Ranji Trophy: ಕರ್ನಾಟಕ vs ಗೋವಾ ಪಂದ್ಯ ಡ್ರಾನಲ್ಲಿ ಅಂತ್ಯ

ಮೊದಲ ಇನ್ನಿಂಗ್ಸ್‌ನಲ್ಲಿ 177 ರನ್‌ಗಳ ದೊಡ್ಡ ಮುನ್ನಡೆ ಸಾಧಿಸಿದ್ದ ಹೊರತಾಗಿಯೂ ಕರ್ನಾಟಕಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಮೊನಚು ಕಳೆದುಕೊಂಡಂತಿದ್ದ ರಾಜ್ಯದ ಬೌಲರ್‌ಗಳು ಯಾವುದೇ ಮ್ಯಾಜಿಕ್‌ ಮಾಡಲಿಲ್ಲ.

Ranji Trophy 2024 Karnataka vs Goa match ends in draw kvn

ಮೈಸೂರು(ಜ.23): ದಶಕದ ಬಳಿಕ ರಣಜಿ ಟ್ರೋಫಿ ಗೆಲ್ಲುವ ನಿರೀಕ್ಷೆಯೊಂದಿಗೆ ಈ ಬಾರಿ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಕರ್ನಾಟಕ, ಸತತ 2ನೇ ಪಂದ್ಯದಲ್ಲೂ ಗೆಲುವಿನಿಂದ ವಂಚಿತವಾಗಿದೆ. ಕಳೆದ ಪಂದ್ಯದಲ್ಲಿ ಗುಜರಾತ್‌ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದ ಮಯಾಂಕ್‌ ಅಗರ್‌ವಾಗಲ್‌ ನಾಯಕತ್ವದ ರಾಜ್ಯ ತಂಡ, ಸೋಮವಾರ ಗೋವಾ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತು. 2ನೇ ಇನ್ನಿಂಗ್ಸ್‌ನಲ್ಲಿ ಗೋವಾ 6 ವಿಕೆಟ್‌ ಕಳೆದುಕೊಂಡು 282 ರನ್‌ ಗಳಿಸಿದ್ದಾಗ ಪಂದ್ಯ ಡ್ರಾ ಮಾಡಲಾಯಿತು.

ಮೊದಲ ಇನ್ನಿಂಗ್ಸ್‌ನಲ್ಲಿ 177 ರನ್‌ಗಳ ದೊಡ್ಡ ಮುನ್ನಡೆ ಸಾಧಿಸಿದ್ದ ಹೊರತಾಗಿಯೂ ಕರ್ನಾಟಕಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಮೊನಚು ಕಳೆದುಕೊಂಡಂತಿದ್ದ ರಾಜ್ಯದ ಬೌಲರ್‌ಗಳು ಯಾವುದೇ ಮ್ಯಾಜಿಕ್‌ ಮಾಡಲಿಲ್ಲ. 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 93 ರನ್‌ ಗಳಿಸಿದ್ದ ಗೋವಾಗೆ ಸೋಮವಾರ ಸುಯಾಶ್‌ ಪ್ರಭುದೇಸಾಯಿ ಆಪತ್ಬಾಂಧವರಾಗಿ ಮೂಡಿಬಂದರು. ಕನ್ನಡಿಗ ಸಿದ್ಧಾರ್ಥ್‌ ಕೆ.ವಿ.(57) ಅವರಿಗೆ ಕೊನೆ ದಿನ ಒಂದೂ ರನ್‌ ಗಳಿಸಲು ರಾಜ್ಯದ ವೇಗಿ ವೈಶಾಕ್‌ ಬಿಡಲಿಲ್ಲ. ಆದರೆ ಕ್ರೀಸ್‌ನಲ್ಲಿ ನೆಲೆಯೂರಿದ ಸುಯಾಶ್‌ 4ನೇ ವಿಕೆಟ್‌ಗೆ ದೀಪ್‌ರಾಜ್‌ ಗೋಂಕರ್‌(36) ಜೊತೆ 97 ರನ್‌ ಸೇರಿಸಿದರು. ಕೊನೆವರೆಗೂ ರಾಜ್ಯದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಸುಯಾಶ್‌ 289 ಎಸೆತಗಳಲ್ಲಿ 143 ರನ್‌ ಸಿಡಿಸಿ ಔಟಾಗದೆ ಉಳಿದರು. ವೈಶಾಕ್‌, ರೋಹಿತ್‌ ಕುಮಾರ್ ತಲಾ 2 ವಿಕೆಟ್‌ ಕಿತ್ತರು.

