ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಉಂಗುರದ ಬೆರಳಿನ ಗಾಯದ ಸಮಸ್ಯೆಯಿಂದಾಗಿ 2025-26ನೇ ಸಾಲಿನ ಸೌಥ್ ಆಫ್ರಿಕಾ ಟಿ20 ಲೀಗ್‌ನಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಅವರ ಅನುಪಸ್ಥಿತಿಯಲ್ಲಿ, ತಂಡವು ಹೊಸ ನಾಯಕನ ಹುಡುಕಾಟದಲ್ಲಿದೆ.
ಜೋಹಾನ್ಸ್‌ಬರ್ಗ್: 2025-26ನೇ ಸಾಲಿನ ಸೌಥ್ ಆಫ್ರಿಕಾ ಟಿ20 ಲೀಗ್ ಭರ್ಜರಿಯಾಗಿ ಸಾಗುತ್ತಿದೆ. ಈಗಾಗಲೇ ಟೂರ್ನಿಯ ಮೊದಲಾರ್ಧ ಮುಕ್ತಾಯವಾಗಿದ್ದು, ದ್ವಿತಿಯಾರ್ಧದ ಸಾಕಷ್ಟು ರೋಚಕತೆ ಕಾಯ್ದುಕೊಳ್ಳುತ್ತಾ ಸಾಗುತ್ತಿದೆ. ಹೀಗಿರುವಾಗಲೇ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಮುನ್ನುಗ್ಗುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ತಂಡವಾದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಗಾಯದ ಸಮಸ್ಯೆಯಿಂದಾಗಿ ಫಾಫ್ ಡು ಪ್ಲೆಸಿಸ್ SA20 ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡವು ಹೊಸ ನಾಯಕನ ಹುಡುಕಾಟದಲ್ಲಿದೆ. ಸದ್ಯ ಫಾಫ್ ಡು ಪ್ಲೆಸಿಸ್ ಇದೀಗ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡದಲ್ಲಿರುವ ಇಬ್ಬರು ಆಟಗಾರರು ಇದೀಗ ನಾಯಕರಾಗುವ ರೇಸ್‌ನಲ್ಲಿದ್ದಾರೆ.
SA20 ಟೂರ್ನಿಯಿಂದ ಫಾಫ್ ಡು ಪ್ಲೆಸಿಸ್ ಔಟ್:
ಎಂಐ ಕೇಪ್‌ಟೌನ್ ಎದುರು ಜನವರಿ 10ರಂದು ನಡೆದ ಪಂದ್ಯದಲ್ಲಿ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕ ಹಾಗೂ ಆರಂಭಿಕ ಬ್ಯಾಟರ್ ಫಾಫ್ ಡು ಪ್ಲೆಸಿಸ್, ಉಗುಂರದ ಬೆರಳಿನ ಗಾಯಕ್ಕೆ ಒಳಗಾಗಿದ್ದಾರೆ. ಇದೇ ಕಾರಣದಿಂದ ಸಂಪೂರ್ಣ ಟೂರ್ನಿಯಿಂದಲೇ ಫಾಫ್ ಹೊರಬಿದ್ದಿದ್ದಾರೆ. ಇದೀಗ ಸಿಎಸ್‌ಕೆ ಫ್ರಾಂಚೈಸಿಯು, ಫಾಫ್ ಸರ್ಜರಿಗೆ ಒಳಗಾಗಲಿದ್ದಾರೆ ಎನ್ನುವುದನ್ನು ಖಚಿತಪಡಿಸಿದೆ. ಇದೀಗ ಫಾಫ್ ಡು ಪ್ಲೆಸಿಸ್ SA20 ಲೀಗ್ ಜತೆಜತೆಗೆ 2026ರ ಪಾಕಿಸ್ತಾನ ಸೂಪರ್ ಲೀಗ್‌ನಿಂದಲೂ ಹೊರಬಿದ್ದಿದ್ದಾರೆ. ಅಂದಹಾಗೆ ಫಾಫ್ ಡು ಪ್ಲೆಸಿಸ್ ಚೇತರಿಸಿಕೊಳ್ಳಲು ಇನ್ನೆಷ್ಟು ಸಮಯ ಬೇಕಾಗಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. 'ನಮ್ಮ ನಾಯಕನಿಗೆ ನಮ್ಮೆಲ್ಲರ ಪ್ರೀತಿ ನಿಮ್ಮ ಜತೆ ಇರಲಿದೆ. ಉಂಗುರದ ಬೆರಳಿನ ಗಾಯಕ್ಕೆ ಒಳಗಾಗಿರುವುದರಿಂದ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರು ಸರ್ಜರಿಗೆ ಒಳಗಾಗಲಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳಲಿ' ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದ ಫಾಫ್ ಡು ಪ್ಲೆಸಿಸ್:
ದಕ್ಷಿಣ ಆಫ್ರಿಕಾ ಮೂಲದ 41 ವರ್ಷದ ಅನುಭವಿ ಆಟಗಾರ ಫಾಫ್ ಡು ಪ್ಲೆಸಿಸ್ ಕಳೆದ ಐದು ಪಂದ್ಯಗಳಲ್ಲಿ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ಪರ 27ರ ಸರಾಸರಿ ಹಾಗೂ 151.68ರ ಸ್ಟ್ರೈಕ್‌ರೇಟ್‌ನಲ್ಲಿ 135 ರನ್ ಸಿಡಿಸಿದ್ದರು. ಫಾಫ್ ಡು ಪ್ಲೆಸಿಸ್ ನೇತೃತ್ವದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡವು ಹೊಸ ನಾಯಕನ ಹುಡುಕಾಟದಲ್ಲಿದ್ದು, ರಿಲೇ ರೂಸೌ ಹಾಗೂ ವಿಯಾನ್ ಮುಲ್ಡರ್ ಈ ಇಬ್ಬರ ಪೈಕಿ ಒಬ್ಬರಿಗೆ ನಾಯಕತ್ವ ಪಟ್ಟ ಕಟ್ಟುವ ಸಾಧ್ಯತೆಯಿದೆ. ಈ ಇಬ್ಬರು ಆಟಗಾರರು SA20 ಟೂರ್ನಿಯಲ್ಲಿ ಇಲ್ಲಿಯವರೆಗೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇನ್ನು ಫಾಫ್ ಡು ಪ್ಲೆಸಿಸ್‌ಗೆ ಬದಲಿ ಆಟಗಾರನಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳಲಿದೆ ಎನ್ನುವ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.


