ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2027ರ ಏಕದಿನ ವಿಶ್ವಕಪ್‌ಗೆ ತಮ್ಮ ಕನಸಿನ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಮೊಹಮ್ಮದ್ ಶಮಿ ಮತ್ತು ರಿಷಭ್ ಪಂತ್‌ರಂತಹ ಪ್ರಮುಖ ಆಟಗಾರರನ್ನು ಕೈಬಿಟ್ಟಿದ್ದು, ಅಚ್ಚರಿಯ ರೀತಿಯಲ್ಲಿ ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್‌ಗೆ ಸ್ಥಾನ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು: ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಆದರೆ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿರುವ ಮೊಹಮ್ಮದ್ ಶಮಿ, ರಿಷಭ್ ಪಂತ್ ಅವರಂತಹ ಆಟಗಾರರನ್ನು ಕೈಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಇನ್ನು ಇದೇ ವೇಳೆ ಅಶ್ವಿನ್‌, ಆರ್‌ಸಿಬಿ ತಂಡದ ಓರ್ವ ಅನುಭವಿ ಆಟಗಾರನನ್ನು ಅಚ್ಚರಿ ರೀತಿಯಲ್ಲಿ ಮಣೆ ಹಾಕಿದ್ದಾರೆ.

ಇನ್ನು ರವಿಚಂದ್ರನ್ ಅಶ್ವಿನ್ ಪ್ರಕಾರ, 2027ರಲ್ಲಿ ದಕ್ಷಿಣ ಆಫ್ರಿಕಾ, ನಮೀಬಿಯಾ ಹಾಗೂ ಜಿಂಬಾಬ್ವೆಯಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಶಿವಂ ದುಬೆ, ಗುರ್ನೂರ್ ಬ್ರಾರ್, ಪ್ರಿನ್ಸ್ ಯಾದವ್ ಹಾಗೂ ರವಿ ಬಿಷ್ಣೋಯ್ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ವೇಳೆ ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಅರ್ಶದೀಪ್ ಸಿಂಗ್ ಹಾಗೂ ಪ್ರಸಿದ್ದ್ ಕೃಷ್ಣ ಭಾರತ ತಂಡದಲ್ಲಿ ಸ್ಥಾನ ಪಡೆದರೂ ಪಡೆಯಬಹುದು. ಆದರೆ ಈ ಎಲ್ಲಾ ಆಟಗಾರರು ಖಚಿತವಾಗಿ ಸ್ಥಾನ ಪಡೆಯುತ್ತಾರೆ ಎಂದು ಅಶ್ವಿನ್ ಹೇಳಿಲ್ಲ.

ಕ್ರಿಕೆಟ್‌ ವೆಬ್‌ಸೈಟ್ Cricinfo ಜತೆಗಿನ ಮಾತುಕತೆ ವೇಳೆಯಲ್ಲಿ ರವಿಚಂದ್ರನ್ ಅಶ್ವಿನ್, ಶುಭ್‌ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಖಂಡಿತವಾಗಿಯೂ 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಇದೇ ವೇಳೆ ಬ್ಯಾಕ್‌ಅಪ್ ವಿಕೆಟ್ ಕೀಪರ್ ರೂಪದಲ್ಲಿ ಇಶಾನ್ ಕಿಶನ್ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಅಶ್ವಿನ್ ಭವಿಷ್ಯ ನುಡಿದಿದ್ದಾರೆ.

ಭುವನೇಶ್ವರ್ ಕುಮಾರ್‌ಗೆ ಅಶ್ವಿನ್ ಅಚ್ಚರಿ ಆಯ್ಕೆ:

ಇನ್ನು ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಅಚ್ಚರಿಯ ರೀತಿಯಲ್ಲಿ ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್‌ಗೆ ಮಣೆ ಹಾಕಿದ್ದಾರೆ. ಭುವನೇಶ್ವರ್ ಕುಮಾರ್ 2022ರ ಜನವರಿ ಬಳಿಕ ಭಾರತ ಪರ ಯಾವುದೇ ಏಕದಿನ ಪಂದ್ಯವನ್ನು ಆಡಿಲ್ಲ. ಹೀಗಿದ್ದೂ ಅಶ್ವಿನ್, ಏಕದಿನ ವಿಶ್ವಕಪ್‌ಗೆ ಅನುಭವಿ ವೇಗಿಯನ್ನು ಆಯ್ಕೆ ಮಾಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭುವನೇಶ್ವರ್ ಕುಮಾರ್ ಅನುಭವವನ್ನು ಬಳಸಿಕೊಳ್ಳಬೇಕು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

'ಭುವನೇಶ್ವರ್ ಕುಮಾರ್‌ಗೆ ಅವಕಾಶ ನೀಡಬೇಕು. ನಾನು ಈಗಾಗಲೇ ಭುವಿ ಜತೆ ಮಾತನಾಡಿದ್ದಾರೆ. ಸಾಧ್ಯವಾದಷ್ಟು ಅವಕಾಶ ಸಿಕ್ಕಾಗಲೆಲ್ಲಾ ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ಹೆಚ್ಚು ಹೆಚ್ಚು ಪ್ರಥಮ ದರ್ಜೆ ಪಂದ್ಯವನ್ನಾಡುತ್ತಿರಲು ಅವರಿಗೆ ಹೇಳಿದ್ದೇನೆ. ದಕ್ಷಿಣ ಆಫ್ರಿಕಾದಲ್ಲಿ ಭುವಿ ಅವಶ್ಯಕತೆ ನಮಗಿದೆ' ಎಂದು ಅಶ್ವಿನ್ ಹೇಳಿದ್ದಾರೆ.

20213ರ ಜನವರಿಯಲ್ಲಿ ಪಾಕಿಸ್ತಾನ ಎದುರು ಭಾರತ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿದ ಭುವನೇಶ್ವರ್ ಕುಮಾರ್, ಇದುವರೆಗೂ ಟೀಂ ಇಂಡಿಯಾ ಪರ 121 ಏಕದಿನ ಪಂದ್ಯಗಳನ್ನಾಡಿ 141 ವಿಕೆಟ್ ಕಬಳಿಸಿದ್ದಾರೆ. ಆದರೆ 2022 ಜನವರಿ 21ರ ಬಳಿಕ ಟೀಂ ಇಂಡಿಯಾ ಪರ ಭುವಿ ಯಾವುದೇ ಏಕದಿನ ಪಂದ್ಯವನ್ನಾಡಿಲ್ಲ. 36 ವರ್ಷದ ಭುವನೇಶ್ವರ್ ಕುಮಾರ್ 2026ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ 16 ಪಂದ್ಯಗಳನ್ನಾಡಿ 28 ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿ ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಶ್ವಿನ್ ಕನಸಿನ ವಿಶ್ವಕಪ್ ತಂಡದಲ್ಲಿ ಶಮಿ, ಪಂತ್‌ಗಿಲ್ಲ ಸ್ಥಾನ:

ಇನ್ನು ರವಿಚಂದ್ರನ್ ಅಶ್ವಿನ್ ಆಯ್ಕೆ ಮಾಡಿದ 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಅನುಭವಿ ವೇಗಿ ಮೊಹಮ್ಮದ್ ಶಮಿ ಹಾಗೂ ರಿಷಭ್ ಪಂತ್ ಅವರನ್ನು ಕೈಬಿಟ್ಟಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ ಶಮಿ ಐಸಿಸಿ ಟೂರ್ನಿಯಲ್ಲಿ ಭಾರತ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಅದರಲ್ಲೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಲು ಶಮಿ ಪ್ರಮುಖ ