* ಐಪಿಎಲ್‌ ಭಾಗ 2 ಟೂರ್ನಿಯಲ್ಲಿ ಜೋಸ್ ಬಟ್ಲರ್ ಭಾಗವಹಿಸುವುದು ಅನುಮಾನ* ಜೋಸ್ ಬಟ್ಲರ್‌ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಕ್ರಿಕೆಟಿಗ* ಐಪಿಎಲ್‌ಗಿಂತ ದೇಶ ಮೊದಲು ಎಂದು ಇಂಗ್ಲೆಂಡ್ ಸ್ಪೋಟಕ ಬ್ಯಾಟ್ಸ್‌ಮನ್

ಲಂಡನ್‌(ಜೂ.22): ಇಂಗ್ಲೆಂಡ್ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ ಭಾಗವಹಿಸುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ.

ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಅವಧಿಯಲ್ಲಿ ಇನ್ನುಳಿದ ಐಪಿಎಲ್ ಪಂದ್ಯಗಳು ಯುಎಇನಲ್ಲಿ ನಡೆಯಲಿದೆ. ಇದೇ ಅವಧಿಯಲ್ಲಿ ಇಂಗ್ಲೆಂಡ್ ತಂಡವು ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ದ ಸೀಮಿತ ಓವರ್‌ಗಳ ಸರಣಿಯನ್ನಾಡಲಿದೆ. ಸಾಮಾನ್ಯವಾಗಿ ಐಪಿಎಲ್ ಟೂರ್ನಿಯು ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳ ಜತೆ ಘರ್ಷಣೆಯಾಗದಂತೆ ಆಯೋಜಿಸಲಾಗುತ್ತದೆ. ಹೀಗಾಗಿ ಐಪಿಎಲ್‌ನಲ್ಲಿ ಭಾಗವಹಿಸುವುದು ಸುಲಭವಾಗುತ್ತದೆ. ಒಂದು ವೇಳೆ ಐಪಿಎಲ್‌ ಜತೆ ಇಂಗ್ಲೆಂಡ್ ಅಂತಾರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿ ಜತೆ ಘರ್ಷಣೆಯಾದರೆ, ನನ್ನ ಮೊದಲ ಆಧ್ಯತೆ ಇಂಗ್ಲೆಂಡ್‌ ತಂಡದ ಪರ ಆಡುವುದಾಗಿದೆ ಎಂದು ರಾಜಸ್ಥಾನ ರಾಯಲ್ಸ್‌ನ ಸ್ಟಾರ್ ಕ್ರಿಕೆಟಿಗ ಬಟ್ಲರ್ 'ದ ಟೆಲಿಗ್ರಾಫ್‌'ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಂಗ್ಲೆಂಡ್‌ನಲ್ಲಿ ಮಹತ್ವದ ಐಸಿಸಿ ಕ್ರಿಕೆಟ್‌ ಪಂದ್ಯಗಳನ್ನು ನಡೆಸಬಾರದು: ಕೆವಿನ್ ಪೀಟರ್‌ಸನ್

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದವು. ಇದಾದ ಬಳಿಕ ಬಯೋ ಬಬಲ್‌ನೊಳಗೆ ಕೋವಿಡ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. 

ಜೋಸ್ ಬಟ್ಲರ್ ಇತ್ತೀಚೆಗಷ್ಟೇ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ವಿಶ್ರಾಂತಿ ನೀಡಲಾಗಿತ್ತು. ಆಗಸ್ಟ್‌ ಮೊದಲ ವಾರದಿಂದ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಗೆ ಬಟ್ಲರ್ ಇಂಗ್ಲೆಂಡ್ ಕ್ರಿಕೆಟ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.