ಓವಲ್ ಕ್ರೀಡಾಂಗಣದಲ್ಲಿ ನಡೆದ ಗಂಭೀರ್ ಮತ್ತು ಪಿಚ್ ಕ್ಯುರೇಟರ್ ನಡುವಿನ ವಾಗ್ವಾದದ ಬಗ್ಗೆ ಗಿಲ್ ಪ್ರತಿಕ್ರಿಯಿಸಿದ್ದಾರೆ. ಪಿಚ್ ಪರಿಶೀಲಿಸುವ ಹಕ್ಕು ಗಂಭೀರ್‌ಗೆ ಇದೆ ಎಂದಿದ್ದಾರೆ. ಕ್ಯುರೇಟರ್ ಅನಗತ್ಯವಾಗಿ ಒರಟಾಗಿ ವರ್ತಿಸಿದರು ಎಂದು ಹೇಳಿದ್ದಾರೆ.
ಲಂಡನ್: ಓವಲ್ ಕ್ರೀಡಾಂಗಣದ ಪಿಚ್ ಕ್ಯುರೇಟರ್ ಹಾಗೂ ಭಾರತದ ಕೋಚ್ ಗೌತಮ್ ಗಂಭೀರ್ ನಡುವಿನ ವಾಗ್ವಾದದ ಬಗ್ಗೆ ಭಾರತದ ಕೋಚ್ ಶುಭ್‌ಮನ್ ಗಿಲ್ ಪ್ರತಿಕ್ರಿಯಿಸಿದ್ದು, ಕೋಚ್ ಆಗಿ ಗಂಭೀರ್‌ಗೆ ಪಿಚ್ ಪರಿಶೀಲಿಸುವ ಎಲ್ಲಾ ಹಕ್ಕು ಇದೆ ಎಂದಿದ್ದಾರೆ.
ಮಂಗಳವಾರ ಗಂಭೀರ್ ಹಾಗೂ ಸಹಾಯಕ ಕೋಚ್‌ಗಳು ಪಿಚ್ ಬಳಿ ನಿಂತಿದ್ದಾಗ, ಕ್ಯುರೇಟರ್ ಲೀ ಫೋರ್ಟಿಸ್ ಆಕ್ಷೇಪ ವ್ಯಕ್ತಪಡಿಸಿದ್ದರು. ಪಿಚ್‌ನಿಂದ 2.5 ಮೀಟರ್ ದೂರ ನಿಲ್ಲುವಂತೆ ಹೇಳಿದ್ದರು. ಆದರೆ ಕ್ಯುರೇಟರ್ ಒರಟಾಗಿ ವರ್ತಿಸಿದ್ದರು ಎಂದು ಗಂಭೀರ್ ಕೆರಳಿದ್ದರು. ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ ಗಿಲ್, ‘ಈ ಘಟನೆ ಅನಗತ್ಯ. ರಬ್ಬರ್ ಸ್ಪೈಕ್ ಅಥವಾ ಬರೀ ಪಾದದಲ್ಲಿ ಪಿಚ್ ಬಳಿ ನಡೆದಾಡಿದರೆ ಯಾವ ಸಮಸ್ಯೆಯೂ ಇಲ್ಲ. ಆದರೆ ಪಿಚ್ ಪರಿಶೀಲಿಸಲು ಕ್ಯುರೇಟರ್ ಯಾಕೆ ಬಿಡಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಮೊದಲ 4 ಪಂದ್ಯಗಳಲ್ಲಿ ಈ ರೀತಿ ಆಗಿರಲಿಲ್ಲ’ ಎಂದಿದ್ದಾರೆ.
3 ಮಹತ್ವದ ದಾಖಲೆ ಮೇಲೆ ಕಣ್ಣಿಟ್ಟಿರುವ ಗಿಲ್
ಗಿಲ್ ಈ ಪಂದ್ಯದಲ್ಲಿ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೆಸರಲ್ಲಿರುವ 3 ಮಹತ್ವದ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. 722 ರನ್ ಗಳಿಸಿರುವ ಗಿಲ್ ಇನ್ನು 52 ರನ್ ಸೇರಿಸಿದರೆ, ಭಾರತ ಪರ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್ ಕಲೆಹಾಕಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಗವಾಸ್ಕರ್ 1970-71ರಲ್ಲಿ ವಿಂಡೀಸ್ ವಿರುದ್ಧ 774 ರನ್ ಗಳಿಸಿದ್ದರು. ಇನ್ನು, ಭಾರತದ ನಾಯಕರಾಗಿ ಸರಣಿಯೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ದಾಖಲೆ ಬರೆಯಲು ಗಿಲ್‌ಗೆ 11 ರನ್ ಬೇಕು. ಗವಾಸ್ಕರ್ 1978-79ರಲ್ಲಿ ವಿಂಡೀಸ್ ಸರಣಿಯಲ್ಲಿ ನಾಯಕರಾಗಿ 732 ರನ್ ಗಳಿಸಿದ್ದರು.
