ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ರೇಸ್‌ನಲ್ಲಿ ಭಾರತ ಸದ್ಯ 5ನೇ ಸ್ಥಾನದಲ್ಲಿದ್ದರೂ, ಫೈನಲ್‌ಗೆ ಅರ್ಹತೆ ಪಡೆಯುವ ಸಾಮರ್ಥ್ಯ ಹೊಂದಿದೆ ಎಂದು ಮಾಜಿ ಕೋಚ್ ರಾಹುಲ್ ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಂತಹ ಕಠಿಣ ಸವಾಲುಗಳು ಮತ್ತು ಅನುಭವಿ ಆಟಗಾರರ ಅನುಪಸ್ಥಿತಿಯ ನಡುವೆಯೂ ಯುವ ತಂಡದ ಮೇಲೆ ಅವರು ಭರವಸೆ ಇಟ್ಟಿದ್ದಾರೆ.
ಡಬ್ಲಿನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ರೇಸ್‌ನಲ್ಲಿ ಭಾರತ ಸದ್ಯಕ್ಕೆ ಸ್ವಲ್ಪ ಹಿಂದೆ ಇರಬಹುದು. ಆದರೆ, ಟೀಂ ಇಂಡಿಯಾದಲ್ಲಿರುವ ಕ್ವಾಲಿಟಿ ಆಟಗಾರರನ್ನು ನೋಡಿದರೆ, ಅವರನ್ನು ಯಾವತ್ತೂ ಕಡೆಗಣಿಸೋಕೆ ಆಗಲ್ಲ ಅಂತ ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಸದ್ಯ WTC ಪಾಯಿಂಟ್ಸ್ ಟೇಬಲ್‌ನಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಮುಂದಿನ ವರ್ಷದ ಫೈನಲ್‌ಗೆ ಕ್ವಾಲಿಫೈ ಆಗುವುದು ದೊಡ್ಡ ಸವಾಲೇ ಸರಿ. ಫೈನಲ್ ಆಸೆ ಜೀವಂತವಾಗಿ ಇಟ್ಟುಕೊಳ್ಳಬೇಕೆಂದರೆ, ಉಳಿದಿರುವ ಬಹುತೇಕ ಮ್ಯಾಚ್‌ಗಳನ್ನು ಭಾರತ ಗೆಲ್ಲಲೇಬೇಕು.
ಕಿವೀಸ್ ಪ್ರವಾಸ ಭಾರತಕ್ಕೆ ದೊಡ್ಡ ಸವಾಲು:
ಆದರೂ ದ್ರಾವಿಡ್, ಭಾರತದ ಮೇಲೆ ಭರವಸೆ ಇಟ್ಟಿದ್ದಾರೆ. "ಅವರು ಫೈನಲ್‌ಗೆ ಕ್ವಾಲಿಫೈ ಆಗ್ತಾರೆ ಅಂತ ನಾನು ನಂಬಿದ್ದೇನೆ. ಒಂದು ವೇಳೆ ಭಾರತ WTC ಫೈನಲ್‌ಗೆ ಹೋದರೆ, ಅದು ದೊಡ್ಡ ಸಾಧನೆಯೇ ಆಗಲಿದೆ. ಸದ್ಯಕ್ಕೆ ಭಾರತ ಸ್ವಲ್ಪ ಹಿಂದುಳಿದಿದೆ, ನಿಜ. ಆದರೆ ಭಾರತೀಯ ತಂಡದಲ್ಲಿರುವ ಪ್ರತಿಭೆಗಳನ್ನು ನೋಡಿದರೆ, ಅವರನ್ನು ಯಾವತ್ತಿಗೂ ಕಡೆಗಣಿಸಲು ಸಾಧ್ಯವಿಲ್ಲ. ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಉತ್ತಮ ಆರಂಭ ಸಿಕ್ಕಿದೆ, ಇದು ಮೊದಲ ಹೆಜ್ಜೆ ಅಷ್ಟೇ. ನ್ಯೂಜಿಲೆಂಡ್‌ಗೆ ಹೋಗಿ ಆಡುವುದು ಯಾವಾಗಲೂ ಕಠಿಣ ಸವಾಲು. ತಮ್ಮ ನೆಲದಲ್ಲಿ ಅವರನ್ನು ಸೋಲಿಸುವುದು ತುಂಬಾ ಕಷ್ಟ. ನಮ್ಮ ಯುವ ಆಟಗಾರರಲ್ಲಿ ಹಲವರಿಗೆ ಅಲ್ಲಿನ ಪರಿಸ್ಥಿತಿಯಲ್ಲಿ ಆಡಿದ ಅನುಭವವಿಲ್ಲ, ಹಾಗಾಗಿ ಇದು ದೊಡ್ಡ ಚಾಲೆಂಜ್ ಆಗಲಿದೆ" ಅಂತ ದ್ರಾವಿಡ್ ವಿವರಿಸಿದ್ದಾರೆ.
