ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡುವ ಮುನ್ನ, 13 ವರ್ಷದ ಸಚಿನ್ ತೆಂಡೂಲ್ಕರ್ ಅವರು 1987ರಲ್ಲಿ ಮುಂಬೈನಲ್ಲಿ ನಡೆದ ಪ್ರದರ್ಶನ ಪಂದ್ಯವೊಂದರಲ್ಲಿ ಪಾಕಿಸ್ತಾನ ತಂಡದ ಪರ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡಿದ್ದರು. ಇಮ್ರಾನ್ ಖಾನ್ ಅವರ ಕೋರಿಕೆಯ ಮೇರೆಗೆ ನಡೆದ ಈ ಅಚ್ಚರಿಯ ಘಟನೆಯನ್ನು ಸಚಿನ್ ತಮ್ಮ 'ಪ್ಲೇಯಿಂಗ್ ಇಟ್ ಮೈ ವೇ' ಆತ್ಮಕಥನದಲ್ಲಿಯೂ ಉಲ್ಲೇಖಿಸಿದ್ದಾರೆ.

ಬೆಂಗಳೂರು: 'ಮಾಸ್ಟರ್ ಬ್ಲಾಸ್ಟರ್' ಖ್ಯಾತಿಯ ಸಚಿನ್ ತೆಂಡೂಲ್ಕರ್ ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ತಮ್ಮ ಶಿಸ್ತುಬದ್ದ ಕ್ರಿಕೆಟ್‌ ಮೂಲಕ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಸಚಿನ್ ತೆಂಡೂಲ್ಕರ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ದಶಕಗಳೇ ಕಳೆದರೂ, ಈಗಲೂ ಯುವ ಕ್ರಿಕೆಟಿಗರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ಇಂದಿಗೂ ಮಾಸ್ಟರ್ ಬ್ಲಾಸ್ಟರ್ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿದೆ. ಇನ್ನು ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಮುನ್ನ, ಹಸಿರು ಜೆರ್ಸಿಯಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ಪರ ಫೀಲ್ಡಿಂಗ್ ಮಾಡಿದ್ದರು ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿಲ್ಲ.

ಪಾಕಿಸ್ತಾನ ಪರ ಸಚಿನ್ ತೆಂಡೂಲ್ಕರ್ ಮೈದಾನಕ್ಕಿಳಿದಿದ್ದೇಕೆ?

ಇದೆಲ್ಲಾ ನಡೆದದ್ದು ಸಚಿನ್ ತೆಂಡೂಲ್ಕರ್ 13 ವರ್ಷ ವಯಸ್ಸಿನವರಾಗಿದ್ದಾಗ. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತಂಡವು 1987ರಲ್ಲಿ ಮುಂಬೈನ ಬ್ರೆಬೋರ್ನ್ ಸ್ಟೇಡಿಯಂಗೆ ಪ್ರವಾಸ ಕೈಗೊಂಡಿತ್ತು. ಆಗ 40 ಓವರ್‌ಗಳ ಒಂದು ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿತ್ತು. ಆಗ ಹದಿಹರೆಯದ ಸಚಿನ್ ತೆಂಡೂಲ್ಕರ್ ಪಾಕಿಸ್ತಾನ ಪರ ಫೀಲ್ಡಿಂಗ್ ಮಾಡಲಿಳಿದಿದ್ದರು.

ಪಾಕಿಸ್ತಾನ ತಂಡದಲ್ಲಿದ್ದ ಜಾವೇದ್ ಮಿಯಾಂದಾದ್ ಹಾಗೂ ಅಬ್ದುಲ್ ಖಾದೀರ್ ಲಂಚ್ ಬ್ರೇಕ್ ವೇಳೆ ಮೈದಾನ ತೊರೆದಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ನಾಯಕ ಇಮ್ರಾನ್ ಖಾನ್, 13 ವರ್ಷದ ಸಚಿನ್ ತೆಂಡೂಲ್ಕರ್‌ಗೆ ಗ್ರೀನ್ ಜೆರ್ಸಿ ತೊಟ್ಟು ಸಬ್‌ಸ್ಟಿಟ್ಯೂಟ್ ಆಟಗಾರನಾಗಿ ಮೈದಾನಕ್ಕಿಳಿಯಲು ಕೇಳಿಕೊಂಡರು. ಆಗ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ತಂಡದ ನಾಯಕರಾಗಿದ್ದ ಹೇಮಂತ್ ಕೆನ್ಕರೆ ಅವರ ಬಳಿ ಹೋಗಿ, ಸ್ಥಳೀಯ ಯುವ ಕ್ರಿಕೆಟಿಗರೊಬ್ಬರನ್ನು ಫೀಲ್ಡಿಂಗ್‌ ಮಾಡಲು ಕಳಿಸಿಕೊಡಿ ಎಂದು ಮನವಿ ಮಾಡಿಕೊಂಡರು. ಆಗ ಹೇಮಂತ್ ಯಾರನ್ನು ಕಳಿಸುವುದು ಎಂದು ಕಣ್ಣಾಡಿಸುತ್ತಿರುವಾಗಲೇ ಸಚಿನ್, ಗ್ರೀನ್ ಜೆರ್ಸಿ ತೊಟ್ಟು ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿದೇ ಬಿಟ್ಟರು. ಇನ್ನು ಈ ಘಟನೆಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಆತ್ಮಕಥನ 'ಪ್ಲೇಯಿಂಗ್ ಇಟ್ ಮೈ ವೇ'ನಲ್ಲಿಯೂ ಬರೆದುಕೊಂಡಿದ್ದಾರೆ.

'ಇಮ್ರಾನ್ ಖಾನ್ ಅವರಿಗೆ ಈ ಘಟನೆ ನೆನಪಿದೆಯೋ ಅಥವಾ ಇಲ್ಲವೋ ನನಗಂತೂ ಗೊತ್ತಿಲ್ಲ. ನಾನು ಒಮ್ಮೆ ಪಾಕಿಸ್ತಾನ ಪರ ಫೀಲ್ಡಿಂಗ್ ಮಾಡಿದ್ದೆ' ಎಂದು ಸಚಿನ್ ತೆಂಡೂಲ್ಕರ್ ತಮ್ಮ 'ಪ್ಲೇಯಿಂಗ್ ಇಟ್ ಮೈ ವೇ' ಆಟೋಬಯೋಗ್ರಫಿಯಲ್ಲಿ ಬರೆದುಕೊಂಡಿದ್ದಾರೆ.

ಪ್ರದರ್ಶನ ಪಂದ್ಯ ಗೆದ್ದು ಬೀಗಿದ್ದ ಭಾರತ:

ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ 40 ಓವರ್‌ಗಳ ಪ್ರದರ್ಶನ ಪಂದ್ಯವನ್ನು ಭಾರತ ತಂಡವು ಆರು ವಿಕೆಟ್‌ಗಳಿಂದ ಜಯಿಸಿತ್ತು. ಇದಾಗಿ ಎರಡು ವರ್ಷಗಳ ಬಳಿಕ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಅದೇ ಇಮ್ರಾನ್ ಖಾನ್, ವಾಸಿಂ ಅಕ್ರಂ, ವಕಾರ್ ಯೂನಿಸ್ ಅವರಂತಹ ದಿಗ್ಗಜ ಬೌಲರ್‌ಗಳನ್ನು ಹಾಲುಗಲ್ಲದ ಸಚಿನ್ ತೆಂಡೂಲ್ಕರ್ ದಿಟ್ಟವಾಗಿ ಎದುರಿಸುವ ಮೂಲಕ ಗಮನ ಸೆಳೆದಿದ್ದರು.