ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (18) ಸೊನ್ನೆಗೆ ಔಟಾದ ಆಟಗಾರರ ಪಟ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದಿನೇಶ್ ಕಾರ್ತಿಕ್ ಜೊತೆ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅವರು ಈ ಅನಗತ್ಯ ದಾಖಲೆಗೆ ಸೇರಿದರು. ಅಲ್ಲದೆ, ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ ಆಟಗಾರರಲ್ಲಿ ಧೋನಿ ನಂತರ (265) ರೋಹಿತ್ (258) ಎರಡನೇ ಸ್ಥಾನದಲ್ಲಿದ್ದಾರೆ. ದಿನೇಶ್ ಕಾರ್ತಿಕ್ (257) ಮೂರನೇ ಸ್ಥಾನದಲ್ಲಿದ್ದಾರೆ.

ಚೆನ್ನೈ: ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್‌ ಶರ್ಮಾ ಐಪಿಎಲ್‌ನಲ್ಲಿ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟಾದ ಆಟಗಾರರ ಪಟ್ಟಿಯಲ್ಲಿ ರೋಹಿತ್‌ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.

ಭಾನುವಾರ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಮುಂಬೈ ಮೊದಲು ಬ್ಯಾಟ್‌ ಮಾಡಿತು. ಆರಂಭಿಕನಾಗಿ ಕಣಕ್ಕಿಳಿದ ರೋಹಿತ್‌ 4 ಎಸೆತಗಳನ್ನು ಎದುರಿಸಿದರೂ ರನ್‌ ಖಾತೆ ತೆರೆಯಲಾಗಲಿಲ್ಲ. ಇದು ಐಪಿಎಲ್‌ನಲ್ಲಿ ಅವರ 18ನೇ ಸೊನ್ನೆ. ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಭಾರತದ ದಿನೇಶ್‌ ಕಾರ್ತಿಕ್‌ ಕೂಡಾ ತಲಾ 18 ಬಾರಿ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. 

ಇನ್ನು, ಅನುಭವಿ ಸ್ಪಿನ್ನರ್‌ಗಳಾದ ಪಿಯೂಶ್‌ ಚಾವ್ಲಾ ಹಾಗೂ ಸುನಿಲ್‌ ನರೈನ್‌ ತಲಾ 16 ಬಾರಿ ಇನ್ನಿಂಗ್ಸ್‌ನಲ್ಲಿ ರನ್‌ ಖಾತೆ ತೆರೆಯಲು ವಿಫಲರಾಗಿದ್ದಾರೆ. ರಶೀದ್‌ ಖಾನ್‌, ಮಂದೀಪ್‌ ಸಿಂಗ್‌ ತಲಾ 15 ಬಾರಿ ಸೊನ್ನೆಗೆ ಔಟಾಗಿದ್ದಾರೆ.

ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲೇ ಯುವ ಸ್ಪಿನ್ನರ್ ವಿಘ್ನೇಶ್ ಮಿಂಚು! ಧೋನಿ ಮನಗೆದ್ದ ಮುಂಬೈ ಇಂಡಿಯನ್ಸ್ ಆಟಗಾರ!

ಅತಿ ಹೆಚ್ಚು ಐಪಿಎಲ್‌ ಪಂದ್ಯ: ರೋಹಿತ್‌ ಈಗ ನಂಬರ್‌ 2

ಅತಿ ಹೆಚ್ಚು ಐಪಿಎಲ್‌ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ರೋಹಿತ್‌ ಶರ್ಮಾ ಈಗ 2ನೇ ಸ್ಥಾನಕ್ಕೇರಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಭಾನುವಾರದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಈ ಮೈಲುಗಲ್ಲು ಸಾಧಿಸಿದರು. ರೋಹಿತ್‌ 258 ಪಂದ್ಯಗಳನ್ನಾಡಿದ್ದಾರೆ. ಈ ಮೂಲಕ ದಿನೇಶ್‌ ಕಾರ್ತಿಕ್(257)ರನ್ನು ಅವರು ಹಿಂದಿಕ್ಕಿದರು. ರೋಹಿತ್‌ 2008ರಲ್ಲಿ ಡೆಕ್ಕನ್‌ ಚಾರ್ಜರ್ಸ್‌ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಬಳಿಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿ, 5 ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ.

ರೋಹಿತ್ ಶರ್ಮಾ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಬಲಾಢ್ಯ ಐಪಿಎಲ್ ತಂಡವಾಗಿ ಹೊರಹೊಮ್ಮಿತ್ತು. ಆದರೆ ಕಳೆದ ವರ್ಷ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಅಚ್ಚರಿಯ ರೀತಿಯಲ್ಲಿ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಕರೆತಂದು ನಾಯಕ ಪಟ್ಟ ಕಟ್ಟಿತ್ತು. ಆದರೆ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಇದನ್ನೂ ಓದಿ: ಕೆಕೆಆರ್ ಎದುರು ಆರ್‌ಸಿಬಿ ಗೆಲ್ಲುತ್ತಿದ್ದಂತೆಯೇ ಬೆಂಗಳೂರು ತಂಡವನ್ನು ಕೊಂಡಾಡಿದ ಮಾಜಿ ಮಾಲೀಕ ವಿಜಯ್ ಮಲ್ಯ!

ಗರಿಷ್ಠ ಪಂದ್ಯ ಆಟಗಾರರ ಪಟ್ಟಿಯಲ್ಲಿ ಎಂ.ಎಸ್‌.ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಅವರು 265 ಪಂದ್ಯಗಳನ್ನಾಡಿದ್ದಾರೆ. ಆರ್‌ಸಿಬಿ ಮಾಜಿ ನಾಯಕ ವಿರಾಟ್‌ ಕೊಹ್ಲಿ 253, ಚೆನ್ನೈನ ರವೀಂದ್ರ ಜಡೇಜಾ 241 ಪಂದ್ಯಗಳನ್ನಾಡಿದ್ದಾರೆ.

ಐಪಿಎಲ್‌ನಲ್ಲಿ ಗರಿಷ್ಠ ಪಂದ್ಯ

ಆಟಗಾರ ಪಂದ್ಯ

ಧೋನಿ 265

ರೋಹಿತ್‌ 258

ದಿನೇಶ್ 257

ಕೊಹ್ಲಿ 253

ಜಡೇಜಾ 241

ಧವನ್‌ 222

ಅಶ್ವಿನ್‌ 213

ರೈನಾ 205

ಉತ್ತಪ್ಪ 205

ರಾಯುಡು 204