ಸ್ಮರಣ್‌ (133) ಶತಕದ ನೆರವಿನಿಂದ ಹರ್ಯಾಣ ವಿರುದ್ಧ ಕರ್ನಾಟಕ ರಣಜಿ ಪಂದ್ಯ ಡ್ರಾ ಸಾಧಿಸಿತು. 20 ಅಂಕಗಳೊಂದಿಗೆ ‘ಸಿ’ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆದು, ಕ್ವಾರ್ಟರ್‌ಫೈನಲ್‌ ತಲುಪಲು ವಿಫಲವಾಯಿತು. ಹಾರ್ದಿಕ್ ರಾಜ್ (40) ಜೊತೆಗಿನ 98 ರನ್ ಜೊತೆಯಾಟ ತಂಡಕ್ಕೆ ಆಸರೆಯಾಯಿತು. ಈ ಋತುವಿನಲ್ಲಿ ಸ್ಮರಣ್ 516 ರನ್ ಗಳಿಸಿ ರಾಜ್ಯದ ಪರ ಅಗ್ರ ಸ್ಕೋರರ್ ಆದರು.

ಬೆಂಗಳೂರು: ತಮ್ಮಲ್ಲಿರುವ ಅಗಾಧ ಪ್ರತಿಭೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ ರವಿಚಂದ್ರನ್‌ ಸ್ಮರಣ್‌, ಆಕರ್ಷಕ ಶತಕ ಬಾರಿಸುವ ಮೂಲಕ ಹರ್ಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಡ್ರಾ ಸಾಧಿಸಲು ನೆರವಾದರು. ಪಂದ್ಯದ 2ನೇ ದಿನವೇ ಕ್ವಾರ್ಟರ್‌ ಫೈನಲ್‌ ರೇಸ್‌ನಿಂದ ಹೊರಬಿದ್ದಿದ್ದ ಕರ್ನಾಟಕ, ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ 2024-25ರ ಸಾಲಿನ ರಣಜಿ ಟ್ರೋಫಿಯನ್ನು ಅಜೇಯವಾಗಿ ಮುಕ್ತಾಯಗೊಳಿಸಿತು.

ಗುಂಪು ಹಂತದಲ್ಲಿ ಆಡಿದ 7 ಪಂದ್ಯಗಳಲ್ಲಿ 2 ಗೆಲುವು, 5 ಡ್ರಾದೊಂದಿಗೆ 20 ಅಂಕ ಪಡೆದ ಕರ್ನಾಟಕ, ‘ಸಿ’ ಗುಂಪಿನಲ್ಲಿ 4ನೇ ಸ್ಥಾನ ಪಡೆಯಿತು. ಹರ್ಯಾಣ ಹಾಗೂ ಕೇರಳ ತಂಡಗಳು ಕ್ವಾರ್ಟರ್‌ಗೇರಿದವು.

3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 108 ರನ್‌ ಗಳಿಸಿದ್ದ ಕರ್ನಾಟಕ, ಇನ್ನೂ 38 ರನ್‌ ಹಿಂದಿತ್ತು. ಹೀಗಾಗಿ, ಯಾವುದೇ ಎಡವಟ್ಟುಗಳಿಗೆ ಅವಕಾಶ ನೀಡದೆ, ತನ್ನ ಕೊನೆಯ ಪಂದ್ಯದಲ್ಲಿ ಸೋಲಿನಿಂದ ಪಾರಾಗುವುದು ರಾಜ್ಯಕ್ಕೆ ಅನಿವಾರ್ಯ ಎನಿಸಿತ್ತು.

