ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ ರೋಹಿತ್ ಶರ್ಮಾ, ತಮ್ಮ 2027ರ ವಿಶ್ವಕಪ್ ಆಡುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಈ ಶತಕದ ಬಗ್ಗೆ ಮಾತನಾಡಿರುವ ಮೊಹಮ್ಮದ್ ಕೈಫ್, ಇದು 'ಧೈರ್ಯವಿದ್ದರೆ ನನ್ನನ್ನು ಕೈಬಿಟ್ಟು ನೋಡಿ' ಎಂದು ಆಯ್ಕೆ ಸಮಿತಿಗೆ ರೋಹಿತ್ ನೀಡಿದ ಸವಾಲು ಎಂದು ವಿಶ್ಲೇಷಿಸಿದ್ದಾರೆ.

ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಮುಗಿದೇ ಹೋಯ್ತು ಎಂದು ಬೊಬ್ಬೆಹೊಡೆಯುತ್ತಿದ್ದವರು ಈಗ ಸೈಲೆಂಟ್ ಆಗಿದ್ದಾರೆ. ಇಂಗ್ಲೆಂಡ್ ಎದುರಿನ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದ ರೋಹಿತ್ ಶರ್ಮಾ, ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ದೊಡ್ಡ ಶತಕ ಸಿಡಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಇದಷ್ಟೇ ಅಲ್ಲದೇ 2027ರ ಏಕದಿನ ವಿಶ್ವಕಪ್ ಆಡಲು ನನ್ನಲ್ಲಿ ಇನ್ನೂ ಸಾಮರ್ಥ್ಯವಿದೆ ಎನ್ನುವ ಸ್ಪಷ್ಟ ಸಂದೇಶವನ್ನು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ರವಾನಿಸಿದ್ದರು.

ಲಾರ್ಡ್ಸ್‌ ಏಕದಿನ ಪಂದ್ಯವೇ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಿದೆ ಎನ್ನುವುದನ್ನು ಕ್ರಿಕೆಟ್ ಪಂಡಿತರು ಷರಾ ಬರೆದು ಬಿಟ್ಟಿದ್ದರು. ಬಿಸಿಸಿಐ ಆಯ್ಕೆ ಸಮಿತಿಯು ಈ ವಿಚಾರವನ್ನು ರೋಹಿತ್ ಶರ್ಮಾಗೆ ಸೂಕ್ಷ್ಮವಾಗಿ ತಿಳಿಸಿದ್ದು, 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬದಲಿ ಆಟಗಾರನ ಹುಡುಕಾಟದಲ್ಲಿದೆ ಎಂದೆಲ್ಲಾ ವರದಿಯಾಗಿತ್ತು. ಆದರೆ ಹಿಟ್‌ಮ್ಯಾನ್ ಬಾರಿಸಿದ ಒಂದೇ ಒಂದು ಶತಕ ಎಲ್ಲರ ಬಾಯಿ ಮುಚ್ಚಿಸಿತ್ತು.

ಅಚ್ಚರಿ ಮೂಡಿದ ಮೊಹಮ್ಮದ್ ಕೈಫ್ ಹೇಳಿಕೆ:

ರೋಹಿತ್ ಶರ್ಮಾ ಬಾರಿಸಿದ ಆ ಶತಕದ ಕುರಿತಂತೆ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಕೈಫ್ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. 'ರೋಹಿತ್ ಶರ್ಮಾ ಶತಕ ಬಾರಿಸುತ್ತಿದ್ದಂತೆಯೇ ಒಂದು ವಿಚಾರವನ್ನು ಖಚಿತಪಡಿಸಿದ್ರು, ಅದೇನಂದ್ರೆ, ನಾನು ಚೆನ್ನಾಗಿ ಆಡಿಲ್ಲವೆಂದ್ರೆ, ನೀವು ನಿಮ್ಮ ನಿರ್ಧಾರ ತೆಗೆದುಕೊಳ್ಳಿ, ಬೇಕಿದ್ರೆ ತಂಡದಿಂದ ಕೈಬಿಡಿ ಎನ್ನುವಂತಿತ್ತು ಎಂದಿದ್ದಾರೆ.

