ರೋಹಿತ್ ಶರ್ಮಾ ವಿವಾದದ ಬೆನ್ನಲ್ಲೇ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರ ಕುರ್ಚಿ ಅಲುಗಾಡುತ್ತಿದೆ. ಬಿಸಿಸಿಐ, ಅಗರ್ಕರ್ ಅವರನ್ನು ಬದಲಿಸಿ ಎನ್‌ಸಿಎ ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್ ಅವರನ್ನು ಹೊಸ ಮುಖ್ಯ ಆಯ್ಕೆಗಾರರನ್ನಾಗಿ ನೇಮಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಈ ಬದಲಾವಣೆಯಾದರೆ ಅನುಭವಿ ಆಟಗಾರರಿಗೆ ಮತ್ತೆ ಅವಕಾಶ ಸಿಗುವ ನಿರೀಕ್ಷೆಯಿದೆ.

ಮುಂಬೈ: ಭಾರತೀಯ ಕ್ರಿಕೆಟ್ ವಲಯದಲ್ಲಿ ಮತ್ತೊಂದು ದೊಡ್ಡ ಬದಲಾವಣೆಯಾಗುವ ಸೂಚನೆ ಸಿಕ್ಕಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ನಾಯಕ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಎದ್ದ ವಿವಾದದ ಬೆನ್ನಲ್ಲೇ, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರ ಕುರ್ಚಿ ಅಲುಗಾಡುತ್ತಿದೆ. ಮುಂದಿನ ಒಂದು ತಿಂಗಳೊಳಗೆ ಅಗರ್ಕರ್ ಅವರನ್ನು ಬದಲಿಸಿ, ಮಾಜಿ ಬ್ಯಾಟಿಂಗ್ ದಿಗ್ಗಜ ವಿ.ವಿ.ಎಸ್. ಲಕ್ಷ್ಮಣ್ ಅವರನ್ನು ಬಿಸಿಸಿಐ ಹೊಸ ಚೀಫ್ ಸೆಲೆಕ್ಟರ್ ಆಗಿ ನೇಮಿಸಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸದ್ಯ ಲಕ್ಷ್ಮಣ್ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥರಾಗಿದ್ದಾರೆ. ಚೀಫ್ ಸೆಲೆಕ್ಟರ್ ಹುದ್ದೆಯಲ್ಲಿ ಅಜಿತ್ ಅಗರ್ಕರ್ ಅವರ ಒಪ್ಪಂದದ ಅವಧಿ ಮುಗಿದಿದ್ದರೂ, ಬಿಸಿಸಿಐ ಅದನ್ನು ಮೂರು ತಿಂಗಳ ಕಾಲ ವಿಸ್ತರಿಸಿತ್ತು. 2027ರ ಏಕದಿನ ವಿಶ್ವಕಪ್‌ವರೆಗೂ ಅವರೇ ಮುಂದುವರೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ರೋಹಿತ್ ಶರ್ಮಾರನ್ನು ತಂಡದಿಂದ ಕೈಬಿಡಲು ಯತ್ನಿಸಿದ ವಿವಾದವೇ ಅವರಿಗೆ ಮುಳುವಾಗಿದೆ ಎನ್ನಲಾಗುತ್ತಿದೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯೊಂದಿಗೆ ರೋಹಿತ್ ಶರ್ಮಾ ಅವರ ಏಕದಿನ ಕೆರಿಯರ್ ಮುಗಿಯಲಿದೆ ಎಂಬ ಸುದ್ದಿ ಹಬ್ಬಿತ್ತು. ಕೋಚ್ ಗೌತಮ್ ಗಂಭೀರ್ ಮತ್ತು ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ, ಮುಂಬರುವ ಸರಣಿಗಳಿಂದ ರೋಹಿತ್‌ರನ್ನು ಕೈಬಿಡಲು ಪ್ಲಾನ್ ಮಾಡಿತ್ತು ಎಂದು 'ದೈನಿಕ್ ಜಾಗರಣ್' ವರದಿ ಮಾಡಿತ್ತು. ಆದರೆ, ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ರೋಹಿತ್, ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಸೆಲೆಕ್ಟರ್‌ಗಳ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದರು. ಇದರ ಬೆನ್ನಲ್ಲೇ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಆಯ್ಕೆ ಸಮಿತಿಯ ಜೊತೆ ಚರ್ಚಿಸದೆಯೇ ರೋಹಿತ್‌ ಶರ್ಮಾಗೆ ಬಹಿರಂಗ ಬೆಂಬಲ ನೀಡಿದರು.

