ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಶೋಯೆಬ್ ಮಲಿಕ್, ಕ್ವೆಟ್ಟಾ ಗ್ಲಾಡಿಯೇಟರ್ಸ್‌ ಎದುರಿನ ಪಂದ್ಯದ ವೇಳೆ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ಕರಾಚಿ(ಮಾ.02): ಪಾಕಿಸ್ತಾನ ಕ್ರಿಕೆಟ್ ದಂತಕಥೆ ಶೋಯೆಬ್ ಮಲಿಕ್ ಇದೀಗ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಇತ್ತೀಚೆಗಷ್ಟೇ ಮೂಗುತಿ ಸುಂದರಿ ಸಾನಿಯಾ ಮಿರ್ಜಾಗೆ ತಲಾಖ್ ನೀಡಿ, ಪಾಕಿಸ್ತಾನದ ನಟಿ ಸನಾ ಜಾವೆದ್ ಕೈಹಿಡಿದಿರುವ ಪಾಕ್ ಅನುಭವಿ ಆಲ್ರೌಂಡರ್ ಮಲಿಕ್ ಅದೃಷ್ಟ ಕೈಕೊಟ್ಟಿದೆ. 

ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಶೋಯೆಬ್ ಮಲಿಕ್, ಕ್ವೆಟ್ಟಾ ಗ್ಲಾಡಿಯೇಟರ್ಸ್‌ ಎದುರಿನ ಪಂದ್ಯದ ವೇಳೆ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಈ ಆವೃತ್ತಿಯ ಪಿಎಸ್‌ಎಲ್ ಟೂರ್ನಿಯಲ್ಲಿ ಪದೇ ಪದೇ ಲಯ ಕಂಡುಕೊಳ್ಳಲು ಎಡವುತ್ತಿದ್ದಾರೆ. ಶೋಯೆಬ್ ಮಲಿಕ್ ಫಾರ್ಮ್‌ ಕಳೆದುಕೊಂಡಿರುವುದು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೇ ಮೂರನೇ ಪತ್ನಿ ಸನಾ ಜಾವೆದ್‌ಗೂ ನಿರಾಸೆಯನ್ನುಂಟು ಮಾಡಿದೆ. ಇದರ ನಡುವೆ ಸಾನಿಯಾಗೆ ಕೈಕೊಟ್ಟು ಸನಾ ಕೈಹಿಡಿದಿದ್ದಕ್ಕೆ ಹೀಗಾಗಿದೆ ಎಂದು ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ.

ರನ್ ಗಳಿಸಲು ಮಲಿಕ್ ಪರದಾಟ:

40+ ವರ್ಷ ವಯಸ್ಸಾಗಿದ್ದರೂ ಇಂದಿಗೂ ಫಿಟ್ನೆಸ್ ವಿಚಾರದಲ್ಲಿ ಕೊಂಚವೂ ರಾಜಿಯಾಗದ ಶೋಯೆಬ್ ಮಲಿಕ್, ಕ್ವೆಟ್ಟಾ ಗ್ಲಾಡಿಯೇಟರ್ಸ್ ಎದುರಿನ ಪಂದ್ಯದ ವೇಳೆ ತಮ್ಮ ಝಲಕ್ ತೋರಿಸಲು ವಿಫಲವಾದರು. ಕರಾಚಿ ಕಿಂಗ್ಸ್ ಪರ 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಮಲಿಕ್ ರನ್ ಗಳಿಸಲು ಪರದಾಡಿದರು. ಕ್ವೆಟ್ಟಾ ಗ್ಲಾಡಿಯೇಟರ್ಸ್ ಎದುರು 20 ಎಸೆತಗಳನ್ನು ಎದುರಿಸಿ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾದರು. ಅಬ್ರಾರ್ ಅಹಮದ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಜೇಸನ್ ರಾಯ್ ಅವರಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

Scroll to load tweet…
Scroll to load tweet…

ಮಲಿಕ್ ಹುರಿದುಂಬಿಸಲು ಬಂದ ಸನಾಗೆ ನಿರಾಸೆ:

ಪಿಎಸ್‌ಎಲ್ ಶುರುವಾದಾಗಿನಿಂದ ಪತಿ ಶೋಯೆಬ್ ಮಲಿಕ್‌ ಅವರನ್ನು ಹುರಿದುಂಬಿಸಲು ಮೈದಾನಕ್ಕೆ ಬರುತ್ತಿರುವ ಸನಾ ಜಾವೆದ್‌ಗೆ ಪದೇ ಪದೇ ನಿರಾಸೆ ಎದುರಾಗುತ್ತಲೇ ಇದೆ. ನೂತನ ಪತಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದು ಸ್ವತಃ ಸನಾ ಜಾವೆದ್‌ಗೂ ಕೂಡಾ ಒಂದು ರೀತಿ ಮುಜುಗರವನ್ನುಂಟು ಮಾಡುತ್ತಿದೆ. 

Scroll to load tweet…

ಮೂರನೇ ಮದುವೆಯಾಗಿರುವ ಮಲಿಕ್:

ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಕೆಲದಿನಗಳ ಹಿಂದಷ್ಟೇ ಅಚ್ಚರಿಯ ರೀತಿಯಲ್ಲಿ ಮೂಗುತಿ ಸುಂದರಿ ಸಾನಿಯಾ ಮಿರ್ಜಾಗೆ ವಿಚ್ಚೇದನಾ ನೀಡಿದ್ದರು. ಈ ಮೂಲಕ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರ 14 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿತ್ತು. ಸಾನಿಯಾ ಹಾಗೂ ಶೋಯೆಬ್ ದಂಪತಿಗೆ ಇಜಾನ್ ಮಿರ್ಜಾ ಮಲಿಕ್ ಎನ್ನುವ ಮಗನಿದ್ದು, ಇಜಾನ್ ತಾಯಿ ಜತೆ ವಾಸವಾಗಿದ್ದಾನೆ. ಸಾನಿಯಾ ಮಿರ್ಜಾಗೆ ತಲಾಖ್ ನೀಡಿದ ಬಳಿಕ ಶೋಯೆಬ್ ಮಲಿಕ್ ಪಾಕಿಸ್ತಾನದ ನಟಿ ಸನಾ ಜಾವೆದ್ ಜತೆ ಮೂರನೇ ಮದುವೆಯಾಗಿದ್ದಾರೆ.