2026ರ ಐಪಿಎಲ್ ಮಿನಿ ಹರಾಜಿನಲ್ಲಿ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ವಿಶ್ಲೇಷಣೆಯ ಪ್ರಕಾರ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ 20 ಕೋಟಿಗೂ ಹೆಚ್ಚು ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ. ಅವರ ಆಲ್ರೌಂಡ್ ಸಾಮರ್ಥ್ಯದಿಂದಾಗಿ, KKR ಮತ್ತು CSK ಅವರನ್ನು ಖರೀದಿಸುವ ನಿರೀಕ್ಷೆಯಿದೆ.
ಬೆಂಗಳೂರು: 2026 ರ ಐಪಿಎಲ್ ಮಿನಿ ಹರಾಜಿನ (IPL 2026 Mini Auction) ಬೆಳಕು ಈಗ ಡಿಸೆಂಬರ್ 16ರಂದು ಯುಎಇನಲ್ಲಿ ಅಬುಧಾಬಿಯಲ್ಲಿ ನಡೆಯಲಿದ್ದು, ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಈಗಾಗಲೇ ರಣತಂತ್ರ ಹೆಣೆಯುತ್ತಿವೆ. ಇದೆಲ್ಲರ ನಡುವೆ ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗುವ ಆಟಗಾರ ಯಾರು ಎನ್ನುವ ಚರ್ಚೆ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ.
ಸದ್ಯದ ಬಿಸಿಸಿಐ ನಿಯಮಾವಳಿಗಳ ಪ್ರಕಾರ, ಯಾವುದೇ ವಿದೇಶಿ ಆಟಗಾರ 18 ಕೋಟಿ ರುಪಾಯಿಗಿಂತ ಹೆಚ್ಚು ತಮ್ಮ ತವರಿಗೆ ವಾಪಾಸ್ ತೆಗೆದುಕೊಂಡು ಹೋಗುವಂತಿಲ್ಲ. ಆದರೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್(AI) ವಿಶ್ಲೇಷಣೆ ಪ್ರಕಾರ, ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ 20 ಕೋಟಿ ರುಪಾಯಿಗಿಂತಲೂ ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ.
ಅಷ್ಟಕ್ಕೂ ಕ್ಯಾಮರೋನ್ ಗ್ರೀನ್ ಅವರಿಗ್ಯಾಕೆ ಅಷ್ಟು ಡಿಮ್ಯಾಂಡ್?
ಕ್ಯಾಮರೋನ್ ಗ್ರೀನ್ ಅವರಂತಹ ಆಟಗಾರರು ಈ ಬಾರಿಯ ಹರಾಜಿನಲ್ಲಿ ಇಲ್ಲ. ಈ ಕಾರಣಕ್ಕಾಗಿಯೇ ಎಲ್ಲಾ ಫ್ರಾಂಚೈಸಿಗಳ ಕಣ್ಣು ಕ್ಯಾಮರೋನ್ ಗ್ರೀನ್ ಅವರ ಮೇಲಿದೆ. ಆಸ್ಟ್ರೇಲಿಯಾ ಮೂಲದ ಈ ಆಲ್ರೌಂಡರ್ ಅಗ್ರಕ್ರಮಾಂಕದಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಇದರ ಜತೆಗೆ ಪರಿಸ್ಥಿತಿಗೆ ಅನುಗುಣವಾಗಿ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಗ್ರೀನ್ ಆಸರೆಯಾಗಬಲ್ಲರು. ಬೌಲಿಂಗ್‌ನಲ್ಲಿ ವೇಗದ ಜತೆಗೆ ಬೌನ್ಸ್ ಮಾಡುವ ಕೌಶಲವನ್ನು ಕ್ಯಾಮರೋನ್ ಗ್ರೀನ್ ಕರಗತ ಮಾಡಿಕೊಂಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಇಂತಹ ಆಟಗಾರ ಯಾವುದೇ ತಂಡದಲ್ಲಿದ್ದರೂ ನಿಜಕ್ಕೂ ಆಸ್ತಿಯಾಗಬಲ್ಲರು. ಅದರಲ್ಲೂ ವಿದೇಶಿ ಆಯ್ಕೆಗಳಲ್ಲಿ ಇಷ್ಟೆಲ್ಲಾ ಮಾಡಬಲ್ಲ ಆಟಗಾರರು ಈ ಬಾರಿಯ ಹರಾಜಿನಲ್ಲಿ ಹೆಚ್ಚು ಇಲ್ಲ.