97 ರನ್‌ಗೆ ಇಂಗ್ಲೆಂಡ್ ಆಲೌಟ್, 150 ರನ್ ದಾಖಲೆ ಗೆಲುವಿನೊಂದಿಗೆ 4-1 ಅಂತರದಲ್ಲಿ ಸರಣಿ ವಶ

ಆದರೆ, ದೇವದತ್‌ ಪಡಿಕ್ಕಲ್‌ (43), ಕೆ.ಎಲ್‌.ಶ್ರೀಜಿತ್‌ (2), ಯಶೋವರ್ಧನ್‌ (12)ರ ವಿಕೆಟ್‌ಗಳನ್ನು ಕೇವಲ 12 ಓವರ್‌ ಅಂತರದಲ್ಲಿ ಕಳೆದುಕೊಂಡ ಕರ್ನಾಟಕ 6 ವಿಕೆಟ್‌ಗೆ 164 ರನ್‌ಗೆ ಕುಸಿಯಿತು. ಈ ಹಂತದಲ್ಲಿ ಆತಿಥೇಯ ತಂಡ ಕೇವಲ 16 ರನ್‌ ಮುನ್ನಡೆ ಹೊಂದಿತ್ತು. 7ನೇ ವಿಕೆಟ್‌ಗೆ ಸ್ಮರಣ್‌ಗೆ ಜೊತೆಯಾದ ಯುವ ಆಲ್ರೌಂಡರ್‌ ಹಾರ್ದಿಕ್‌ ರಾಜ್‌, ಅತ್ಯಮೂಲ್ಯ 98 ರನ್‌ ಜೊತೆಯಾಟದಲ್ಲಿ ಭಾಗಿಯಾದರು. ಈ ಜೋಡಿಯು ಸುಮಾರು 25 ಓವರ್‌ ಬ್ಯಾಟ್‌ ಮಾಡಿದ್ದಲ್ಲದೇ, ಒಂದೆರಡು ಗಂಟೆ ಕ್ರೀಸ್‌ನಲ್ಲಿ ನೆಲೆಯೂರಿತು. ತಂಡದ ಮೊತ್ತ 262 ರನ್‌ ಆಗಿದ್ದಾಗ ಹಾರ್ದಿಕ್‌ (40 ರನ್‌, 78 ಎಸೆತ, 4 ಬೌಂಡರಿ) ಔಟಾದರು. ಅಷ್ಟೊತ್ತಿಗೆ ಕರ್ನಾಟಕ 114 ರನ್‌ ಮುನ್ನಡೆ ಪಡೆದಿತ್ತು.

ಸ್ಮರಣ್‌ ತಂಡದ ಮುನ್ನಡೆಯನ್ನು 148 ರನ್‌ಗೆ ಹೆಚ್ಚಿಸಿದರು. ಕರ್ನಾಟಕ 8 ವಿಕೆಟ್‌ಗೆ 294 ರನ್‌ ಗಳಿಸಿದ್ದಾಗ, ಹರ್ಯಾಣ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡಿತು. ಸ್ಮರಣ್‌ 217 ಎಸೆತದಲ್ಲಿ 14 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 133 ರನ್‌ ಗಳಿಸಿ ಔಟಾಗದೆ ಉಳಿದರು. ಈ ಋತುವಿನಲ್ಲಿ 7 ಪಂದ್ಯಗಳನ್ನು ಆಡಿದ 21 ವರ್ಷದ ಎಡಗೈ ಬ್ಯಾಟರ್‌ 2 ಶತಕಗಳೊಂದಿಗೆ 516 ರನ್‌ ಗಳಿಸಿ, ರಾಜ್ಯದ ಪರ ಅತಿಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿದರು.

ಅಭಿಷೇಕ್ ಸೆಂಚುರಿಗೆ ಬೆಚ್ಚಿದ ಇಂಗ್ಲೆಂಡ್, 248 ಟಾರ್ಗೆಟ್ ಕೊಟ್ಟು ಹಲವು ದಾಖಲೆ ಬರೆದ ಭಾರತ

ಸ್ಕೋರ್‌: ಕರ್ನಾಟಕ 304 ಹಾಗೂ 294/8 (ಸ್ಮರಣ್‌ 133*, ರಾಹುಲ್ 43, ಪಡಿಕ್ಕಲ್‌ 43, ಅನ್ಶುಲ್‌ 3/40), ಹರ್ಯಾಣ 450/10