ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್‌ಗಳಿಂದ ಸೋಲಿಸಿತು. ಮುಂಬೈ 20 ಓವರ್‌ಗಳಲ್ಲಿ 155 ರನ್ ಗಳಿಸಿತು. ಚೆನ್ನೈ 19.1 ಓವರ್‌ಗಳಲ್ಲಿ 158 ರನ್ ಗಳಿಸಿ ಜಯ ಸಾಧಿಸಿತು. ಚೆನ್ನೈನ ರಚಿನ್ ರವೀಂದ್ರ 65 ರನ್ ಗಳಿಸಿದರು. ಮುಂಬೈನ ವಿಘ್ನೇಶ್ ಪುತೂರ್ 3 ವಿಕೆಟ್ ಪಡೆದರು. ನೂರ್ ಅಹ್ಮದ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಚೆನ್ನೈ: ಪ್ರತಿ ಬಾರಿಯೂ ಸ್ಥಳೀಯ ಕ್ಲಬ್‌ಗಳಲ್ಲಿ ಆಡುತ್ತಿದ್ದ ಯುವಪ್ರತಿಭೆಗಳನ್ನು ಗುರುತಿಸಿ, ಅವರನ್ನು ವಿಶ್ವ ಶ್ರೇಷ್ಠ ಕ್ರಿಕೆಟಿಗರನ್ನಾಗಿ ರೂಪಿಸುವ ಮುಂಬೈ ಈ ಸಲವೂ ಯುವ ಆಟಗಾರರೊಬ್ಬರನ್ನು ಕ್ರೀಡಾ ಜಗತ್ತಿಗೆ ಪರಿಚಯಿಸಿದೆ. ಅವರ ಹೆಸರು ವಿಘ್ನೇಶ್ ಪುತೂರ್. ಕೇರಳದ 24 ವರ್ಷದ ವಿಶ್ಲೇಶ್ ಎಡಗೈ ಸ್ಪಿನ್ನರ್, ಕೇರಳ ಪ್ರೀಮಿಯರ್ ಲೀಗ್‌ನಲ್ಲಿ ಅಳಪ್ಪೆ ರಿಪಲ್ಸ್ ತಂಡದಲ್ಲಿದ್ದ ವಿಶ್ಲೇಶ್, 3 ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಕಿತ್ತಿದ್ದರು. 

ಆದರೆ ಸ್ಪಿನ್ ದಾಳಿಯಲ್ಲಿನ ಕೌಶಲ್ಯ ಗುರುತಿಸಿದ್ದ ಮುಂಬೈ, ತಂಡದ ಟ್ರಯಲ್‌ಗೆ ಕರೆಸಿತ್ತು. ಹರಾಜಿನಲ್ಲಿ ₹30 ಲಕ್ಷ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಭಾನುವಾರ ಚೆನ್ನೈ ಬ್ಯಾಟ‌ರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ವಿಶ್ಲೇಶ್, ಋತುರಾಜ್, ಶಿವಂ ದುಬೆ, ದೀಪಕ್ ಹೂಡಾರನ್ನು ಔಟ್ ಮಾಡಿದ್ದಾರೆ. ಅವರ ಆಟಕ್ಕೆ ಮನಸೋತ ಧೋನಿ, ಪಂದ್ಯದ ಬಳಿಕ ವಿಘ್ನೇಶ್ ರನ್ನು ಆಲಿಂಗಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ವ್ಹೀಲ್ ಚೇರ್‌ನಲ್ಲಿದ್ರೂ ಸಿಎಸ್‌ಕೆಗಾಗಿ ಆಡ್ತೀನಿ; ಎಂ ಎಸ್ ಧೋನಿ

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವು ವಿಶ್ವದರ್ಜೆಯ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದೆ

IPL 2025: ಚೆನ್ನೈ ಸ್ಪಿನ್ ಬಲೆಗೆ ಬಿದ್ದ ಮುಂಬೈ ಇಂಡಿಯನ್ಸ್!

