- Home
- Sports
- Cricket
- IPL 2023: KKR ಎದುರಿನ ಸೋಲಿನ ಬೆನ್ನಲ್ಲೇ RCBಗೆ ಮತ್ತೊಂದು ಶಾಕ್; ತಾರಾ ವಿದೇಶಿ ಆಟಗಾರ ಟೂರ್ನಿಯಿಂದಲೇ ಔಟ್..!
IPL 2023: KKR ಎದುರಿನ ಸೋಲಿನ ಬೆನ್ನಲ್ಲೇ RCBಗೆ ಮತ್ತೊಂದು ಶಾಕ್; ತಾರಾ ವಿದೇಶಿ ಆಟಗಾರ ಟೂರ್ನಿಯಿಂದಲೇ ಔಟ್..!
ಬೆಂಗಳೂರು(ಮಾ.07): ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಇದೀಗ, ಕೋಲ್ಕತಾ ನೈಟ್ ರೈಡರ್ಸ್ ಎದುರು ಹೀನಾಯ ಸೋಲು ಅನುಭವಿಸಿರುವ ಆರ್‌ಸಿಬಿ ತಂಡಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ತಂಡದ ಪ್ರಮುಖ ವಿದೇಶಿ ಆಟಗಾರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ತಾನಾಡಿದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 8 ವಿಕೆಟ್ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಇನ್ನು ಇದೀಗ ಕೆಕೆಆರ್ ಎದುರಿನ ಎರಡನೇ ಪಂದ್ಯದಲ್ಲಿ 81 ರನ್ ಹೀನಾಯ ಸೋಲು ಅನುಭವಿಸಿದೆ.
ಇದೀಗ ಇಂಗ್ಲೆಂಡ್ ಮೂಲದ ಆರ್‌ಸಿಬಿ ಎಡಗೈ ವೇಗಿ ರೀಸ್ ಟಾಪ್ಲಿ ಗಾಯದ ಸಮಸ್ಯೆಯಿಂದಾಗಿ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಬಿದ್ದಿರುವ ವಿಚಾರವನ್ನು ಆರ್‌ಸಿಬಿ ಹೆಡ್‌ಕೋಚ್ ಸಂಜಯ್ ಬಂಗಾರ್ ಖಚಿತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವ ಸಂದರ್ಭದಲ್ಲಿ ರೀಸ್ ಟಾಪ್ಲಿ, ಭುಜದ ಗಾಯಕ್ಕೆ ಒಳಗಾಗಿದ್ದರು. ಇದರ ಹೊರತಾಗಿಯೂ ಟಾಪ್ಲಿ, ಆರ್‌ಸಿಬಿ ತಂಡದ ಜತೆಗೆ ಕೋಲ್ಕತಾಗೆ ಪ್ರಯಾಣ ಬೆಳೆಸಿದ್ದರು.
"ದುರಾದೃಷ್ಟವಶಾತ್, ರೀಸ್ ಟಾಪ್ಲಿ ತವರಿಗೆ ವಾಪಾಸ್ಸಾಗಲಿದ್ದಾರೆ. ಯಾಕೆಂದರೆ ಅವರು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರನ್ನು ನಮ್ಮ ತಂಡದೊಟ್ಟಿಗೆ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದೆವು. ಆದರೆ ತಜ್ಞರ ಸಲಹೆಯ ಮೇರೆಗೆ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವುದರಿಂದ ಅವರು ತವರಿಗೆ ವಾಪಾಸ್ಸಾಗುತ್ತಿದ್ದಾರೆ ಎಂದು ಬಂಗಾರ್ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಶ್ರೀಲಂಕಾದ ಲೆಗ್‌ಸ್ಪಿನ್ನರ್ ವನಿಂದು ಹಸರಂಗ ಏಪ್ರಿಲ್ 10ರಂದು ಹಾಗೂ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಏಪ್ರಿಲ್ 14ರಂದು ತಂಡ ಕೂಡಿಕೊಳ್ಳುವ ವಿಶ್ವಾಸವಿದೆ ಎಂದು ಆರ್‌ಸಿಬಿ ಹೆಡ್ ಕೋಚ್ ಬಂಗಾರ್ ತಿಳಿಸಿದ್ದಾರೆ.
ಜೋಶ್ ಹೇಜಲ್‌ವುಡ್ ಏಪ್ರಿಲ್ 14ಕ್ಕೆ ಬಂದಿಳಿಯಲ್ಲಿದ್ದಾರೆ. ಇಲ್ಲಿ ಕೆಲಕಾಲ ಅಭ್ಯಾಸ ನಡೆಸಿದ ಬಳಿಕ ಏಪ್ರಿಲ್ 17ರ ವೇಳೆಗೆ ತಂಡದ ಆಯ್ಕೆಗೆ ಲಭ್ಯವಿರಲಿದ್ದಾರೆ ಎಂದು ಬಂಗಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 17ರಂದು ಆರ್‌ಸಿಬಿ ತಂಡವು ತವರಿನಲ್ಲಿ ಬದ್ದ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಕಾದಾಡಲಿದೆ.
ಈಗಾಗಲೇ ಆರ್‌ಸಿಬಿ ತಂಡದ ಬ್ಯಾಟರ್‌ಗಳಾದ ರಜತ್ ಪಾಟೀದಾರ್ ಹಾಗೂ ವಿಲ್ ಜ್ಯಾಕ್ಸ್ ಅವರ ಸೇವೆ ಬಳಸಿಕೊಳ್ಳಲು ವಿಫಲವಾಗಿದೆ. ಈ ಇಬ್ಬರು ಆಟಗಾರರು ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ವಿಲ್ ಜ್ಯಾಕ್ಸ್ ಬದಲಿಗೆ ಮಿಚೆಲ್ ಬ್ರೇಸ್‌ವೆಲ್ ತಂಡ ಕೂಡಿಕೊಂಡಿದ್ದಾರೆ.