ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ, ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನಾ ಅವರು ತಮ್ಮ ಬ್ಯಾಟಿಂಗ್ ಅಭ್ಯಾಸವನ್ನು ಚಿತ್ರೀಕರಿಸುತ್ತಿದ್ದ ಕ್ಯಾಮೆರಾಮನ್‌ಗೆ ಅಸಮಾಧಾನ ವ್ಯಕ್ತಪಡಿಸಿದರು.  ರೋಚಕ ಪಂದ್ಯದಲ್ಲಿ ಆರ್‌ಸಿಬಿ 3 ವಿಕೆಟ್‌ಗಳಿಂದ ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿಸಿತು.

ಮುಂಬೈ (ಜ.10): ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಪಂದ್ಯದ ಸಮಯದಲ್ಲಿ, ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನಾ ಅವರು ಕ್ಯಾಮೆರಾಮನ್‌ನಿಂದ ಕಿರಿಕಿರಿಗೊಂಡರು. ಪಂದ್ಯದ ಇನ್ನಿಂಗ್ಸ್ ವಿರಾಮದ ಸಮಯದಲ್ಲಿ, ಸ್ಮೃತಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾಗ ಕ್ಯಾಮೆರಾಮನ್ ಅವರ ಹತ್ತಿರ ಬಂದು ಬ್ಯಾಟಿಂಗ್‌ ಅಭ್ಯಾಸವನ್ನು ವಿಡಿಯೋ ಮಾಡ್ತಿದ್ದರು.ಈ ಹಂತದಲ್ಲಿ, ಸ್ಮೃತಿ ತನ್ನ ಕೈಯನ್ನು ಸನ್ನೆ ಮಾಡುತ್ತಾ 'ಏನು' ಎಂದು ಕೇಳುತ್ತಿರುವುದನ್ನು ಕಾಣಬಹುದಾಗಿದೆ. ಇದರ ಬೆನ್ನಲ್ಲಿಯೇ ಕ್ಯಾಮೆರಾಮನ್ ತಕ್ಷಣವೇ ವಿಡಿಯೋ ಮಾಡುವುದರಿಂದ ಹಿಂದೆ ಸರಿಯುತ್ತಾರೆ.

ಥ್ರಿಲ್ಲಿಂಗ್‌ ಪಂದ್ಯದಲ್ಲಿ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿತು. ಮುಂಬೈನ ನ್ಯಾಟ್ ಸೀವರ್ ಬ್ರೆಂಟ್ ಎಸೆದ ಕೊನೆಯ ಓವರ್‌ನಲ್ಲಿ ಬೆಂಗಳೂರು ತಂಡ ಗೆಲ್ಲಲು 18 ರನ್‌ಗಳು ಬೇಕಾಗಿದ್ದವು. ನಾಡಿನ್ ಡಿ ಕ್ಲರ್ಕ್ ಸ್ಟ್ರೈಕ್‌ನಲ್ಲಿದ್ದರು (44 ಎಸೆತಗಳಲ್ಲಿ ಔಟಾಗದೆ 63). ಮೊದಲ ಎರಡು ಎಸೆತಗಳಲ್ಲಿ ರನ್ ಗಳಿಸದೆ ಬೆಂಗಳೂರು ತಂಡ ಸೋಲು ಕಾಣುವ ಹಾದಿಯಲ್ಲಿತ್ತು. ಆದರೆ ಮುಂದಿನ ನಾಲ್ಕು ಎಸೆತಗಳಲ್ಲಿ ನಾಡಿನ್ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸಿ ಬೆಂಗಳೂರಿಗೆ 3 ವಿಕೆಟ್‌ಗಳ ರೋಮಾಂಚಕ ಗೆಲುವು ತಂದುಕೊಟ್ಟರು.

ಥ್ರಿಲ್ಲಿಂಗ್‌ ಮ್ಯಾಚ್‌ನಲ್ಲಿ ಗೆದ್ದ ಬೆಂಗಳೂರು

155 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬೆಂಗಳೂರಿಗೆ ಗ್ರೇಸ್ ಹ್ಯಾರಿಸ್ (12 ಎಸೆತಗಳಲ್ಲಿ 25) ಮತ್ತು ಸ್ಮೃತಿ ಮಂಧಾನ (13 ಎಸೆತಗಳಲ್ಲಿ 18) ಅದ್ಭುತ ಆರಂಭವನ್ನು ನೀಡಿದರು, ಮೊದಲ ವಿಕೆಟ್‌ಗೆ 23 ಎಸೆತಗಳಲ್ಲಿ 40 ರನ್‌ಗಳನ್ನು ಸೇರಿಸಿದರು. ಆದರೆ, ಮುಂಬೈ ಮಧ್ಯಮ ಓವರ್‌ಗಳಲ್ಲಿ ಹೋರಾಡಿ ಬೆಂಗಳೂರು 5 ವಿಕೆಟ್‌ಗೆ 65 ರನ್‌ಗಳಿಗೆ ಕುಗ್ಗಿಸಿತು. ಇದರ ಬೆನ್ನಲ್ಲಿಯೇ ಆರ್‌ಸಿಬಿ ಪಂದ್ಯ ಸೋಲುವ ಹಾದಿಯಲ್ಲಿತ್ತು. ಆದರೆ ನಾಡಿನ್ ಮತ್ತು ಅರುಂಧತಿ ರೆಡ್ಡಿ (20) ಆರನೇ ವಿಕೆಟ್‌ಗೆ 51 ಎಸೆತಗಳಲ್ಲಿ 52 ರನ್‌ಗಳನ್ನು ಸೇರಿಸಿ ಬೆಂಗಳೂರನ್ನು ನಿಧಾನವಾಗಿ ಪಂದ್ಯಕ್ಕೆ ಮರಳಿ ತಂದರು. ನಂತರ ಬಂದ ಅರುಂಧತಿ ಮತ್ತು ಶ್ರೇಯಾಂಕ ಪಾಟೀಲ್ (1) ಅವರನ್ನು ಔಟ್ ಮಾಡಿದ ನಂತರ ಮುಂಬೈ ಮತ್ತೆ ಹೋರಾಡಲು ಪ್ರಯತ್ನಿಸಿತು, ಆದರೆ ಪ್ರೇಮಾ ರಾವತ್ (4 ಎಸೆತಗಳಲ್ಲಿ 8 ನಾಟ್ ಔಟ್) ಜೊತೆಗೂಡಿದ ನಾಡಿನ್ ಯಾವುದೇ ಅಪಾಯವಿಲ್ಲದೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

Scroll to load tweet…