ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ, ನಿರ್ಗಮಿತ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಕೊಡುಗೆಯನ್ನು ಶ್ಲಾಘಿಸಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಬೆಂಗಳೂರು (ಆ.3): ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ನಿರ್ಗಮಿತ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಶ್ರಮ ಮತ್ತು ತಂಡಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ರೋಹಿತ್ ಮುಕ್ತಕಂಠದಿಂದ ಶ್ಲಾಘಿಸಿ, ಧನ್ಯವಾದ ಅರ್ಪಿಸಿದ್ದಾರೆ. ಭಾರತ ತಂಡವು ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಮುನ್ನವೇ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಸೇವಾ ಅವಧಿ ಮುಕ್ತಾಯಗೊಂಡಿದೆ. ಬಿಸಿಸಿಐ ಜತೆಗಿನ ಅವರ ಒಪ್ಪಂದ ಅಂತ್ಯಗೊಂಡಿದೆ. ಟಿ. ದಿಲೀಪ್ ಅವರು ನವೆಂಬರ್ 2021ರಲ್ಲಿ ಮೊದಲ ಬಾರಿಗೆ ಭಾರತ ತಂಡದ ಫೀಲ್ಡಿಂಗ್ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. 2024ರ ಟಿ20 ವಿಶ್ವಕಪ್ ಗೆಲುವಿನ ನಂತರ ಅವರ ಅಧಿಕಾರಾವಧಿಯನ್ನು ವಿಸ್ತರಿಸಲಾಗಿತ್ತು.
ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅವಧಿಯಲ್ಲೂ ಬಿಸಿಸಿಐ ಅವರ ಸೇವೆಯನ್ನು ತಾತ್ಕಾಲಿಕವಾಗಿ ಮುಂದುವರಿಸಿತ್ತು. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ಪ್ರವಾಸದ ನಂತರ ಅವರ ಒಪ್ಪಂದದ ಅವಧಿ ಮುಗಿದಿದ್ದು, ಅದನ್ನು ಮತ್ತೆ ವಿಸ್ತರಿಸದಿರಲು ಬಿಸಿಸಿಐ ತೀರ್ಮಾನಿಸಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಭಾರತ ತಂಡದ ಫೀಲ್ಡಿಂಗ್ ಸಾಧಾರಣ ಮಟ್ಟದಲ್ಲಿತ್ತು. ಸರಣಿ ಸೋಲಿನ ಬೆನ್ನಲ್ಲೇ ಕೋಚಿಂಗ್ ಸೆಟಪ್ ಬದಲಾವಣೆಯ ಕುರಿತು ಚರ್ಚೆಗಳು ಆರಂಭವಾಗಿದ್ದವು. ಈ ಹಿನ್ನೆಲೆಯಲ್ಲಿ ಬಿಸಿಸಿಐ, ಟಿ.ದಿಲೀಪ್ ಅವರ ಅವಧಿಯನ್ನು ವಿಸ್ತರಿಸಲಿಲ್ಲ.
ರೋಹಿತ್ ಶರ್ಮಾ ಭಾವುಕ ಪೋಸ್ಟ್
ಟಿ. ದಿಲೀಪ್ ಅವರ ಅಧಿಕಾರಾವಧಿಯಲ್ಲಿ ಭಾರತ ತಂಡ ಮಹತ್ತರ ಸಾಧನೆಗಳನ್ನು ಮಾಡಿದೆ ಎಂಬುದನ್ನು ಮರೆಯುವಂತಿಲ್ಲ. ಟೀಮ್ ಇಂಡಿಯಾ 2024 ಮತ್ತು 2026ರ ಟಿ20 ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಜತೆಗೆ 2023 ಮತ್ತು 2025ರ ಏಷ್ಯಾ ಕಪ್ ಕೂಡ ಗೆದ್ದುಕೊಂಡಿದೆ. ಟಿ. ದಿಲೀಪ್ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದಂತೆ ರೋಹಿತ್ ಶರ್ಮಾ ಭಾವುಕ ಪೋಸ್ಟ್ ಬರೆದಿದ್ದು, ಅದರಲ್ಲಿ ದಿಲೀಪ್ ಅವರನ್ನು ತಂಡದ ನಿಜವಾದ 'ವರ್ಕ್‌ಹಾರ್ಸ್' (ಕಠಿಣ ಪರಿಶ್ರಮಿ) ಎಂದು ಬಣ್ಣಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ದಿಲೀಪ್ ಅವರ ಫೋಟೋ ಹಂಚಿಕೊಂಡು ಶ್ಲಾಘಿಸಿರುವ ರೋಹಿತ್ ಶರ್ಮಾ, 'ನೀವು ಒಬ್ಬ ಮಹಾನ್ ವ್ಯಕ್ತಿತ್ವದ ಮನುಷ್ಯ ದಿಲೀಪ್ ಸರ್. ನೀವು ತಂಡದಲ್ಲಿ ಅದ್ಭುತ ವಾತಾವರಣ ಸೃಷ್ಟಿಸಿದ್ದೀರಿ ಮತ್ತು ತೆರೆಮರೆಯಲ್ಲಿ ಕಠಿಣ ಪರಿಶ್ರಮ ಪಟ್ಟ ನಿಜವಾದ 'ವರ್ಕ್‌ಹಾರ್ಸ್' ನೀವು. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭ ಹಾರೈಕೆಗಳು" ಎಂದು ಬರೆದುಕೊಂಡಿದ್ದಾರೆ.
ಹೊಸ ಫೀಲ್ಡಿಂಗ್ ಕೋಚ್ ಆಗಿ ಶುಭದೀಪ್ ಘೋಷ್ ನೇಮಕ
ಟಿ. ದಿಲೀಪ್ ಅವರ ಒಪ್ಪಂದ ಅಂತ್ಯಗೊಂಡ ಬೆನ್ನಲ್ಲೇ ಬಿಸಿಸಿಐ ಈ ಜವಾಬ್ದಾರಿಯನ್ನು ಶುಭದೀಪ್ ಘೋಷ್ ಅವರ ಹೆಗಲಿಗೆ ನೀಡಿದೆ. ಶುಭದೀಪ್ ಘೋಷ್ ಭಾರತೀಯ ಕ್ರಿಕೆಟ್ ತಂಡದ ನೂತನ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇವರು ಈ ಹಿಂದೆ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮತ್ತು ಇಂಡಿಯಾ 'ಎ' ತಂಡದ ಜೊತೆ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಶುಭದೀಪ್ ಘೋಷ್ ಅವರ ಅಧಿಕಾರಾವಧಿ ಆರಂಭವಾಗಲಿದೆ.