ಸದ್ಯ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್‌ನಲ್ಲೂ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಮೇಲುಗೈ ಸಾಧಿಸಿದೆ. ಈ ಸರಣಿ ಗೆದ್ದರೆ ಭಾರತಕ್ಕೆ ಅಮೂಲ್ಯ ಪಾಯಿಂಟ್‌ಗಳು ಮತ್ತು ಆತ್ಮವಿಶ್ವಾಸ ಸಿಗುತ್ತದೆ. ಆದರೆ ಮುಂದಿನ ಹಾದಿ ಕಠಿಣವಾಗಿದೆ. ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿ, WTC ಫೈನಲ್ ರೇಸ್‌ನಲ್ಲಿ ಭಾರತದ ಮುಂದಿರುವ ದೊಡ್ಡ ಸವಾಲು.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಅವರಂತಹ ಆಟಗಾರರು ನಿವೃತ್ತರಾಗಿದ್ದರಿಂದ ತಂಡ ಕಳೆದುಕೊಂಡಿರುವ ಅನುಭವದ ಬಗ್ಗೆಯೂ ದ್ರಾವಿಡ್ ಮಾತನಾಡಿದ್ದಾರೆ. ಕಳೆದ ಬಾರಿ ಭಾರತ ನ್ಯೂಜಿಲೆಂಡ್‌ಗೆ ಹೋದಾಗ ಈ ಅನುಭವಿ ಆಟಗಾರರು ತಂಡದಲ್ಲಿದ್ದರು. ಆದರೆ ಈ ಬಾರಿ ಯುವ ತಂಡವೇ ಈ ಸವಾಲನ್ನು ಎದುರಿಸಬೇಕಾಗಿದೆ. "ಮುಂದಿನ ತಿಂಗಳುಗಳಲ್ಲಿ ಆಟಗಾರರು ಫಿಟ್ ಆಗಿರಬೇಕು ಮತ್ತು ಗಾಯಗಳಿಂದ ದೂರವಿರಬೇಕು. ಕಳೆದ ಬಾರಿ ಭಾರತ ಅಲ್ಲಿಗೆ ಹೋದಾಗ ತಂಡದಲ್ಲಿದ್ದ ವಿರಾಟ್, ರೋಹಿತ್, ರಹಾನೆ, ಪೂಜಾರ ಅವರ ಅನುಭವವನ್ನು ನಾವು ಈಗ ಮಿಸ್ ಮಾಡಿಕೊಳ್ಳುತ್ತಿದ್ದೇವೆ" ಅಂತ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ.
ನ್ಯೂಜಿಲೆಂಡ್ ಪ್ರವಾಸದ ನಂತರ, 2027ರ ಜನವರಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಲಿದೆ. ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಭಾರತಕ್ಕೆ ಮತ್ತೊಂದು ದೊಡ್ಡ ಪರೀಕ್ಷೆಯಾಗಲಿದೆ. ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಗುರಿಯೊಂದಿಗೆ ಆಸ್ಟ್ರೇಲಿಯಾ ತಂಡ ಈ ಬಾರಿ ಇನ್ನಷ್ಟು ಹುರುಪಿನಿಂದ ಬರಲಿದೆ ಅಂತ ದ್ರಾವಿಡ್ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಕೊಲಂಬೊ ಟೆಸ್ಟ್‌ನಲ್ಲಿ ಲಂಕಾ ಪ್ರತಿರೋಧ:
ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ದೇವದತ್ ಪಡಿಕ್ಕಲ್ ಹಾಗೂ ಧ್ರುವ್ ಜುರೆಲ್ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ 9 ವಿಕೆಟ್ ಕಳೆದುಕೊಂಡು 503 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಆರಂಭದಲ್ಲೇ ಒಂದಂಕಿ ಮೊತ್ತಕ್ಕೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿತ್ತು. ಆದೆಎ ಮಧ್ಯಮ ಕ್ರಮಾಂಕದಲ್ಲಿ ಪಸಿಂದು ಸೂರ್ಯಬಂಡಾರ(80) ಹಾಗೂ ಸೋನಲ್ ದಿನೂಷಾ ಅಜೇಯ 85 ರನ್‌ಗಳ ನೆರವಿನಿಂದ ಭಾರತದ ಬೌಲರ್‌ಗಳಿಗೆ ಲಂಕಾ ಪ್ರತಿರೋಧ ತೋರುತ್ತಿದೆ. ಮೂರನೇ ದಿನದಾಟದಂತ್ಯದ ವೇಳೆಗೆ ಶ್ರೀಲಂಕಾ 8 ವಿಕೆಟ್ ಕಳೆದುಕೊಂಡು 265 ರನ್ ಕಲೆಹಾಕಿದೆ. ಲಂಕಾ ಇನ್ನೂ ಫಾಲೋ ಆನ್‌ನಿಂದ ಪಾರಾಗಲು ಇನ್ನೂ 39 ರನ್‌ಗಳನ್ನು ಗಳಿಸಬೇಕಿದೆ. ಭಾರತ ತಂಡವು ಲಂಕಾ ಮೇಲೆ ಫಾಲೋ ಆನ್ ಹೇರಲು ಇನ್ನೆರಡು ವಿಕೆಟ್ ಬೇಕಿದೆ.