ಚೆನ್ನೈ-ಕೆಕೆಆರ್ ತಂಡಗಳು ಗ್ರೀನ್ ಮೇಲೆ ಕಣ್ಣು!
ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಮಾಜಿ ಚಾಂಪಿಯನ್‌ಗಳಾದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕ್ಯಾಮರೋನ್ ಗ್ರೀನ್ ಮೇಲೆ ಹದ್ದಿನ ಕಣ್ಣಿಟ್ಟಿವೆ. ಯಾಕೆಂದರೆ ಕೆಕೆಆರ್ ಬಳಿ 64.3 ಕೋಟಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಬಳಿ 43.4 ಕೋಟಿ ರುಪಾಯಿ ಪರ್ಸ್ ಹೊಂದಿವೆ. ಅದರಲ್ಲೂ ಕೆಕೆಆರ್ ಫ್ರಾಂಚೈಸಿಯು ಆಂಡ್ರೆ ರಸೆಲ್ ಅವರಂತಹ ಬಿಗ್ ಪ್ಲೇಯರ್ ಕೈಬಿಟ್ಟಿರುವುದರಿಂದ ಅವರ ಸ್ಥಾನಕ್ಕೆ ಗ್ರೀನ್ ಕರೆತರಲು ಕೆಕೆಆರ್ ಫ್ರಾಂಚೈಸಿ ಮಾಸ್ಟರ್ ಪ್ಲಾನ್ ಹೆಣೆದಿದೆ ಎನ್ನಲಾಗುತ್ತಿದೆ.
ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಜಡೇಜಾ ಹಾಗೂ ಸ್ಯಾಮ್ ಕರ್ರನ್ ಅವರಂತಹ ಸ್ಟಾರ್ ಆಟಗಾರರನ್ನು ರಾಜಸ್ಥಾನ ರಾಯಲ್ಸ್‌ಗೆ ಟ್ರೇಡ್ ಮಾಡಿರುವುದರಿಂದ ಕ್ಯಾಮರೋನ್ ಅವರನ್ನು ಖರೀದಿಸಿ ತಂಡವನ್ನು ಮತ್ತಷ್ಟು ಬಲಿಷ್ಠವಾಗಿ ಮಾಡಿಕೊಳ್ಳಲು ಚಿಂತನೆ ನಡೆಸುತ್ತಿದೆ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್(AI) ವಿಶ್ಲೇಷಣೆ ಪ್ರಕಾರ ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಹರಾಜಾಗುವ ವಿದೇಶಿ ಆಟಗಾರ ಕ್ಯಾಮರೋನ್ ಗ್ರೀನ್ ಎನ್ನಲಾಗುತ್ತಿದೆ. ಇನ್ನು ಈ ಬಾರಿಯ ಮಿನಿ ಹರಾಜಿನಲ್ಲಿ ಅತಿದೊಡ್ಡ ಮೊತ್ತಕ್ಕೆ ಹರಾಜಾಗಬಲ್ಲ ಭಾರತೀಯ ಆಟಗಾರನೆಂದರೆ ಅದು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಎಂದು ಆರ್ಟಿಫಿಶಿಯಲ್ ಇಂಟಲಿಜೆನ್ಸ್(AI) ಭವಿಷ್ಯ ನುಡಿದಿದೆ.


