ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ಓವಲ್ ಮೈದಾನದಲ್ಲಿ ಕೋಚ್ ಗಂಭೀರ್ ಮತ್ತು ಪಿಚ್ ಕ್ಯುರೇಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಂದ್ಯಕ್ಕೂ ಮುನ್ನವೇ ಕುತೂಹಲ ಮೂಡಿಸಿದೆ.
ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಇದೇ ಜುಲೈ 31ರಿಂದ ಇಲ್ಲಿನ ದಿ ಓವಲ್ ಮೈದಾನದಲ್ಲಿ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯವು ಟೀಂ ಇಂಡಿಯಾ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದ್ದು, ಗಿಲ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ. ಹೀಗಿರುವಾಗಲೇ ಇಂದು(ಜು.29) ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್, ದಿ ಓವಲ್ ಮೈದಾನದ ಪಿಚ್ ಕ್ಯುರೇಟರ್ ಜತೆ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ಇದರ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್, ದಿ ಓವಲ್ ಪಿಚ್ ಕ್ಯುರೇಟರ್ ಲೀ ಫೋರ್ಟಿಸ್ ಅವರನ್ನು ಉದ್ದೇಶಿಸಿ, ನೀವು ಇಲ್ಲಿ ಕೇವಲ ಗ್ರೌಂಡ್ಸ್‌ಮನ್ ಅಷ್ಟೇ ಎನ್ನುವುದು ನೆನಪಿರಲಿ ಎಂದು ಹೇಳಿದ್ದಾರೆ. ಆದರೆ ಇದಕ್ಕೂ ಹಿಂದೆ ಈ ಇಬ್ಬರ ನಡುವೆ ಏನೆಲ್ಲಾ ಮತುಕತೆ ನಡೆದಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಇಬ್ಬರು ಮಾತಿನ ಚಕಮಕಿ ನಡೆಸಿದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಈ ಮಾತಿನ ಚಕಮಕಿ ದಿ ಓವಲ್ ಮೈದಾನದ ರನ್-ಅಪ್ ಏರಿಯಾದಲ್ಲಿಯೇ ನಡೆದಿದೆ. ಇಂದು ಮುಂಜಾನೆ ಆಟಗಾರರು ಮೈದಾನದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಸಂದರ್ಭದಲ್ಲಿಯೇ ಗೌತಮ್ ಗಂಭೀರ್ ಹಾಗೂ ಪಿಚ್ ಕ್ಯುರೇಟರ್ ನಡುವೆ ಬಿಸಿಬಿಸಿ ಚರ್ಚೆ ಜೋರಾಗಿದೆ. ಈ ವೇಳೆ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಿತಾನ್ಶು ಕೋಟಕ್ ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಇನ್ನು ಗೌತಮ್ ಗಂಭೀರ್ ದೂರ ಹೋದ ಬಳಿಕವೂ ಪಿಚ್ ಕ್ಯುರೇಟರ್ ಮೇಲೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಮಂಗಳವಾರ ಬೆಳಗಿನ ಸೆಷನ್‌ನಲ್ಲಿ ಟೀಂ ಇಂಡಿಯಾ ಆಟಗಾರರು ದಿ ಓವಲ್ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸಿದರು. ಭಾರತ ತಂಡವು ಸೋಮವಾರವೇ ಮ್ಯಾಂಚೆಸ್ಟರ್‌ನಿಂದ ಲಂಡನ್‌ಗೆ ಬಂದಿಳಿದಿದೆ. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಒಂದು ಹಂತದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಟೀಂ ಇಂಡಿಯಾ, ಕೊನೆಯ ಎರಡು ದಿನ ಅದ್ಭುತ ಪ್ರದರ್ಶನ ತೋರುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು.
ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯ ಬಗ್ಗೆ ಹೇಳುವುದಾದರೇ, ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 5 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಇದಾದ ಬಳಿಕ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಬರೋಬ್ಬರಿ 336 ರನ್ ಅಂತರದ ಗೆಲುವು ಸಾಧಿಸುವ ಮೂಲಕ ಬೆನ್ ಸ್ಟೋಕ್ಸ್ ಪಡೆಗೆ ತಿರುಗೇಟು ನೀಡವಲ್ಲಿ ಯಶಸ್ವಿಯಾಗಿತ್ತು.
ಇನ್ನು 1-1ರ ಸಮಬಲದೊಂದಿಗೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಮೂರನೇ ಟೆಸ್ಟ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಸಾಕಷ್ಟು ಕುತೂಹಲ ಮೂಡಿಸಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 22 ರನ್ ಅಂತರದ ರೋಚಕ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿತ್ತು. ಇನ್ನು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವು ರೋಚಕ ಡ್ರಾದಲ್ಲಿ ಅಂತ್ಯವಾಗಿದೆ. ಇದೀಗ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಗೆಲುವು ಇಲ್ಲವೇ ಡ್ರಾ ಮಾಡಿಕೊಂಡರೂ ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳಲಿದೆ. ಮ್ಯಾಂಚೆಸ್ಟರ್‌ನಲ್ಲಿ ದಿಟ್ಟ ಹೋರಾಟ ಮಾಡಿ ಪಂದ್ಯ ಡ್ರಾ ಮಾಡಿಕೊಂಡಿದ್ದ ಟೀಂ ಇಂಡಿಯಾ, ದಿ ಓವಲ್ ಟೆಸ್ಟ್ ಗೆದ್ದು, ಸರಣಿ ಸಮಬಲ ಮಾಡಿ ಇಂಗ್ಲೆಂಡ್ ಅಭಿಯಾನ ಮುಗಿಸಲು ಎದುರು ನೋಡುತ್ತಿದೆ.


