ಪತ್ನಿ ಜೊತೆ ಪ್ರೇಮಾನಂದ ಮಹಾರಾಜ್ ಭೇಟಿಯಾದ ಕೊಹ್ಲಿ, ಕಣ್ಣೀರಿಟ್ಟ ಅನುಷ್ಕಾ
Virat Kohli Anushka : ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ, ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ವಿಡಿಯೋಗಳು ವೈರಲ್ ಆಗ್ತಿವೆ.

ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ವಿರುಷ್ಕಾ
ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಮತ್ತೆ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಚಳಿಗಾಲದಲ್ಲಿ ಕೊಹ್ಲಿ ಪ್ರೇಮಾನಂದರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಕೊರೆಯುವ ಚಳಿಯಲ್ಲೂ ವಿರುಷ್ಕಾ ಭಕ್ತಿಗೆ ಯಾವುದೇ ಅಡ್ಡಿಯಾಗ್ಲಿಲ್ಲ.
ಪ್ರೇಮಾನಂದ ಮಹಾರಾಜರ ಮಹಾನ್ ಭಕ್ತರು
ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಪ್ರೇಮಾನಂದ ಮಹಾರಾಜರ ಮಹಾನ್ ಭಕ್ತರು. ಅವರು ಪ್ರೇಮಾನಂದ ಮಹಾರಾಜರ ಮಾತನ್ನು ಚಾಚೂ ತಪ್ಪದೆ ಪಾಲನೆ ಮಾಡ್ತಾರೆ. ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜರ ಆಶ್ರಮಕವಿದೆ.
ವಿಡಿಯೋ ವೈರಲ್
ಪ್ರೇಮಾನಂದ ಮಹಾರಾಜರ ಮುಂದೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮಂಡಿಯೂರಿ ಕುಳಿತಿದ್ದಾರೆ. ಅನುಷ್ಕಾ ಹಣೆಯ ಮೇಲೆ ತಿಲಕವಿದೆ. ಕೈಮುಗಿದ ಕುಳಿತಿರುವ ವಿರುಷ್ಕಾ ಪ್ರೇಮಾನಂದರ ಮಾತನ್ನು ಆಲಿಸ್ತಾ, ತಲೆಯಾಡಿಸ್ತಿದ್ದಾರೆ.
ಪ್ರೇಮಾನಂದರ ಹಿತವಚನ
ನಿಮ್ಮ ಕೆಲಸವನ್ನು ಸೇವೆಯೆಂದು ಪರಿಗಣಿಸಿ, ಗಂಭೀರವಾಗಿರಿ, ವಿನಮ್ರರಾಗಿರಿ ಮತ್ತು ದೇವರ ಹೆಸರನ್ನು ಜಪಿಸಿ ಎಂದು ವಿರುಷ್ಕಾಗೆ ಸಲಹೆ ನೀಡಿದ್ದಾರೆ. ನಮಗೆ ಎಲ್ಲ ಸುಖ ಸಿಕ್ಕಿದೆ ಅಂತ ಭಾವಿಸಿ. ನಿಮ್ಮ ಅಸಲಿ ತಂದೆಯನ್ನು ನೋಡುವ ಪ್ರಯತ್ನ ಮಾಡಿ. ಅದೇ ಆಸೆ ನಿಮಗಿರಬೇಕು, ಹಂಬಲ ಇರಬೇಕು ಎಂದು ಪ್ರೇಮಾನಂದ್ ಗುರೂಜಿ ಹೇಳಿದ್ದಾರೆ.
ಅನುಷ್ಕಾ ಕಣ್ಣೀರು
ಪ್ರೇಮಾನಂದ ಮಹಾರಾಜರ ಮಾತು ಕೇಳಿದ ಅನುಷ್ಕಾ, ನಾವು ನಿಮ್ಮವರು ಗುರೂಜಿ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಪ್ರೇಮಾನಂದ ಮಹಾರಾಜರು, ನಾವೆಲ್ಲರೂ ಶ್ರೀ ಜಿಗೆ ಸೇರಿದವರು. ನಾವು ಅವರ ರಕ್ಷಣೆಯಲ್ಲಿದ್ದೇವೆ. ನಾವೆಲ್ಲರೂ ಅವರ ಮಕ್ಕಳು ಎಂದಿದ್ದಾರೆ. ಗುರೂಜಿ ಮಾತು ಕೇಳಿದ ಅನುಷ್ಕಾ ಕಣ್ಣು ತುಂಬಿಕೊಂಡಿತ್ತು.
