ಭಾರತ ಕ್ರಿಕೆಟ್ ತಂಡದ ಚೀಫ್ ಸೆಲೆಕ್ಟರ್ ಹುದ್ದೆಯಿಂದ ಅಜಿತ್ ಅಗರ್ಕರ್ ಕೆಳಗಿಳಿದಿದ್ದು, ಅವರ ಅಧಿಕಾರಾವಧಿ ಅಕ್ಟೋಬರ್ 4ಕ್ಕೆ ಅಂತ್ಯವಾಗಿದೆ. ಅವರ ನಿರ್ಗಮನದ ಬೆನ್ನಲ್ಲೇ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಅಗರ್ಕರ್ ಅವಧಿಯಲ್ಲಿ ಭಾರತ ಮೂರು ಐಸಿಸಿ ಟ್ರೋಫಿ ಗೆದ್ದಿದ್ದು, ಹಲವು ಸ್ಟಾರ್ ಆಟಗಾರರು ನಿವೃತ್ತಿ ಘೋಷಿಸಿದ್ದಾರೆ.

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಚೀಫ್ ಸೆಲೆಕ್ಟರ್ ಹುದ್ದೆಯಿಂದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಕೆಳಗಿಳಿದಿದ್ದಾರೆ. ಅಜಿತ್ ಅಗರ್ಕರ್ ಭಾರತ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಚೀಫ್ ಸೆಲೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಿದ್ದೂ, ಅಜಿತ್ ಅಗರ್ಕರ್ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಇದೀಗ ಅಕ್ಟೋಬರ್ 04ಕ್ಕೆ ಅಜಿತ್ ಅಗರ್ಕರ್ ಅವರ ಚೀಫ್ ಸೆಲೆಕ್ಟರ್ ಒಪ್ಪಂದ ಕೊನೆಯಾಗಿದೆ. ಇದೀಗ ಅಜಿತ್ ಅಗರ್ಕರ್ ಚೀಫ್ ಸೆಲೆಕ್ಟರ್ ಹುದ್ದೆಯಿಂದ ಹೊರಬಿದ್ದ ಬೆನ್ನಲ್ಲೇ ಅವರ ಬಗ್ಗೆ ಟೀಂ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್, ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಚೇತನ್ ಶರ್ಮಾ ಅವರ ತಲೆದಂಡವಾದ ಬಳಿಕ ಅಜಿತ್ ಅಗರ್ಕರ್ ಅವರನ್ನು ಬಿಸಿಸಿಐ ಚೀಫ್ ಸೆಲೆಕ್ಟರ್ ಆಗಿ ನೇಮಿಸಲಾಗಿತ್ತು. ಅಜಿತ್ ಅಗರ್ಕರ್ ಹಾಗೂ ಗೌತಮ್ ಗಂಭೀರ್ ಕಾಂಬಿನೇಷನ್‌ನಲ್ಲಿ ಭಾರತ ಎರಡು ಐಸಿಸಿ ಟ್ರೋಫಿ ಜಯಿಸಿದೆ. ಗೌತಮ್ ಗಂಭೀರ್ ಹೆಡ್‌ ಕೋಚ್ ಆಗುವ ಮುನ್ನ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆದಾಗ ಭಾರತ ತಂಡವು ದಶಕದ ಬಳಿಕ ಐಸಿಸಿ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಒಟ್ಟಾರೆ ಅಜಿತ್ ಅಗರ್ಕರ್ ಚೀಫ್ ಸೆಲೆಕ್ಟರ್ ಆದ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡವು ಎರಡು ಬಾರಿ ಐಸಿಸಿ ಟಿ20 ವಿಶ್ವಕಪ್ ಹಾಗೂ ಒಮ್ಮೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇನ್ನು ಈ ಅವಧಿಯಲ್ಲಿ ಭಾರತದ ಹಲವು ಸ್ಟಾರ್ ಕ್ರಿಕೆಟಿಗರು ವಿದಾಯ ಘೋಷಿಸಿದ್ದರು. ಇದು ಅವರ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು. ಇದೆಲ್ಲದರ ನಡುವೆ ಕಳೆದ ಸೆಪ್ಟೆಂಬರ್ 18ರಂದು ನಡೆದ ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಅಜಿತ್ ಅಗರ್ಕರ್ ತಮ್ಮ ಕಾಂಟ್ರ್ಯಾಕ್ಟ್ ವಿಸ್ತರಣೆ ಮಾಡದಿರಲು ತಿಳಿಸಿದ್ದರು ಎನ್ನಲಾಗಿದೆ. ಹೀಗಾಗಿ ಅಕ್ಟೋಬರ್ 04ರವರೆಗೆ ಅಜಿತ್ ಅಗರ್ಕರ್ ಭಾರತದ ಚೀಫ್ ಸೆಲೆಕ್ಟರ್ ಆಗಿದ್ದರು.