ಇನ್ನು, ಸರಣಿಯಲ್ಲಿ ಭಾರತದ ನಾಯಕರಾಗಿ ಮತ್ತು ಆಟಗಾರರಾಗಿ ಗರಿಷ್ಠ ಸೆಂಚುರಿ ಬಾರಿಸಿದ ಆಟಗಾರ ಗವಾಸ್ಕರ್. ಅವರು ವಿಂಡೀಸ್ ವಿರುದ್ಧ 1971ರಲ್ಲಿ ಕೇವಲ ಬ್ಯಾಟರ್ ಆಗಿ 4, 1978-79ರಲ್ಲಿ ನಾಯಕರಾಗಿ 4 ಶತಕ ಬಾರಿಸಿದ್ದರು. ಗಿಲ್ ಸರಣಿಯಲ್ಲಿ 4 ಶತಕ ಸಿಡಿಸಿದ್ದಾರೆ.
2 ಟೆಸ್ಟ್ ನಡುವೆ ಕೇವಲ 3 ದಿನಗಳ ಅಂತರ: ಸ್ಟೋಕ್ಸ್, ಶುಭ್‌ಮನ್ ಅಸಮಾಧಾನ
ಲಂಡನ್: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 4ನೇ ಹಾಗೂ 5ನೇ ಟೆಸ್ಟ್ ಪಂದ್ಯಗಳ ನಡುವೆ ಕೇವಲ ಮೂರು ದಿನಗಳ ಅಂತರ ನೀಡಿದ್ದಕ್ಕೆ ಉಭಯ ತಂಡಗಳ ನಾಯಕರಾದ ಶುಭ್‌ಮನ್ ಗಿಲ್ ಹಾಗೂ ಬೆನ್ ಸ್ಟೋಕ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಟೋಕ್ಸ್, ‘5 ಪಂದ್ಯಗಳ ಸರಣಿಯಲ್ಲಿ 2 ಪಂದ್ಯಗಳ ನಡುವಿನ ಅಂತರ ಹೆಚ್ಚಿರಬೇಕು. ಒಂದೆರಡು ಪಂದ್ಯಕ್ಕೆ 8-9 ದಿನ ವಿಶ್ರಾಂತಿ ಕೊಟ್ಟರೆ, ಮತ್ತೊಂದು ಪಂದ್ಯಕ್ಕೆ 3 ಮಾತ್ರ ಇದೆ. ಇದು 2 ತಂಡಗಳಿಗೂ ಕಷ್ಟ’ ಎಂದಿದ್ದಾರೆ. ಗಿಲ್ ಕೂಡಾ ಈ ಬಗ್ಗೆ ಮಾತನಾಡಿದ್ದು, ‘2 ತಂಡಗಳು ಕಠಿಣ ಕ್ರಿಕೆಟ್ ಆಡುವಾಗ 3 ದಿನಗಳ ವಿಶ್ರಾಂತಿ ತುಂಬಾ ಕಡಿಮೆ. ಈ ಬಗ್ಗೆ 2 ದೇಶಗಳ ಮಂಡಳಿಗಳೇ ನಿರ್ಧಾರ ಕೈಗೊಳ್ಳಬೇಕು’ ಎಂದಿದ್ದಾರೆ.
ಬಿಸಿಸಿಐ ಕಚೇರಿಯಿಂದಲೇ 261 ಜೆರ್ಸಿ ಕದ್ದ ಭದ್ರತಾ ಮ್ಯಾನೇಜರ್ ಬಂಧನ!
ಮುಂಬೈ: ಮುಂಬೈನಲ್ಲಿರುವ ಬಿಸಿಸಿಐ ಕಚೇರಿಯಿಂದ ₹6.52 ಲಕ್ಷ ಮೌಲ್ಯದ 261 ಐಪಿಎಲ್ ಜೆರ್ಸಿಗಳನ್ನು ಕದ್ದೊಯ್ದ ಪ್ರಕರಣದಲ್ಲಿ ವಾಂಖೆಡೆ ಕ್ರೀಡಾಂಗಣದ ಭದ್ರತಾ ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ. 43 ವರ್ಷದ ಫಾರೂಖ್ ಅಸ್ಲಂ ಖಾನ್ ಬಂಧಿತ ವ್ಯಕ್ತಿ.
ಜೂ.13ರಂದು ಫಾರೂಖ್ ಜೆರ್ಸಿಗಳನ್ನು ಅಕ್ರಮವಾಗಿ ಸಾಗಿಸಿ, ಹರ್ಯಾಣದ ವ್ಯಾಪಾರಿಗೆ ಮಾರಿದ್ದಾರೆ. ಜೆರ್ಸಿ ನಾಪತ್ತೆಯಾಗಿದ್ದ ಬಗ್ಗೆ ಜು.17ರಂದು ಬಿಸಿಸಿಐ ಅಧಿಕಾರಿಗಳು ಮರೈನ್ ಡ್ರೈವ್ ಪೊಲೀಸ್ ಠಾಣೆಗೆ ದೂರಿ ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, 50 ಜೆರ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ.


