ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ನಾಯಕ ಶುಭ್‌ಮನ್ ಗಿಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ, ನಾಯಕನಾಗಿ ಕ್ಯಾಲೆಂಡರ್ ವರ್ಷವೊಂದರಲ್ಲಿ 5 ಶತಕ ಸಿಡಿಸಿದ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಗಿಲ್ ಅವರ ಈ ಇನ್ನಿಂಗ್ಸ್‌ನಿಂದ ಭಾರತ ತಂಡ ಬೃಹತ್ ಮೊತ್ತ ಕಲೆಹಾಕಿದೆ.
ನವದೆಹಲಿ: ಭಾರತ ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್, ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದರ ಜತೆಗೆ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಅಪರೂಪದ ದಾಖಲೆ ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡದ ನಾಯಕನಾಗಿ ನೇಮಕವಾಗಿದ್ದ ಶುಭ್‌ಮನ್ ಗಿಲ್ ತಮ್ಮ ರೆಡ್ ಹಾಟ್ ಫಾರ್ಮ್ ಮುಂದುವರೆಸಿದ್ದಾರೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ದಿನದಾಟದಂತ್ಯಕ್ಕೆ ಅಜೇಯ 20 ರನ್ ಬಾರಿಸಿದ್ದ ಶುಭ್‌ಮನ್ ಗಿಲ್, ಎರಡನೇ ದಿನದಾಟದಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಟೆಸ್ಟ್ ವೃತ್ತಿಜೀವನದ 10ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಒಟ್ಟು 176 ಎಸೆತಗಳನ್ನು ಎದುರಿಸಿದ ಶುಭ್‌ಮನ್ ಗಿಲ್ 14 ಬೌಂಡರಿ ಹಾಗೂ ಒಂದು ಮುಗಿಲೆತ್ತರದ ಸಿಕ್ಸರ್ ನೆರವಿನಿಂದ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಸರಿಗಟ್ಟಿದ ಗಿಲ್:
ಈ ಕ್ಯಾಲೆಂಡರ್ ವರ್ಷದಲ್ಲಿ ಶುಭ್‌ಮನ್ ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್ ಮುಂದುವರೆಸಿದ್ದಾರೆ. ಇದೀಗ ಶುಭ್‌ಮನ್ ಗಿಲ್ ಕ್ಯಾಲೆಂಡರ್ ವರ್ಷವೊಂದರಲ್ಲಿ 5 ಶತಕ ಸಿಡಿಸಿದ ಭಾರತದ ಕ್ಯಾಪ್ಟನ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ. ಶುಭ್‌ಮನ್ ಗಿಲ್, ನಾಯಕನಾಗಿ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ 4 ಶತಕ ಸಿಡಿಸಿದ್ದರು. ಇನ್ನು ವಿರಾಟ್ ಕೊಹ್ಲಿ 2017 ಹಾಗೂ 2018ರಲ್ಲಿ ನಾಯಕನಾಗಿ ಕ್ಯಾಲೆಂಡರ್ ವರ್ಷವೊಂದರಲ್ಲಿ 5 ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಆ ದಾಖಲೆಯನ್ನು ಇದೀಗ ಗಿಲ್ ಸರಿಗಟ್ಟಿದ್ದಾರೆ.
ಶುಭ್‌ಮನ್ ಗಿಲ್ ನಾಯಕನಾಗಿ ಕೇವಲ 12 ಇನ್ನಿಂಗ್ಸ್‌ಗಳನ್ನಾಡಿ 5ನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಅತಿ ಕಡಿಮೆ ಇನ್ನಿಂಗ್ಸ್‌ಗಳನ್ನಾಡಿ ಅತಿವೇಗವಾಗಿ 5+ ಶತಕ ಸಿಡಿಸಿ ಮೂರನೇ ಬ್ಯಾಟರ್ ಎನ್ನುವ ಹಿರಿಮೆಗೂ ಗಿಲ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್‌ನ ಅಲಿಸ್ಟರ್ ಕುಕ್ 9 ಇನ್ನಿಂಗ್ಸ್‌ಗಳನ್ನಾಡಿ ಹಾಗೂ ಭಾರತದ ಸುನಿಲ್ ಗವಾಸ್ಕರ್ ನಾಯಕನಾಗಿ ಮೊದಲ 10 ಇನ್ನಿಂಗ್ಸ್‌ಗಳಲ್ಲಿ 5 ಶತಕ ಸಿಡಿಸಿ ಮೊದಲೆರಡು ಸ್ಥಾನದಲ್ಲಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ 2013ರಿಂದ 2025ರವರೆಗೆ ಒಟ್ಟು 14 ಟೆಸ್ಟ್ ಪಂದ್ಯಗಳು ನಡೆದಿದ್ದು, ಈ ಪೈಕಿ 25 ಟೆಸ್ಟ್ ಶತಕಗಳು ದಾಖಲಾಗಿವೆ. 25 ಶತಕಗಳಲ್ಲಿ ಭಾರತೀಯ ಬ್ಯಾಟರ್‌ಗಳು 23 ಶತಕ ಸಿಡಿಸಿದ್ದರೇ, ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್ ಮಾತ್ರ ವಿಂಡೀಸ್ ಪರ ಎರಡು ಬಾರಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೃಹತ್ ಮೊತ್ತದತ್ತ ಭಾರತ:
ಸದ್ಯ 133 ಓವರ್ ಅಂತ್ಯದ ವೇಳೆಗೆ ಭಾರತ ಕೇವಲ 4 ವಿಕೆಟ್ ಕಳೆದುಕೊಂಡು 512 ರನ್ ಬಾರಿಸಿದೆ. ನಾಯಕ ಶುಭ್‌ಮನ್ ಗಿಲ್ 124 ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ 43 ರನ್ ಸಿಡಿಸಿದ್ದಾರೆ. ಇದಕ್ಕೂ ಮೊದಲು ಯಶಸ್ವಿ ಜೈಸ್ವಾಲ್ 175 ಹಾಗೂ ಸಾಯಿ ಸುದರ್ಶನ್ 87 ರನ್ ಸಿಡಿಸಿ ತಂಡಕ್ಕೆ ಅಮೂಲ್ಯ ರನ್ ಕಾಣಿಕೆ ನೀಡಿದ್ದಾರೆ.
