ಫಿಲ್ ಸಾಲ್ಟ್ ಅಬ್ಬರದ ಆರಂಭದ ನಂತರ, ಡೆಲ್ಲಿ ಬೌಲರ್‌ಗಳು ಆರ್​ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಟಿಮ್ ಡೇವಿಡ್ ಅವರ ಅಜೇಯ 37 ರನ್​ಗಳ ನೆರವಿನಿಂದ ಆರ್​ಸಿಬಿ ಡೆಲ್ಲಿಗೆ 164 ರನ್​ಗಳ ಗುರಿ ನೀಡಿದೆ.

ಬೆಂಗಳೂರು (ಏ.10): ಫಿಲ್‌ ಸಾಲ್ಟ್‌ ಅಬ್ಬರದ ಆಟದಿಂದ ಮೊದಲ 23 ಎಸೆತಗಳಲ್ಲಿ 61 ರನ್‌ ಬಾರಿಸಿದ್ದ ಆರ್‌ಸಿಬಿ ನಂತರದ 97 ಎಸೆತಗಳಲ್ಲಿ ಕೇವಲ 102 ರನ್‌ ಬಾರಿಸಲು ಸಾಧ್ಯವಾಯಿತು. ಅಷ್ಟರ ಮಟ್ಟಿಗೆ ಫಿಲ್‌ ಸಾಲ್ಟ್‌ ಅಬ್ಬರದ ಆಟಕ್ಕೆ ಡೆಲ್ಲಿ ಬೌಲರ್‌ಗಳು ಹುಳಿ ಹಿಂಡುವಲ್ಲಿ ಯಶಸ್ವಿಯಾದರು.

ಇದರಿಂದಾಗಿ ಆರ್‌ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಗೆಲುವಿಗೆ ಸಾಧಾರಣ 164 ರನ್‌ಗಳ ಗುರಿ ನೀಡಿದೆ. ಅದರಲ್ಲೂ ತಂಡದ ಮೊತ್ತ 160 ರನ್‌ಗಳ ಗಡಿ ದಾಟಲು ಕಾರಣವಾಗಿದ್ದು ಟಿಮ್‌ ಡೇವಿಡ್‌ ಸಾಹಸ. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಟಿಮ್‌ ಡೇವಿಡ್‌, ಎದುರಿಸಿದ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್‌ನೊಂದಿಗೆ ಅಜೇಯ 37 ರನ್‌ ಸಿಡಿಸಿ ಆರ್‌ಸಿಬಿ ಮೊತ್ತ 163ಕ್ಕೇರುವಲ್ಲಿ ನೆರವಾದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡಕ್ಕೆ ಭರ್ಜರಿ ಆರಂಭ ಸಿಕ್ಕಿತ್ತು. ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಕೇವಲ 23 ಎಸೆತಗಳಲ್ಲಿ 61 ರನ್‌ಗಳ ಭರ್ಜರಿ ಜೊತೆಯಾಟವಾಡಿದ್ದರು. 17 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್‌ನೊಂದಿಗೆ ಅಬ್ಬರಿಸುತ್ತಿದ್ದ ಫಿಲ್‌ ಸಾಲ್ಟ್‌, 4ನೇ ಓವರ್‌ನ ಕೊನೇ ಎಸೆತದಲ್ಲಿ ದುರಾದೃಷ್ಟದಿಂದ ರನ್‌ಔಟ್‌ ಆಗಿದ್ದು ಆರ್‌ಸಿಬಿ ವೇಗವನ್ನು ಕುಗ್ಗಿಸಿತು. ಅಲ್ಲಿಯವರೆಗೂ ಓವರ್‌ಗೆ ತಲಾ 15 ರನ್‌ನಂತೆ ಬ್ಯಾಟಿಂಗ್‌ ಮಾಡುತ್ತಿದ್ದ ಆರ್‌ಸಿಬಿಯ ಬ್ಯಾಟಿಂಗ್‌ ಲಯವೇ ಈ ವಿಕೆಟ್‌ನಿಂದ ಬದಲಾಯಿತು.

ಈ ಹಂತದಿಂದ ಬ್ಯಾಟಿಂಗ್‌ನಲ್ಲಿ ಕುಸಿತವನ್ನೇ ಕಂಡ ಆರ್‌ಸಿಬಿ, ಅಲ್ಪ ಮೊತ್ತಕ್ಕೆ ಕುಸಿಯುವ ಅಪಾಯವನ್ನೂ ಎದುರಿಸಿತ್ತು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಗೆ ಇಳಿದಿದ್ದ ದೇವದತ್‌ ಪಡಿಕ್ಕಲ್‌, ತವರಿನ ಲಾಭವನ್ನೂ ಬಳಸಿಕೊಳ್ಳದೆ 8 ಎಸೆತಗಳಲ್ಲಿ 1 ರನ್‌ ಬಾರಿಸಿ ಕೊಳಕು ಶಾಟ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.

ನಾಯಕ ರಜತ್‌ ಪಾಟಿದಾರ್‌ (25 ರನ್,‌ 23 ಎಸೆತ, 1 ಬೌಂಡರಿ, 1 ಸಿಕ್ಸರ್‌) ಜೊತೆಯಾದ ಲಿವಿಂಗ್‌ ಸ್ಟೋನ್‌ (4) ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಜಿಜೇಶ್‌ ಶರ್ಮ 3 ರನ್‌ ಬಾರಿಸಿ ಔಟಾದರೆ, ಕೃನಾಲ್‌ ಪಾಂಡ್ಯ ಎಸೆತಕ್ಕೊಂದರಂತೆ 18 ರನ್‌ ಬಾರಿಸಿ ಔಟಾದಾಗ ಆರ್‌ಸಿಬಿ 125 ರನ್‌ ಬಾರಿಸಿತ್ತು. ಇನ್ನೂ 17 ಎಸೆತಗಳು ಇನ್ನಿಂಗ್ಸ್‌ನಲ್ಲಿ ಬಾಕಿ ಉಳಿದಿದ್ದವು.

ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ವಿರಾಟ್‌ ಕೊಹ್ಲಿ, ಈ ದಾಖಲೆ ಮಾಡಿದ ಏಕೈಕ ಆಟಗಾರ!

140ರ ಆಸುಪಾಸಿನ ರನ್‌ ಬಾರಿಸಬಹುದು ಎನ್ನುವ ಹಂತದಲ್ಲಿದ್ದ ಸಮಯದಲ್ಲಿ ಟಿಮ್‌ ಡೇವಿಡ್‌ ಸ್ಪೋಟಕ ಇನ್ನಿಂಗ್ಸ್‌ ಆಡಿ ತಂಡದ ಮೊತ್ತವನ್ನು ಏರಿಸಿದರು. ಡೆಲ್ಲಿ ಪರವಾಗಿ ವಿಪ್ರಜ್‌ ನಿಗಮ್‌ ಹಾಗೂ ಕುಲದೀಪ್‌ ಯಾದವ್‌ ತಲಾ 2 ವಿಕೆಟ್‌ ಉರುಳಿಸಿದರೆ, ಮುಖೇಶ್‌ ಕುಮಾರ್‌ ಹಾಗೂ ಮೋಹಿತ್‌ ಶರ್ಮ ಒಂದೊಂದು ವಿಕೆಟ್‌ ಪಡೆದರು.

RCB ಕಂಡ್ರೆ ಜೋಶ್, ಅದು ನಮ್ಮ ಭಾಷೆ, ಸಂಸ್ಕೃತಿ ಬಿಂಬಿಸುತ್ತೆ ಎಂದ ಶಿವಣ್ಣ