ಸೂಪರ್ ಓವರ್ ಡ್ರಾಮಾದ ಬಗ್ಗೆ ತುಟಿಬಿಚ್ಚಿದ ಎಬಿಡಿ: ರೋಹಿತ್ ಶರ್ಮಾ ವಿರುದ್ದ ತಿರುಗಿಬಿದ್ದ ಆರ್‌ಸಿಬಿ ಮಾಜಿ ಕ್ರಿಕೆಟಿಗ..!

ಇದಕ್ಕೂ ಮೊದಲು ಗೋವಾ ಮೊದಲ ಇನ್ನಿಂಗ್ಸ್‌ನಲ್ಲಿ 321ಕ್ಕೆ ಆಲೌಟಾಗಿದ್ದರೆ, ಕರ್ನಾಟಕ ತಂಡ ಮಯಾಂಕ್‌, ದೇವದತ್‌ ಪಡಿಕ್ಕಲ್‌, ನಿಕಿನ್‌ ಜೋಸ್‌ ಶತಕದ ನೆರವಿನಿಂದ 9 ವಿಕೆಟ್‌ಗೆ 498 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು.

ಸ್ಕೋರ್‌:

ಗೋವಾ 321/10 ಮತ್ತು 282/6 (ಸುಯಾಶ್‌ 143, ಸಿದ್ಧಾರ್ಥ್‌ 57, ವೈಶಾಕ್‌ 2-35, ರೋಹಿತ್‌ 2-67), 
ಕರ್ನಾಟಕ 498/9 ಡಿಕ್ಲೇರ್‌.

ರಾಜ್ಯಕ್ಕೆ ತ್ರಿಪುರಾ ಮುಂದಿನ ಸವಾಲು

ಕರ್ನಾಟಕ ಟೂರ್ನಿಯ 4ನೇ ಪಂದ್ಯದಲ್ಲಿ ತ್ರಿಪುರಾ ವಿರುದ್ಧ ಜ.26ರಿಂದ ಆಡಲಿದೆ. ಪಂದ್ಯಕ್ಕೆ ಅಗರ್ತಲಾ ಆತಿಥ್ಯ ವಹಿಸಲಿದೆ. ರಾಜ್ಯ ತಂಡ 3 ಪಂದ್ಯಗಳನ್ನಾಡಿದ್ದು, ತಲಾ 1 ಜಯ, ಸೋಲು, ಡ್ರಾದೊಂದಿಗೆ 9 ಅಂಕ ಸಂಪಾದಿಸಿ ಎಲೈಟ್‌ ‘ಸಿ’ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ. ತ್ರಿಪುರಾ(08 ಅಂಕ) 3 ಪಂದ್ಯದಲ್ಲಿ 1 ಜಯ, 2 ಡ್ರಾದೊಂದಿಗೆ 4ನೇ ಸ್ಥಾನದಲ್ಲಿದೆ.

ಮೂರನೇ ಮದುವೆಯಾದ ಶೋಯೆಬ್ ಮಲಿಕ್‌ರ ಭವಿಷ್ಯಕ್ಕೆ ಸಾನಿಯಾ ಮಿರ್ಜಾ ಶುಭ ಹಾರೈಕೆ..!

ಹ್ಯಾಟ್ರಿಕ್‌ ಜಯ ಕಂಡ ಮುಂಬೈ, ಬರೋಡಾ

3ನೇ ಪಂದ್ಯದಲ್ಲಿ ಕೇರಳವನ್ನು ಮಣಿಸಿದ ಮುಂಬೈ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿತು. ಬರೋಡಾ ಕೂಡಾ ಆಡಿರುವ 3 ಪಂದ್ಯಗಳಲ್ಲೂ ಜಯಗಳಿಸಿದೆ.
 

Latest Videos
Follow Us:
Download App:
  • android
  • ios