2025ರ ಐಪಿಎಲ್ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತದ ಬಳಿಕ, ಆರ್‌ಸಿಬಿ 2026ರ ಐಪಿಎಲ್‌ಗೆ ಹೊಸ ತವರು ಮೈದಾನದ ಹುಡುಕಾಟದಲ್ಲಿದೆ. ಸುರಕ್ಷತಾ ವರದಿಯಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆ ಅಲಭ್ಯವಾಗಿದೆ.
Royal Challengers Bengaluru: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನಗೆ ಶುರುವಾಗಿದೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಎಲ್ಲರ ಕಣ್ಣಿದೆ. ಯಾಕೆಂದರೆ ಆರ್‌ಸಿಬಿ ಫ್ರಾಂಚೈಸಿಯು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಹೊಸ ತವರು ಮೈದಾನದ ಹುಡುಕಾಟದಲ್ಲಿದೆ.
2025ರವರೆಗೂ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಬೆಂಗಳೂರು ಪಾಲಿಗೆ ತವರಿನ ಮೈದಾನವಾಗಿತ್ತು. ಆರ್‌ಸಿಬಿ ಸಂಭ್ರಮಾಚರಣೆ ವೇಳೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಕೊನೆಯುಸಿರೆಳೆದಿದ್ದರು. ಇದಾದ ಬಳಿಕ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ. ಇನ್ನು ವಿಜಯ್ ಹಜಾರೆ ಟ್ರೋಫಿ ಆಯೋಜನೆಗೊಳ್ಳಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಆರ್‌ಸಿಬಿ ಫ್ರಾಂಚೈಸಿಯು ಹೊಸತಾದ ತವರು ಮೈದಾನದ ಹುಡುಕಾಟದಲ್ಲಿದ್ದು, ಈ ಕುರಿತಂತೆ ಮಹತ್ವದ ಅಪ್‌ಡೇಟ್ಸ್ ಹೊರಬಿದ್ದಿದೆ.
ಪುಣೆಯಲ್ಲ ಈ ಎರಡು ಸ್ಟೇಡಿಯಂಗಳು ಆರ್‌ಸಿಬಿ ಹೋಮ್ ಗ್ರೌಂಡ್ ಆಗುವ ಸಾಧ್ಯತೆ:
ಈ ಮೊದಲು ಒಂದು ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮ್ಯಾಚ್ ನಡೆಯದೇ ಹೋದರೇ, ನಾವು ಪುಣೆಯಲ್ಲಿ ಆರ್‌ಸಿಬಿ ಪಂದ್ಯಗಳಿಗೆ ಆತಿಥ್ಯ ವಹಿಸಲು ರೆಡಿ ಎಂದು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯು ಈಗಾಗಲೇ ಅಧಿಕೃತವಾಗಿ ಆಫರ್ ನೀಡಿದೆ. ಇನ್ನು ಆರ್‌ಸಿಬಿ ಫ್ರಾಂಚೈಸಿ ಸಿಬ್ಬಂದಿಗಳು ಪುಣೆ ಸ್ಟೇಡಿಯಂಗೆ ಭೇಟಿ ನೀಡಿದ್ದರು ಎಂದೆಲ್ಲಾ ವರದಿಯಾಗಿತ್ತು. ಆದರೆ ಇದೀಗ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಫ್ರಾಂಚೈಸಿಯು ನವಿ ಮುಂಬೈ ಇಲ್ಲವೇ ರಾಯ್ಪುರ ಸ್ಟೇಡಿಯಂ ಅನ್ನು ತನ್ನ ತವರು ಮೈದಾನವನ್ನಾಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಆರ್‌ಸಿಬಿ ತವರು ಮೈದಾನ ಶಿಫ್ಟ್ ಆಗಲು ಕಾರಣ ಏನು?
2025ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.ಇದಾದ ಮರು ದಿನ ಅಂದರೆ ಜೂನ್ 04ರಂದು ಆರ್‌ಸಿಬಿ ತಂಡವು ತಮ್ಮ ತವರು ಬೆಂಗಳೂರಿಗೆ ವಾಪಾಸ್ ಆಯಿತು. ಆರ್‌ಸಿಬಿ ಸಂಭ್ರಮಾಚರಣೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಏಕಕಾಲದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜಮಾಯಿಸಿದ್ದರು. ಸೂಕ್ತ ಮುನ್ನೆಚ್ಚರಿಕೆ ವಹಿಸದೇ ಕಾರ್ಯಕ್ರಮ ಆಯೋಜಿಸಿದ ಪರಿಣಾಮ ಸುಮಾರು 11 ಮಂದಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತಕ್ಕೆ ಸಿಕ್ಕು ಕೊನೆಯುಸಿದರೆಳೆದರೆ, ಇನ್ನು ಕೆಲವು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಇದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಘಟನೆಯ ಕುರಿತಂತೆ ಮೈಕಲ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ, ಸೂಕ್ತ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಈ ಘಟನೆಯ ಕುರಿತಂತೆ ಸಮಗ್ರ ತನಿಖೆ ನಡೆಸಿದ ಈ ಸಮಿತಿಯು, ಚಿನ್ನಸ್ವಾಮಿ ಸ್ಟೇಡಿಯಂ ದೊಡ್ಡ ಟೂರ್ನಿಗಳನ್ನು ಆಯೋಜಿಸಲು ಸುರಕ್ಷಿತವಾಗಿಲ್ಲ ಎನ್ನುವ ವರದಿ ಸಲ್ಲಿಸಿತ್ತು. ಹೀಗಾಗಿ ಇದಾದ ಬಳಿಕ ಇಲ್ಲಿ ಯಾವುದೇ ಪಂದ್ಯಾಟಗಳು ನಡೆಯುತ್ತಿಲ್ಲ.
ಇನ್ನೂ ಅಧಿಕೃತ ತೀರ್ಮಾನವಾಗಿಲ್ಲ!
ಇದೆಲ್ಲದರ ನಡುವೆ ವೆಂಕಟೇಶ್ ಪ್ರಸಾದ್ ನೇತೃತ್ವದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಶತಾಯಗತಾಯ ಮುಂಬರುವ ಐಪಿಎಲ್ ಟೂರ್ನಿಯನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆಯೋಜಿಸಲು ಪಣತೊಟ್ಟಿದೆ. ಇದೇ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಐಪಿಎಲ್ ನಡೆಯುತ್ತಾ ಅಥವಾ ಬೇರೆಡೆಗೆ ಮ್ಯಾಚ್ ಶಿಫ್ಟ್ ಆಗುತ್ತಾ ಎನ್ನುವ ಬಗ್ಗೆ ಕರ್ನಾಟಕ ಸರ್ಕಾರ ಹಾಗೂ ಆರ್‌ಸಿಬಿ ಫ್ರಾಂಚೈಸಿ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.


