ಐಪಿಎಲ್ 2026ರಲ್ಲಿ ಆರ್‌ಸಿಬಿ ಪರ ನೀಡಿದ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಭುವನೇಶ್ವರ್ ಕುಮಾರ್ ಹಲವು ವರ್ಷಗಳ ಬಳಿಕ ಭಾರತ ಟಿ20 ತಂಡಕ್ಕೆ ಮರಳಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ಅವರು ಆಯ್ಕೆಯಾಗಿದ್ದು, ಜಸ್‌ಪ್ರಿತ್ ಬುಮ್ರಾ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ಜವಾಬ್ದಾರಿ ಹೊರಲಿದ್ದಾರೆ

ಹಲವು ವರ್ಷಗಳ ಬಳಿಕ ಕೊನೆಗೂ ಭುವನೇಶ್ವರ್ ಕುಮಾರ್ ಭಾರತ ಟಿ-20(T-20) ತಂಡಕ್ಕೆ ಕಮ್ ಬ್ಯಾಕ್ ಆಗಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ-20 ಸರಣಿ ಪಂದ್ಯಗಳಿಗೆ ಟೀಂ ಇಂಡಿಯಾದ ಆಟಗಾರರ ಲಿಸ್ಟ್ ಪ್ರಕಟಿಸಲಾಗಿದೆ. ಅದರಲ್ಲಿ ಆಯ್ಕೆಯಾದ ಭಾರತದ 16 ಸದಸ್ಯರಲ್ಲಿ ವೇಗದ ಬೌಲರ್ ಭುವನೇಶ್ವರ್ ಸ್ಥಾನ ಪಡೆದಿದ್ದಾರೆ.

ಮೀರತ್ ಮೂಲದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಕೊನೆಯ ಬಾರಿ ಭಾರತ ಟಿ20 ಪಂದ್ಯ ಆಡಿದ್ದು 2022ರ ನವೆಂಬರ್‌ನಲ್ಲಿ! ಅಂದು ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧವೇ ಆಡಿತ್ತು. ಭುವನೇಶ್ವರ್ ಕುಮಾರ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಭಾರತದ ಪರ ಮೂರು ಮಾದರಿಗಳಲ್ಲೂ ಆಡಿದ್ದಾರೆ.

ಪತ್ನಿ ನೂಪುರ್‌ರಿಂದ ಫಸ್ಟ್ ರಿಯಾಕ್ಷನ್

ಬಿಸಿಸಿಐ(BCCI) ತಂಡದ ಪ್ಲೇಯರ್ಸ್ ಪಟ್ಟಿ ಪ್ರಕಟಿಸಿದ ಕೆಲವೇ ಸಮಯದಲ್ಲಿ ಭುವನೇಶ್ವರ್ ಕುಮಾರ್ ಅವರ ಪತ್ನಿ ನೂಪುರ್ ನಾಗರ್ ಇನ್‌ಸ್ಟಾಗ್ರಾಂನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಬಿಸಿಸಿಐ ಪ್ರಕಟಿಸಿದ್ದ ಭಾರತ ತಂಡದ ಮಾಹಿತಿಯನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ರಿಪೋಸ್ಟ್ ಮಾಡಿದ್ದಾರೆ. ಅಲ್ಲದೆ ಇದರ ಜೊತೆಗೆ ‘Gratidão’ ಎಂಬ ಸ್ಟಿಕ್ಕರ್‌ ಕೂಡ ಹಾಕಿದ್ದಾರೆ. ‘Gratidão’ ಎನ್ನುವುದು ಪೋರ್ಚುಗೀಸ್ ಪದವಾಗಿದ್ದು, ‘ಕೃತಜ್ಞತೆ’ ಎಂಬ ಅರ್ಥ ನೀಡುತ್ತದೆ. ಭುವನೇಶ್ವರ್ ಭಾರತ ತಂಡಕ್ಕೆ ಮರಳುತ್ತಿದ್ದಂತೆ ನೂಪುರ್ ಹಂಚಿಕೊಂಡ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಗಮನ ಸೆಳೆದಿದೆ.

IPL 2026ರ ಭರ್ಜರಿ ಪ್ರದರ್ಶನವೇ ತಂಡಕ್ಕೆ ಕಮ್‌ ಬ್ಯಾಕ್ ಆಗಲು ಕಾರಣ?

IPL 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಭುವನೇಶ್ವರ್ ಕುಮಾರ್ ನೀಡಿದ ಉತ್ತಮ ಪ್ರದರ್ಶನವೇ ಅವರನ್ನು ಮತ್ತೆ ಭಾರತ ತಂಡಕ್ಕೆ ಕರೆತರಲು ಪ್ರಮುಖ ಕಾರಣವಾಗಿದೆ. ಆರ್‌ಸಿಬಿ ಪರ ಅವರು ಎಲ್ಲಾ 16 ಪಂದ್ಯಗಳಲ್ಲೂ ಆಡಿದ್ದು, ಒಟ್ಟು 28 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಬೌಲಿಂಗ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದ್ದರ ಪರಿಣಾಮವಾಗಿ ಮತ್ತೆ ಭಾರತದ ಟಿ20ಗೆ ಕಮ್ ಬ್ಯಾಕ್ ಆಗಿದ್ದಾರೆ.