ಚೆನ್ನೈ: ಚೆಪಾಕ್ ಕ್ರೀಡಾಂಗಣದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಚೆನ್ನೈ ಗೆಲುವಿನ ನಗೆ ಬೀರಿದೆ. ಭಾನುವಾರ 5 ಬಾರಿ ಚಾಂಪಿಯನ್, ಬದ್ಧವೈರಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ತಂಡ 4 ವಿಕೆಟ್ ರೋಚಕ ಗೆಲುವು ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌, ರನ್ ಗಳಿಸಲು ತಿಣುಕಾಡಿತು. ಆರಂಭಿಕ ಆಘಾತದ ಬಳಿಕ ಚೇತರಿಸಿಕೊಂಡ ತಂಡ 9 ವಿಕೆಟ್‌ಗೆ 155 ರನ್ ಕಲೆಹಾಕಿತು. ಚೆನ್ನೈ ಪಿಚ್‌ನಲ್ಲಿ ಈ ಗುರಿ ಸ್ಪರ್ಧಾತ್ಮಕವಾಗಿತ್ತು. ಆದರೆ ಋತುರಾಜ್ -ರಚಿನ್ ರವೀಂದ್ರ ಜವಾಬ್ದಾರಿಯುತ ಆಟ ದಿಂದಾಗಿ ಚೆನ್ನೈ 19.1 ಓವರ್‌ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: ಕೆಕೆಆರ್ ಎದುರು ಆರ್‌ಸಿಬಿ ಗೆಲ್ಲುತ್ತಿದ್ದಂತೆಯೇ ಬೆಂಗಳೂರು ತಂಡವನ್ನು ಕೊಂಡಾಡಿದ ಮಾಜಿ ಮಾಲೀಕ ವಿಜಯ್ ಮಲ್ಯ!

ರಾಹುಲ್ ತ್ರಿಪಾಠಿ 2 ರನ್‌ಗೆ ಔಟಾದ ಬಳಿಕ, 2ನೇ ವಿಕೆಟ್‌ಗೆ ಋತುರಾಜ್-ರಚಿನ್ 67 ರನ್ ಸೇರಿಸಿದರು. ಋತುರಾಜ್ 26 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ 56 ರನ್ ಸಿಡಿಸಿ ಔಟಾದರು. ಬಳಿಕ ಕ್ರೀಸ್‌ನಲ್ಲಿ ನೆಲೆಯೂರಿದ ರಚಿನ್, 45 ಎಸೆತಗಳಲ್ಲಿ 65 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಚೊಚ್ಚಲ ಪಂದ್ಯವಾಡಿದ 24 ವರ್ಷದ ವಿಘ್ನೇಶ್ ಪುತೂರ್ 32 ರನ್‌ಗೆ 3 ವಿಕೆಟ್ ಕಿತ್ತು ಗಮನ ಸೆಳೆದರು. 

ಮಾರಕ ದಾಳಿ: ಇದಕ್ಕೂ ಮುನ್ನ, ಚೆನ್ನೈ ಮಾರಕ ದಾಳಿ ಎದುರು ಮುಂಬೈ ಬ್ಯಾಟರ್ ಗಳು ಪರದಾಡಿದರು. ತಿಲಕ್ (31) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರು. ಸೂರ್ಯಕುಮಾರ್ 29 ರನ್ ಬಾರಿಸಿದರು. ಕೊನೆಯಲ್ಲಿ ಅಬ್ಬರಿಸಿದ ದೀಪಕ್ 15 ಎಸೆತಗಳಲ್ಲಿ ಔಟಾಗದೆ 28 ರನ್‌ ಸಿಡಿಸಿದರು.

2013ರಿಂದ ಆರಂಭಿಕ ಪಂದ್ಯ ಗೆದ್ದಿಲ್ಲ ಮುಂಬೈ!

ಮುಂಬೈ ಸತತ 13ನೇ ಆವೃತ್ತಿಯಲ್ಲೂ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿದೆ. 2012ರಲ್ಲಿ ಕೊನೆ ಬಾರಿ ತಂಡ ತನ್ನ ಮೊದಲ ಪಂದ್ಯದಲ್ಲಿ ಗೆದ್ದಿತ್ತು. 2013ರ ಬಳಿಕ ಬಳಿಕ ಒಮ್ಮೆಯೂ ಆರಂಭಿಕ ಪಂದ್ಯದಲ್ಲಿ ಗೆಲುವು ಕಂಡಿಲ್ಲ.

ಇದನ್ನೂ ಓದಿ: IPL 2025: ಸನ್‌ರೈಸರ್ಸ್‌ ಆರ್ಭಟಕ್ಕೆ ರಾಯಲ್ಸ್‌ ಧೂಳೀಪಟ!

ಸ್ಕೋರ್: ಮುಂಬೈ 20 ಓವರಲ್ಲಿ 155/9
(ತಿಲಕ್ 31, ಸೂರ್ಯಕುಮಾರ್29, ದೀಪಕ್ 28, ನೂರ್ 4-18, ಖಲೀಲ್ 2-29), ಚೆನ್ನೈ 19.1 ಓವರಲ್ಲಿ 158/6 (ರಚಿನ್ 65, ಋತುರಾಜ್ 53, ವಿಶ್ಲೇಶ್ 3-32)

ಪಂದ್ಯಶ್ರೇಷ್ಠ: ನೂರ್ ಅಹ್ಮದ್