್ನಿಂಗ್ಸ್‌ಗಳನ್ನಾಡಿ 10,000 ಅಂತಾರಾಷ್ಟ್ರೀಯ ರನ್ ಪೂರೈಸಿದ್ದಾರೆ.
ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್ 5 ಬ್ಯಾಟರ್ಸ್
1. ಮಿಥಾಲಿ ರಾಜ್(ಭಾರತ)- 10,868 ರನ್
2. ಸುಜಿ ಬೇಟ್ಸ್(ನ್ಯೂಜಿಲೆಂಡ್)- 10,652 ರನ್
3. ಚಾರ್ಲಟ್ಟೆ ಎಡ್ವರ್ಡ್ಸ್(ಇಂಗ್ಲೆಂಡ್)- 10,273 ರನ್
4. ಸ್ಮೃತಿ ಮಂಧನಾ(ಭಾರತ)- 10,053 ರನ್
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು 50+ ರನ್ ಸಿಡಿಸಿದ ಮಂಧನಾ:
ಹೌದು, ಶ್ರೀಲಂಕಾ ಎದುರಿನ ನಾಲ್ಕನೇ ಟಿ20 ಪಂದ್ಯದಲ್ಲಿ ಸ್ಮೃತಿ ಮಂಧನಾ ಆಕರ್ಷಕ 80 ರನ್ ಸಿಡಿಸಿದರು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧನಾ ಬಾರಿಸಿದ 32ನೇ 50+ ರನ್ ಸಾಧನೆಯಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ 50+ ರನ್ ಬಾರಿಸಿದ ಮಹಿಳಾ ಬ್ಯಾಟರ್ ಎನ್ನುವ ದಾಖಲೆಗೂ ಸ್ಮೃತಿ ಮಂಧನಾ ಪಾತ್ರರಾಗಿದ್ದಾರೆ. ಇನ್ನುಳಿದಂತೆ ಸುಜಿ ಬೇಟ್ಸ್ ಹಾಗೂ ಬೆಥ್ ಮೂನಿ ತಲಾ 29 ಬಾರಿ 50+ ರನ್ ದಾಖಲಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.