ಬುಮ್ರಾ ಜವಾಬ್ದಾರಿ ಭುವಿಗೆ?

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಜಸ್‌ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಭಾರತದ ವೇಗದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಅನುಭವಿ ವೇಗದ ಬೌಲರ್ ಆಗಿರುವ ಭುವನೇಶ್ವರ್, ಅರ್ಷದೀಪ್ ಸಿಂಗ್ ಜೊತೆಗೆ ವೇಗದ ಬೌಲಿಂಗ್ ಜವಾಬ್ದಾರಿ ಹಂಚಿಕೊಳ್ಳುವ ನಿರೀಕ್ಷೆಯಿದೆ. ಈ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಲಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್‌ಗಳ ಗಡಿ ದಾಟಿದ ಏಕೈಕ ವೇಗದ ಬೌಲರ್ ಕೂಡ ಭುವನೇಶ್ವರ್ ಕುಮಾರ್ ಎಂಬುದು ಸಣ್ಣ ಸಾಧನೆಯಲ್ಲ. ಟಿ20 ಕ್ರಿಕೆಟ್‌ನಲ್ಲಿ ಅವರ ದೀರ್ಘಕಾಲದ ಸಾಧನೆಗೆ ಇದು ಮತ್ತೊಂದು ಸಾಕ್ಷಿಯಾಗಿದೆ.

ಭುವನೇಶ್ವರ್ ಮತ್ತೆ ಏಕದಿನ ತಂಡಕ್ಕೂ ಮರಳುತ್ತಾರಾ?

ಭುವನೇಶ್ವರ್ ಅವರ ಟಿ20 ಕಮ್‌ಬ್ಯಾಕ್ ಏಕದಿನ ತಂಡಕ್ಕೆ ಮರಳುವ ಸಾಧ್ಯತೆಯನ್ನೂ ಹೆಚ್ಚಿಸಿದೆ. 2027ರ ಏಕದಿನ ವಿಶ್ವಕಪ್‌ಗಾಗಿ ಬಿಸಿಸಿಐ ರೂಪಿಸಿರುವ ಪ್ಲಾನ್‌ನಲ್ಲಿ ಅನುಭವಿ ವೇಗದ ಬೌಲರ್ ಭುವನೇಶ್ವರ್ ಅವರೂ ಇದ್ದಾರೆ ಎಂದು ವರದಿಗಳು ತಿಳಿಸಿವೆ.. ಇದು ನಿಜವಾದರೆ, ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಏಕದಿನ ಸರಣಿಗೂ ಅವರು ಆಡುವ ಸಾಧ್ಯತೆಯೂ ಇದೆ.

ಮುಂಬರುವ ದಿನಗಳಲ್ಲಿ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಭಾರತದ ಏಕದಿನ ಹಾಗೂ ಟೆಸ್ಟ್ ತಂಡಗಳನ್ನು ಬಿಸಿಸಿಐ ಪ್ರಕಟಿಸುವ ನಿರೀಕ್ಷೆಯಿದೆ.

ಭುವನೇಶ್ವರ್ ಕುಮಾರ್ ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದು ಯಾವಾಗ?

ಭುವನೇಶ್ವರ್ ಕುಮಾರ್ ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದು 2022ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾರ್ಲ್‌ನಲ್ಲಿ. ಇನ್ನು ಕೊನೆಯ ಬಾರಿ ಲಿಸ್ಟ್ ಎ ಪಂದ್ಯವನ್ನು ಉತ್ತರ ಪ್ರದೇಶ ಪರವಾಗಿ ಆಂಧ್ರಪ್ರದೇಶ ವಿರುದ್ಧ 2023ರ ಡಿಸೆಂಬರ್ 3ರಂದು ಚಂಡೀಗಢದಲ್ಲಿ ಆಡಿದ್ದರು.

ನ್ಯೂಜಿಲೆಂಡ್ ವಿರುದ್ಧ ಭಾರತದ ಟಿ20 ತಂಡದ ಲಿಸ್ಟ್ ಇಲ್ಲಿದೆ

ಶ್ರೇಯಸ್ ಅಯ್ಯರ್ [ನಾಯಕ], ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ [ವಿಕೆಟ್ ಕೀಪರ್], ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ [ವಿಕೆಟ್ ಕೀಪರ್], ತಿಲಕ್ ವರ್ಮಾ [ಉಪನಾಯಕ], ಅಕ್ಷರ್ ಪಟೇಲ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್.