ಭಾರತೀಯ ಕ್ರಿಕೆಟಿಗ ಮೋಹಿತ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 14 ವರ್ಷಗಳ ವೃತ್ತಿಜೀವನದಲ್ಲಿ, ಅವರು ಭಾರತ, ಹರಿಯಾಣ, ಮತ್ತು ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ಗುಜರಾತ್ ಟೈಟಾನ್ಸ್‌ನಂತಹ ತಂಡಗಳನ್ನು ಪ್ರತಿನಿಧಿಸಿದ್ದರು. 

ಬೆಂಗಳೂರು (ಡಿ.3): ಮೋಹಿತ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ಮೋಹಿತ್ ಶರ್ಮಾ ತಮ್ಮ ನಿರ್ಧಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ: "ಇಂದು, ಪೂರ್ಣ ಹೃದಯದಿಂದ, ನಾನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತೇನೆ. ಹರಿಯಾಣವನ್ನು ಪ್ರತಿನಿಧಿಸುವುದರಿಂದ ಹಿಡಿದು ಭಾರತದ ಜೆರ್ಸಿಯನ್ನು ಧರಿಸಿ ಐಪಿಎಲ್‌ನಲ್ಲಿ ಆಡುವವರೆಗೆ, ಈ ಪ್ರಯಾಣವು ದೊಡ್ಡ ಆಶೀರ್ವಾದಕ್ಕಿಂತ ಕಡಿಮೆಯೇನಲ್ಲ'ಎಂದು ಅವರು ಬರೆದುಕೊಂಡಿದ್ದಾರೆ.

14 ವರ್ಷಗಳ ವೃತ್ತಿಪರ ಕ್ರಿಕೆಟ್‌ನಲ್ಲಿ ಅವರು ಹಲವು ತಂಡಗಳ ಪರವಾಗಿ ಆಡಿದ್ದಾರೆ. 2011ರಲ್ಲಿ ಹರಿಯಾಣ ಪರವಾಗಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮೋಹಿತ್‌ ಶರ್ಮ, ಅದಾದ ಕೆಲವೇ ವರ್ಷಗಳಲ್ಲಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರವಾಗಿ ಆಡುವ ಮೂಲಕ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಭಾರತದ ಪರವಾಗಿ 2013 ರಿಂಧ 2015ರ ಅವಧಿಯಲ್ಲಿ 26 ಏಕದಿನ, 8 ಟಿ20ಐ ಆಡಿದ್ದ ಮೋಹಿತ್‌ ಶರ್ಮ, ಸೀಮಿತ ಓವರ್‌ಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 37 ವಿಕೆಟ್‌ ಕಬಳಿಸಿದ್ದಾರೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ರಮುಖ ಹೊಸ ಚೆಂಡಿನ ಬೌಲರ್‌ ಆಗಿದ್ದರು, ತಂಡದ ಪರವಾಗಿ ಕೊನೆಯ ಕೆಲವು ವರ್ಷಗಳಲ್ಲಿ ಅವರು ಡೆತ್‌ ಓವರ್‌ ಸ್ಪೆಷಲಿಸ್ಟ್‌ ಬೌಲರ್‌ ಆಗಿ ಅನುಭವ ಪಡೆದುಕೊಂಡಿದ್ದರು.ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪರವಾಗಿ ಆಡಿದ ಬಳಿಕ ಅವರ ಕ್ರಿಕೆಟ್‌ ಜೀವನ 2023ರಲ್ಲಿ ಗುಜತಾರ್‌ ಟೈಟಾನ್ಸ್‌ನಲ್ಲಿ ಉತ್ತುಂಗಕ್ಕೇರಿತ್ತು. ತಮ್ಮ 35ನೇ ವರ್ಷದಲ್ಲಿ ಅವರು 27 ವಿಕೆಟ್‌ ಉರುಳಿಸುವ ಮೂಲಕ ಪರ್ಪಲ್‌ ಕ್ಯಾಪ್‌ ಗೆಲ್ಲುವ ಸನಿಹ ಬಂದಿದ್ದರು.

ಕಳೆದ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಟ

2025ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರವಾಗಿ ಆಡಿದ ಮೋಹಿತ್‌ ಶರ್ಮ, ಆಡಿದ 8 ಪಂದ್ಯಗಳಿಂದ ಕೇವಲ 2 ವಿಕೆಟ್‌ ಉರುಳಿಸಿದ್ದರು. ಇತ್ತೀಚೆಗೆ ಅವರನ್ನು ದೆಹಲಿ ಫ್ರಾಂಚೈಸಿ ತಂಡದಿಂದ ರಿಲೀಸ್‌ ಮಾಡಿತ್ತು.