"ರೋಹಿತ್ ಈಗಲೂ ಭಾರತ ತಂಡದ ಯೋಜನೆಗಳ ಭಾಗವಾಗಿದ್ದಾರೆ. ಲಾರ್ಡ್ಸ್ ಪಂದ್ಯ ಅವರ ಕೊನೆಯ ಪಂದ್ಯವಾಗಿರುವುದಿಲ್ಲ," ಎಂದು ಸೈಕಿಯಾ ಸ್ಪಷ್ಟಪಡಿಸಿದರು. ಇದು ಆಯ್ಕೆ ಸಮಿತಿ ಮತ್ತು ಬೋರ್ಡ್ ನಡುವಿನ ಭಿನ್ನಾಭಿಪ್ರಾಯವನ್ನು ಜಗಜ್ಜಾಹೀರು ಮಾಡಿತು. ಇದಲ್ಲದೆ, ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಸೋಲಿನ ಬಗ್ಗೆ ವಿಮರ್ಶಾ ಸಭೆ ನಡೆಸದೆಯೇ ತಂಡ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದು ಕೂಡ ಬೋರ್ಡ್‌ನ ಅಸಮಾಧಾನಕ್ಕೆ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ, ಅಜಿತ್ ಅಗರ್ಕರ್ ಬದಲಿಗೆ ಲಕ್ಷ್ಮಣ್ ಅವರನ್ನು ಹುದ್ದೆಗೆ ತರಲು ಬಿಸಿಸಿಐ ಗಂಭೀರ ಚಿಂತನೆ ನಡೆಸಿದೆ.

ಹಂಗಾಮಿ ಕೋಚ್ ಆಗಿ ಈಗಾಗಲೇ ಸೈ ಎನಿಸಿಕೊಂಡಿರುವ ಲಕ್ಷ್ಮಣ್:

ಇನ್ನು ಎನ್‌ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್‌, ಈಗಾಗಲೇ ಗೌತಮ್ ಗಂಭೀರ್ ಅನುಪಸ್ಥಿತಿಯಲ್ಲಿ ಈ ಹಿಂದೆ ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಹಂಗಾಮಿ ಹೆಡ್ ಕೋಚ್ ಆಗಿ ತಂಡಕ್ಕೆ ಅಮೂಲ್ಯ ಮಾರ್ಗದರ್ಶನ ನೀಡಿದ್ದಾರೆ. ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರಿದೆ. ಹೀಗಾಗಿ ತಂಡದ ಬಗ್ಗೆ ಉತ್ತಮ ಒಳನೋಟ ಹೊಂದಿರುವ ಲಕ್ಷ್ಮಣ್‌ ಅವರು ಆಯ್ಕೆ ಸಮಿತಿ ಮುಖ್ಯಸ್ಥರಾದರೇ ತಂಡಕ್ಕೆ ಅನುಕೂಲವಾಗಲಿದೆ ಎನ್ನುವುದು ಬಿಸಿಸಿಐ ಲೆಕ್ಕಾಚಾರವಾಗಿದೆ.

ಅನುಭವಿ ಆಟಗಾರರಿಗೆ ಮತ್ತೆ ಮಣೆ?

ಒಂದು ವೇಳೆ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಚೇರ್‌ಮನ್ ಆದ್ರೆ ಮತ್ತೆ ಅನುಭವಿ ಆಟಗಾರರಿಗೆ ಭಾರತ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈಗಾಗಲೇ ಅನುಭವಿ ಆಟಗಾರರಾದ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಅವರಂತಹ ಅನುಭವಿ ಆಟಗಾರರು ದೇಶಿ ಕ್ರಿಕೆಟ್‌ ಹಾಗೂ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ ಆಯ್ಕೆ ಸಮಿತಿಯ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಅಗರ್ಕರ್ ಬದಲಿಗೆ ಲಕ್ಷ್ಮಣ್ ಆಯ್ಕೆ ಸಮಿತಿ ಮುಖ್ಯಸ್ಥರಾದರೇ, ಅನುಭವಿ ಆಟಗಾರರಿಗೆ ಮಣೆ ಹಾಕುವ ನಿರೀಕ್ಷೆಯಿದೆ.