ಮಗುವಿನಂತೆ ತಲೆ ಆಡಿಸಿದ ಕೊಹ್ಲಿ
ಮೈದಾನದಲ್ಲಿ ಅದೆಷ್ಟೇ ಅಬ್ಬರಿಸಲಿ ಕುಟುಂಬ, ಗುರುಗಳ ವಿಷ್ಯ ಬಂದಾಗ ಕೊಹ್ಲಿ ಭಿನ್ನವಾಗಿ ನಿಲ್ತಾರೆ. ಪ್ರೇಮಾನಂದ ಮಹಾರಾಜರ ಮುಂದೆ ಚಿಕ್ಕ ಮಗುವಾಗಿದ್ದ ಕೊಹ್ಲಿ, ಕೈಮುಗಿದು ಕುಳಿತಿದ್ದರು. ಅವರು ಹೇಳಿದ ಎಲ್ಲ ಮಾತುಗಳನ್ನು ಕೇಳ್ತಾ ತಲೆಯಾಡಿಸುತ್ತಿದ್ದರು.
ಮೆಸ್ಸಿ ಬದಲು ಪ್ರೇಮಾನಂದ
ಫುಟ್ಬಾಲ್ ಆಟಗಾರ ಮೆಸ್ಸಿ ಪ್ರಸ್ತುತ ಭಾರತದಲ್ಲಿದ್ದಾರೆ. ಪ್ರತಿಯೊಬ್ಬ ಸೆಲೆಬ್ರಿಟಿ ಅವರನ್ನು ಭೇಟಿಯಾಗ್ತಿದ್ದಾರೆ. ಲಂಡನ್ ನಿಂದ ಬಂದಿರುವ ವಿರುಷ್ಕಾ ದಂಪತಿ ಕೂಡ ಮೆಸ್ಸಿ ಭೇಟಿಯಾಗ್ತಾರೆ ಅಂತ ಜನರು ಭಾವಿಸಿದ್ರು. ಆದ್ರೆ ವಿರುಷ್ಕಾ ಮೆಸ್ಸಿ ಭೇಟಿ ಬದಲು ವೃಂದಾವನದಲ್ಲಿ ಕಾಣಿಸಿಕೊಂಡಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ.
ಇದೇ ಮೊದಲಲ್ಲ
ಪ್ರೇಮಾನಂದ ಮಹಾರಾಜರನ್ನು ಕೊಹ್ಲಿ ಹಾಗೂ ಅನುಷ್ಕಾ ಭೇಟಿ ಮಾಡಿದ್ದು ಇದೇ ಮೊದಲಲ್ಲ. ಪ್ರತಿ ವರ್ಷ ಅವರಿಬ್ಬರು ಪ್ರೇಮಾನಂದ ಮಹಾರಾಜರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಾರೆ. ಮಕ್ಕಳನ್ನು ಆಶ್ರಮಕ್ಕೆ ಕರೆ ತರುತ್ತಾರೆ. ಈ ಹಿಂದೆ ಕೊಹ್ಲಿಯ ಇಬ್ಬರು ಮಕ್ಕಳು ಪ್ರೇಮಾನಂದ ಮಹಾರಾಜರ ಆಶೀರ್ವಾದವನ್ನು ಪಡೆದಿದ್ದರು.
ಕೊಹ್ಲಿ ವೃತ್ತಿ ಬದುಕು
ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಟಿ20 ಕ್ರಿಕೆಟ್ ನಿಂದ ನಿವೃತ್ತರಾಗಿದ್ದಾರೆ. ಅವರು ಏಕದಿನ ಕ್ರಿಕೆಟ್ ಮೇಲೆ ಗಮನಹರಿಸಿದ್ದಾರೆ. ವಿರಾಟ್ ಮುಂದಿನ ಗುರಿ 2027 ರ ಏಕದಿನ ವಿಶ್ವಕಪ್. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಗೆ ಕೊಹ್ಲಿ ಭಾಜನರಾಗಿದ್ದರು. ಮೂರು ಪಂದ್ಯಗಳಲ್ಲಿ ಎರಡು ಶತಕ ಮತ್ತು ಒಂದು ಅರ್ಧಶತಕ ಸಿಡಿಸಿದ್ದರು. ಇನ್ನು ಬಾಲಿವುಡ್ ನಟಿ ಅನುಷ್ಕಾ ಸಿನಿಮಾದಿಂದ ದೂರವಿದ್ದಾರೆ. ಲಂಡನ್ ನಲ್ಲಿ ನೆಲೆ ನಿಂತಿರುವ ಅನುಷ್ಕಾ, ಮಕ್ಕಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

