RCB ಎದುರು ಭರ್ಜರಿ ಜಯ ಸಾಧಿಸಿದ ಕೋಲ್ಕತಾ ನೈಟ್ ರೈಡರ್ಸ್‌ಪಂದ್ಯ ಮುಕ್ತಾಯದ ಬಳಿಕ ಮೈದಾನಕ್ಕೆ ಬಂದು ಕೊಹ್ಲಿ ಭೇಟಿಯಾದ ಶಾರುಖ್ ಖಾನ್ವಿರಾಟ್ ಕೊಹ್ಲಿಗೆ ಡ್ಯಾನ್ಸ್ ಹೇಳಿಕೊಟ್ಟ ಬಾಲಿವುಡ್ ನಟ ಶಾರುಖ್ ಖಾನ್
ಕೋಲ್ಕತಾ(ಏ.07): ಬಾಲಿವುಡ್ ನಟ ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 81 ರನ್ ಭರ್ಜರಿ ಜಯ ಸಾಧಿಸಿದೆ. ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಆರ್‌ಸಿಬಿ ಎದುರು ನಿತೀಶ್ ರಾಣಾ ನೇತೃತ್ವದ ಕೆಕೆಆರ್ ತಂಡವು ಅನಾಯಾಸವಾದ ಗೆಲುವು ಸಾಧಿಸಿದೆ. ಈ ಪಂದ್ಯದ ವೇಳೆ ಶಾರುಖ್ ಖಾನ್ ಹಾಗೂ ಅವರ ಪುತ್ರಿ ಸುಹಾನ ಖಾನ್ ಮತ್ತೆ ಆಕೆಯ ಗೆಳತಿ ಶನಯಾ ಖಾನ್ ಸ್ಟೇಡಿಯಂನಲ್ಲಿ ಹಾಜರಿದ್ದು, ತಮ್ಮ ತಂಡವನ್ನು ಹುರಿದುಂಬಿಸಿದರು.
ಕಪ್ಪು ಬಣ್ಣದ ಹೂಡಿ ಹಾಗೂ ಕಪ್ಪು ಪ್ಯಾಂಟ್ ತೊಟ್ಟು ಬಂದಿದ್ದ ಶಾರುಖ್ ಖಾನ್, ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ನಿರಾಸೆಯನ್ನುಂಟು ಮಾಡಲಿಲ್ಲ. ಪಂದ್ಯ ಮುಗಿಯುತ್ತಿದ್ದಂತೆಯೇ, ಮೈದಾನಕ್ಕೆ ಧಾವಿಸಿದ ಶಾರುಖ್, ಎಲ್ಲರ ಜತೆ ಪ್ರೀತಿಯಿಂದ ಮಾತನಾಡಿ ಗಮನ ಸೆಳೆದರು.
ಶಾರುಖ್ ಖಾನ್ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುವ ಹಾಗೂ ಪಂದ್ಯ ಮುಕ್ತಾಯದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಮೈದಾನದಲ್ಲಿರುವ ಹಲವು ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ಆದರೆ ಓರ್ವ ನೆಟ್ಟಿಗ ಹಂಚಿಕೊಂಡ ವಿಡಿಯೋದಲ್ಲಿ ಶಾರುಖ್ ಖಾನ್, ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ತಮ್ಮ ನಟನೆಯ ಪಠಾಣ್ ಸಿನಿಮಾದ " ಝೂಮೇ ಜೋ ಪಠಾಣ್' ಹಾಡಿನ ಸ್ಟೆಪ್ಸ್ ಹೇಳಿಕೊಟ್ಟಿದ್ದಾರೆ. ಕೊಹ್ಲಿ ಹಾಗೂ ಶಾರುಖ್ ಡ್ಯಾನ್ಸ್ ಮಾಡುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಆರ್‌ಸಿಬಿ ಎದುರು ಕೆಕೆಆರ್ ತಂಡವು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಶಾರುಖ್ ಖಾನ್, ಮೈದಾನಕ್ಕಿಳಿದು ವಿರಾಟ್ ಕೊಹ್ಲಿಯತ್ತ ಓಡಿಬಂದು ಬಿಗಿದಪ್ಪಿಕೊಂಡು, ಅವರ ಕೆನ್ನೆಯನ್ನು ಸವರಿದರು. ಇದಾದ ಬಳಿಕ ಪಠಾಣ್ ಸಿನಿಮಾದ ಹಾಡಿನ ಸ್ಟೆಪ್ಸ್ ಹೇಳಿಕೊಟ್ಟರು.
ಹೇಗಿತ್ತು ಆರ್‌ಸಿಬಿ-ಕೆಕೆಆರ್ ಪಂದ್ಯ..?