ಅಜಿತ್ ಅಗರ್ಕರ್ ಬಗ್ಗೆ ಗೌತಮ್ ಗಂಭೀರ್ ಭಾವನಾತ್ಮಕ ಪೋಸ್ಟ್:

'ಡಿಯರ್ ಅಜಿತ್ ಬಾಯ್, ನಿಮ್ಮ ಜತೆ ಕೆಲಸ ಮಾಡಿದ್ದು ನಿಜಕ್ಕೂ ಗೌರವದ ವಿಚಾರ. ಆ ಮೂರು ಐಸಿಸಿ ಟ್ರೋಫಿಗಳು ನಿಮ್ಮ ದೃಢ ನಿಲುವಿಗೆ ಸಾಕ್ಷಿಯಾಗಿವೆ. ಯಾವಾಗಲೂ ತಂಡವೇ ಮೊದಲು ಮತ್ತು ತಂಡವೇ ಎಲ್ಲಕ್ಕಿಂತ ಮುಖ್ಯ ಎನ್ನುವ ಆ ನಿಲುವನ್ನು ಇತಿಹಾಸವು ನಿಮ್ಮನ್ನು ಖಂಡಿತವಾಗಿಯೂ ಗೌರವದಿಂದ ನೆನಪಿಸಿಕೊಳ್ಳುತ್ತದೆ ಎಂದು ನಾನು ಹೇಳಲೇಬೇಕು. ಎಲ್ಲದಕ್ಕೂ ಧನ್ಯವಾದಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು!!" ಎಂದು ಗೌತಮ್ ಗಂಭೀರ್ ಬರೆದುಕೊಂಡಿದ್ದಾರೆ.

Scroll to load tweet…

ಅಜಿತ್ ಅಗರ್ಕರ್ ಟೀಂ ಇಂಡಿಯಾ ಚೀಫ್ ಸೆಲೆಕ್ಟರ್ ಆಗುವ ಮುನ್ನ ಒಂದು ದಶಕದಿಂದಲೂ ಭಾರತ ಐಸಿಸಿ ಟ್ರೋಫಿ ಬರ ಅನುಭವಿಸುತ್ತಾ ಬಂದಿತ್ತು. ಆದರೆ ಅಗರ್ಕರ್ ಚೀಫ್ ಸೆಲೆಕ್ಟರ್ ಆದ ಮರು ವರ್ಷವೇ ಭಾರತ ತಂಡವು 2024ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದು ಬೀಗಿತ್ತು. ಇದಾದ ಮರು ವರ್ಷ ಅಂದರೆ 2025ರಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇನ್ನು ಈ ವರ್ಷ ಮತ್ತೊಮ್ಮೆ ಐಸಿಸಿ ಟಿ20 ವಿಶ್ವಕಪ್ ಜಯಿಸಿತ್ತು. ಭಾರತ ತಂಡವು ಮೂರು ವರ್ಷಗಳಲ್ಲಿ ಮೂರು ಐಸಿಸಿ ಟ್ರೋಫಿ ಜಯಿಸುವಲ್ಲಿ ಚೀಫ್ ಸೆಲೆಕ್ಟರ್ಸ್‌ ಪಾತ್ರವನ್ನು ಮರೆಯುವಂತಿಲ್ಲ.

ಇನ್ನು ಇದೆಲ್ಲದರ ಹೊರತಾಗಿ ಅಜಿತ್ ಅಗರ್ಕರ್ ತಮ್ಮ ಚೀಫ್ ಸೆಲೆಕ್ಟರ್ ಅವಧಿಯಲ್ಲಿ ಹಲವು ಕ್ರಿಕೆಟಿಗರ ವಿದಾಯಕ್ಕೂ ಸಾಕ್ಷಿಯಾಗಿದ್ದಾರೆ. ಈ ಅವಧಿಯಲ್ಲಿಯೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದರೆ, ದಿಗ್ಗಜ ಆಟಗಾರರಾದ ರವಿಚಂದ್ರನ್ ಅಶ್ವಿನ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದು ಚರ್ಚೆಗೆ ಗ್ರಾಸವಾಗಿದೆ.