"ನನ್ನ ವೃತ್ತಿಜೀವನದ ಬೆನ್ನೆಲುಬಾಗಿ ನಿಂತಿದ್ದಕ್ಕಾಗಿ ಹರಿಯಾಣ ಕ್ರಿಕೆಟ್ ಅಸೋಸಿಯೇಷನ್‌ಗೆ ವಿಶೇಷ ಧನ್ಯವಾದಗಳು. ಮತ್ತು ನನ್ನ ಮೇಲಿನ ನಿರಂತರ ಮಾರ್ಗದರ್ಶನ ಮತ್ತು ನಂಬಿಕೆಯು ಪದಗಳಲ್ಲಿ ವ್ಯಕ್ತಪಡಿಸಲಾಗದ ರೀತಿಯಲ್ಲಿ ನನ್ನ ಹಾದಿಯನ್ನು ರೂಪಿಸಿದ ಅನಿರುದ್ಧ್ ಸರ್‌ಗೆ ನನ್ನ ಆಳವಾದ ಕೃತಜ್ಞತೆಗಳು. ಬಿಸಿಸಿಐ, ನನ್ನ ತರಬೇತುದಾರರು, ನನ್ನ ತಂಡದ ಸದಸ್ಯರು, ಐಪಿಎಲ್ ಫ್ರಾಂಚೈಸಿಗಳು, ಬೆಂಬಲ ಸಿಬ್ಬಂದಿ ಮತ್ತು ನನ್ನ ಎಲ್ಲಾ ಸ್ನೇಹಿತರಿಗೆ ಅವರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು" ಎಂದು ಮೋಹಿತ್ ಬರೆದಿದ್ದಾರೆ.

"ನನ್ನ ಮನಸ್ಥಿತಿ ಬದಲಾವಣೆಗಳು ಮತ್ತು ಕೋಪವನ್ನು ಯಾವಾಗಲೂ ನಿಭಾಯಿಸಿದ ಮತ್ತು ಎಲ್ಲದರಲ್ಲೂ ನನಗೆ ಬೆಂಬಲ ನೀಡಿದ ನನ್ನ ಹೆಂಡತಿಗೆ ವಿಶೇಷ ಧನ್ಯವಾದಗಳು. ಆಟವನ್ನು ಹೊಸ ರೀತಿಯಲ್ಲಿ ಪೂರೈಸಲು ನಾನು ಎದುರು ನೋಡುತ್ತಿದ್ದೇನೆ." ಎಂದು ಬರೆದಿದ್ದಾರೆ.

ಐಪಿಎಲ್‌ನಲ್ಲಿ 120 ಪಂದ್ಯವಾಡಿರುವ ಮೋಹಿತ್‌ ಶರ್ಮ

2015ರ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಮೋಹಿತ್ ಪಾತ್ರರಾಗಿದ್ದರು, 2014ರ ಋತುವಿನಲ್ಲಿ ಸಿಎಸ್‌ಕೆ ಪರ 23 ವಿಕೆಟ್‌ಗಳನ್ನು ಕಬಳಿಸಿ, ಭಾರತಕ್ಕೆ ಪಾದಾರ್ಪಣೆ ಮಾಡುವ ಮೊದಲೇ ಪರ್ಪಲ್ ಕ್ಯಾಪ್ ಪಡೆದರು. ಐಪಿಎಲ್‌ನಲ್ಲಿ 120 ಪಂದ್ಯಗಳಲ್ಲಿ ಆಡಿರುವ ಮೋಹಿತ್ 134 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

View post on Instagram

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ಮೋಹಿತ್ 44 ಪಂದ್ಯಗಳಲ್ಲಿ 127 ವಿಕೆಟ್‌ಗಳನ್ನು, 78 ಲಿಸ್ಟ್ ಎ ಪಂದ್ಯಗಳಲ್ಲಿ 86 ವಿಕೆಟ್‌ಗಳನ್ನು ಮತ್ತು 172 ಟಿ20 ಪಂದ್ಯಗಳಲ್ಲಿ 167 ವಿಕೆಟ್‌ಗಳನ್ನು ಪಡೆದಿದ್ದಾರೆ.