18ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಆರ್‌ಸಿಬಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ತಾನಾಡಿದ ಮೊದಲ 4 ಪಂದ್ಯಗಳ ಪೈಕಿ ಮೂರು ಪಂದ್ಯಗಳನ್ನು ಜಯಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದು ಹ್ಯಾಟ್ರಿಕ್ ಗೆಲುವು ಸಾಧಿಸಿ ಅಜೇಯವಾಗಿ ಮುನ್ನುಗ್ಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಲು ಆರ್‌ಸಿಬಿ ಸಜ್ಜಾಗಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯಕ್ಕೂ ಮುನ್ನ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಆರ್‌ಸಿಬಿ ತಂಡದ ಬಗ್ಗೆ ಮುತ್ತಿನಂಥ ಮಾತುಗಳನ್ನಾಡಿದ್ದಾರೆ.

ಐಪಿಎಲ್ ಆರಂಭವಾಗಿ 18 ವರ್ಷಗಳಾಗಿವೆ. 18 ವರ್ಷದಲ್ಲಿ ಏನೇ ಆಡಲಿ ಆರ್‌ಸಿಬಿ ಕಂಡ್ರೆ ಒಂದು ರೀತಿ ಜೋಶ್, ಉತ್ಸಾಹ. ಅದೇನೋ ಗೊತ್ತಿಲ್ಲ, ಆರ್‌ಸಿಬಿ ಅಂದ್ರೆ ಜೀವ. ಬಹುಶಃ ಅದು ಬೆಂಗಳೂರನ್ನು ಪ್ರತಿನಿಧಿಸುತ್ತೆ. ಅದು ನಮ್ಮ ಭಾಷೆ, ಸಂಸ್ಕೃತಿ ಬಿಂಬಿಸುತ್ತೆ. ಆರ್‌ಸಿಬಿ ಯಾವಾಗ ಆಡಿದ್ರೂ ಸರಿ ಒಂದು ಜೋಶ್‌ನಲ್ಲಿ ಆಡ್ತಾರೆ. 18ನೇ ಆವೃತ್ತಿಯಲ್ಲಿ ಆರ್‌ಸಿಬಿಗೆ ಒಳ್ಳೆದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ, ನೀವು ಸ್ಟೇಡಿಯಂಗೆ ಹೋಗಿ ಎಂಜಾಯ್ ಮಾಡಿ ಆರ್‌ಸಿಬಿ ತಂಡವನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

View post on Instagram

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ದ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು. ಇನ್ನು ಚೆನ್ನೈನ ಚೆಪಾಕ್ ಮೈದಾನದಲ್ಲಿ 17 ವರ್ಷಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಎದುರು 50 ರನ್ ಅಂತರದ ಗೆಲುವು ಸಾಧಿಸಿತ್ತು. ಇನ್ನು ತವರಿನಲ್ಲಿ ಗುಜರಾತ್ ಟೈಟಾನ್ಸ್ ಎದುರು 8 ವಿಕೆಟ್‌ ಸೋಲು ಕಂಡಿದ್ದ ಆರ್‌ಸಿಬಿ, ಮುಂಬೈನ ವಾಂಖೆಡೆ ಮೈದಾನದಲ್ಲಿ ದಶಕದ ಬಳಿಕ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಇಂದಾದ್ರೂ ತವರಲ್ಲಿ ಆರ್‌ಸಿಬಿಗೆ ಸಿಗುತ್ತಾ ಜಯ? ಡೆಲ್ಲಿ ವಿರುದ್ಧ ಪೈಪೋಟಿ!

ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಆರ್‌ಸಿಬಿ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಆಡುತ್ತಾ ಬಂದಿದೆಯಾದರೂ ಕಳೆದ 17 ಐಪಿಎಲ್ ಸೀಸನ್‌ನಲ್ಲಿ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಮೂರು ಬಾರಿ ಫೈನಲ್ ಪ್ರವೇಶಿಸಿದ್ದೇ ಆರ್‌ಸಿಬಿ ತಂಡದ ಈ ವರೆಗಿನ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ. ಆರ್‌ಸಿಬಿ ತಂಡವು 2009ರಲ್ಲಿ ಮೊದಲ ಸಲ ಐಪಿಎಲ್ ಫೈನಲ್ ಪ್ರವೇಶಿಸಿತ್ತು, ಆದರೆ ಫೈನಲ್‌ನಲ್ಲಿ ಡೆಕ್ಕನ್ ಚಾರ್ಜಸ್‌ಗೆ ಶರಣಾಗಿತ್ತು. ಇನ್ನು ಇದಾದ ಬಳಿಕ 2011ರಲ್ಲಿ ಎರಡನೇ ಆರ್‌ಸಿಬಿ ಫೈನಲ್ ಪ್ರವೇಶಿಸಿ, ಚೆನ್ನೈ ಸೂಪರ್ ಕಿಂಗ್ಸ್ ಎದುರು ಮುಗ್ಗರಿಸಿತ್ತು. ಇನ್ನು 2016ರ ಐಪಿಎಲ್‌ನ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಎದುರು ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಇದನ್ನೂ ಓದಿ: ಗುಜರಾತ್ ಎದುರು ಮುಗ್ಗರಿಸಿದ ರಾಜಸ್ಥಾನ ರಾಯಲ್ಸ್‌ಗೆ ಮತ್ತೊಂದು ಬಿಗ್ ಶಾಕ್!

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಸಾಕಷ್ಟು ಅಳೆದುತೂಗಿ ಸಮತೋಲಿತ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ. ಬ್ಯಾಟಿಂಗ್‌ನಲ್ಲಿ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್, ಜಿತೇಶ್ ಶರ್ಮಾ ಅವರಂತಹ ಸ್ಪೋಟಕ ಬ್ಯಾಟರ್‌ಗಳಿದ್ದಾರೆ. ಇನ್ನು ಟಿಮ್ ಡೇವಿಡ್, ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ ಆಲ್ರೌಂಡ್ ಪ್ರದರ್ಶನ ತೋರುತ್ತಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್‌ವುಡ್ ಮಾರಕ ದಾಳಿ ಸಂಘಟಿಸುತ್ತಿದ್ದು, ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.