ದೊಡ್ಡ ಗೆಲುವಿನೊಂದಿಗೆ 16ನೇ ಆವೃತ್ತಿಯ ಐಪಿಎಲ್ ಅನ್ನು ಆರಂಭಿಸಿ ಸಂಭ್ರಮಿಸಿದ್ದ ಆರ್‌ಸಿಬಿ ತನ್ನ ಎರಡನೇ ಪಂದ್ಯದಲ್ಲೇ ಲಯ ಕಳೆದುಕೊಂಡಿದೆ. ಕೋಲ್ಕತಾ ನೈಟ್ರೈಡರ್ಸ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 81 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಬೌಲಿಂಗ್ ವೇಳೆ ಮೊದಲ 11 ಓವರ್, ಬ್ಯಾಟಿಂಗ್ ವೇಳೆ ಮೊದಲ 4 ಓವರ್ ಹೊರತುಪಡಿಸಿ ಇನ್ನುಳಿದ ಅವಧಿಯಲ್ಲಿ ಕೆಕೆಆರ್ ಹೊಡೆತಕ್ಕೆ ಆರ್‌ಸಿಬಿ ನಲುಗಿತು.
ಶಾರ್ದೂಲ್ ಠಾಕೂರ್-ರಿಂಕು ಸಿಂಗ್‌ರ 6ನೇ ವಿಕೆಟ್ ಜೊತೆಯಾಟ, ಸ್ಪಿನ್ನರ್‌ಗಳ ಕೈಚಳಕ ಕೆಕೆಆರ್‌ಗೆ ಈ ಆವೃತ್ತಿಯಲ್ಲಿ ಮೊದಲ ಗೆಲುವು ತಂದುಕೊಟ್ಟಿತು. ಮೊದಲು ಬ್ಯಾಟ್ ಮಾಡಲು ಇಳಿದ ಕೆಕೆಆರ್ 11.3 ಓವರಲ್ಲಿ 89 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಶಾರ್ದೂಲ್ ಹಾಗೂ ರಿಂಕು ತಂಡದ ಮೊತ್ತ 200 ರನ್ ದಾಟಲು ಕಾರಣರಾದರು. 20 ಓವರಲ್ಲಿ ಕೆಕೆಆರ್ 7 ವಿಕೆಟ್‌ಗೆ 204 ರನ್ ಕಲೆಹಾಕಿತು.
IPL 2023: KKR ಎದುರಿನ ಸೋಲಿನ ಬೆನ್ನಲ್ಲೇ RCBಗೆ ಮತ್ತೊಂದು ಶಾಕ್; ತಾರಾ ವಿದೇಶಿ ಆಟಗಾರ ಟೂರ್ನಿಯಿಂದಲೇ ಔಟ್..!
ಬೃಹತ್ ಗುರಿ ಬೆನ್ನತ್ತಲು ಇಳಿದ ಆರ್‌ಸಿಬಿ 4 ಓವರಲ್ಲಿ ವಿಕೆಟ್ ನಷ್ಟವಿಲ್ಲದೆ 44 ರನ್ ಸಿಡಿಸಿತು. ಆದರೆ ಮುಂದಿನ 2.3 ಓವರಲ್ಲಿ ಕೊಹ್ಲಿ(21), ಡು ಪ್ಲೆಸಿ(23) ಹಾಗೂ ಮ್ಯಾಕ್ಸ್‌ವೆಲ್(05)ರ ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊಹ್ಲಿಯನ್ನು ನರೇನ್ ಬೌಲ್ಡ್ ಮಾಡಿದರೆ, ಡು ಪ್ಲೆಸಿ ಹಾಗೂ ಮ್ಯಾಕ್‌ವೆಲ್‌ರ ವಿಕೆಟನ್ನು ವರುಣ್ ಚಕ್ರವರ್ತಿ ಉರುಳಿಸಿದರು.
10 ಓವರಲ್ಲಿ 5 ವಿಕೆಟ್‌ಗೆ ಕೇವಲ 69 ರನ್ ಕಲೆಹಾಕಿದ ಆರ್‌ಸಿಬಿಗೆ ಗೆಲ್ಲಲು ಕೊನೆ 10 ಓವರಲ್ಲಿ 136 ರನ್ ಬೇಕಿತ್ತು. ಮೈಕಲ್ ಬ್ರೇಸ್‌ವೆಲ್‌ರಂತಹ ಸ್ಫೋಟಕ ಬ್ಯಾಟರ್‌ಗೂ ಈ ಗುರಿ ಬೆನ್ನತ್ತುವುದು ಅಸಾಧ್ಯವೆನಿಸಿತು. ಒತ್ತಡಕ್ಕೆ ಸಿಲುಕಿದ ಬ್ರೇಸ್‌ವೆಲ್(19) ಸಹ ವಿಕೆಟ್ ಕಳೆದುಕೊಂಡು ಪೆವಿಲಿಯನ್‌ಗೆ ಮರಳಿದರು. ಕಾರ್ತಿಕ್(09), ಇಂಪ್ಯಾಕ್ಟ್ ಆಟಗಾರನಾಗಿ ಕ್ರೀಸ್‌ಗಿಳಿದ ಅನುಜ್ ರಾವತ್ (01)ರ ಆಟ ಯಾವುದೇ ಪರಿಣಾಮ ಬೀರಲಿಲ್ಲ. 17.4 ಓವರಲ್ಲಿ ಆರ್‌ಸಿಬಿ 123 ರನ್‌ಗೆ ಆಲೌಟ್ ಆಯಿತು.