'ಅವರು ಕ್ರಿಕೆಟ್‌ನಿಂದ ಹಿಂದೆ ಸರಿದಿಲ್ಲ ಅಥವಾ ನಿವೃತ್ತಿಯನ್ನು ಘೋಷಿಸಿಲ್ಲ ಎಂಬುದು, ಅವರು ತೋರುತ್ತಿರುವ ಉತ್ಸಾಹ, ಬ್ಯಾಟಿಂಗ್‌ಗೆ ಅವರು ನೀಡುತ್ತಿರುವ ಆದ್ಯತೆ ಮತ್ತು ಲಾರ್ಡ್ಸ್‌ನಲ್ಲಿ ಅವರು ಗಳಿಸಿದ ಶತಕ - ಇವೆಲ್ಲವೂ ಅವರು ಈಗ ಸಂಪೂರ್ಣವಾಗಿ ಆಟದತ್ತಲೇ ಗಮನಹರಿಸಿದ್ದಾರೆ ಎಂಬುದನ್ನು ತೋರಿಸಿಕೊಡುತ್ತವೆ. ಅದಾದ ನಂತರ ಆಯ್ಕೆಗಾರರು ಏನು ಮಾಡಲು ಬಯಸುತ್ತಾರೋ ಅದು ಅವರಿಗೆ ಬಿಟ್ಟ ವಿಷಯ. ಬಹುಶಃ, ಆಂತರಿಕವಾಗಿ ಅವರಿಗೆ ಕೆಲವು ವಿಷಯಗಳ ಬಗ್ಗೆ ಮನವರಿಕೆ ಮಾಡುವ ಪ್ರಯತ್ನವನ್ನು ಈ ಹಿಂದೆ ಮಾಡಲಾಗಿತ್ತೇನೋ. ಈಗಿನ ಸಮಸ್ಯೆ ಏನೆಂದರೆ ಯಾರು ಎಲ್ಲಿ ನಿಂತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಬಹಳಷ್ಟು ಗೊಂದಲಗಳಿವೆ' ಎಂದು ಕೈಫ್ ಹೇಳಿದ್ದಾರೆ.

ಕೆಲವೊಮ್ಮೆ, ಕೋಚಿಂಗ್ ಸಿಬ್ಬಂದಿಯ ಸದಸ್ಯರು ಮುಂದೆ ಬಂದು, 'ರೋಹಿತ್ ಶರ್ಮಾ ಅವರಿಗೆ ತಮ್ಮ ಸಹಜ ಆಟವನ್ನು ಆಡಲು ನಾವು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ' ಎಂದು ಹೇಳುತ್ತಾರೆ. ಆದರೆ, '2027ರ ವಿಶ್ವಕಪ್‌ಗಾಗಿನ ನಮ್ಮ ಯೋಜನೆಗಳಲ್ಲಿ ರೋಹಿತ್ ಶರ್ಮಾ ಭಾಗವಾಗಿದ್ದಾರೆ' ಎಂದು ಯಾರೂ ಇನ್ನೂ ಸ್ಪಷ್ಟವಾಗಿ ಹೇಳಿಲ್ಲ. "ಆ ಹೇಳಿಕೆಯೂ ಬರಬೇಕಿದೆ. ರೋಹಿತ್ ಶರ್ಮಾ ಅವರ ಫಾರ್ಮ್ ಸಹಜವಾಗಿಯೇ ಏರಿಳಿತ ಕಾಣುತ್ತದೆ. ಅವರು ಒಂದು ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಬಹುದು, ಆದರೆ ತಾವು ಅವರ ಬೆಂಬಲಕ್ಕೆ ನಿಂತಿದ್ದೇವೆ ಎಂಬುದನ್ನು ಆಡಳಿತ ಮಂಡಳಿ ಸ್ಪಷ್ಟಪಡಿಸಬೇಕು," ಎಂದು ಅವರು ಹೇಳಿದರು.

ರೋಹಿತ್ ಶರ್ಮಾಗೆ ನಮ್ಮ ಬೆಂಬಲವಿದೆ ಎಂದು ಬಹಿರಂಗಪಡಿಸಬೇಕು

ಅವರಿಗೆ ಸ್ವಾತಂತ್ರ್ಯ ನೀಡುವುದರ ಜೊತೆಗೆ, ತಾವು ಅವರನ್ನು ಬೆಂಬಲಿಸುತ್ತೇವೆ ಎಂಬುದನ್ನೂ ಅವರು ಸ್ಪಷ್ಟವಾಗಿ ಹೇಳಬೇಕು. ಅಂತಹ ಯಾವುದೇ ಹೇಳಿಕೆ ನೀಡದಿರುವುದರಿಂದ, ಸಾಕಷ್ಟು ಗೊಂದಲ ಮತ್ತು ಅನುಮಾನಗಳು ಉಂಟಾಗಿವೆ. "ನಾವು ಹೊರಗಿದ್ದೇವೆ, ಹಾಗಾಗಿ ಒಳಗೆ ನಿಖರವಾಗಿ ಏನಾಗುತ್ತಿದೆ ಎಂಬುದು ನಮಗೆ ತಿಳಿದಿಲ್ಲ. ಆದರೆ ರೋಹಿತ್ ಶರ್ಮಾ ಅವರು ಸ್ವತಃ ಕೆಳಗಿಳಿಯುವುದಿಲ್ಲ ಎಂದು ನಿರ್ಧರಿಸಿದ್ದಾರೆ ಎಂದೇ ನನಗೆ ಅನ್ನಿಸುತ್ತಿದೆ, ಅವರ ಶತಕ ಆಯ್ಕೆ ಸಮಿತಿಗೆ ನೀವು ಧೈರ್ಯವಿದ್ದರೇ ನನ್ನನ್ನು ತಂಡದಿಂದ ಕೈಬಿಟ್ಟು ನೋಡಿ ಎನ್ನುವಂತಿದೆ" ಎಂದು ಕೈಫ್ ಹೇಳಿದರು.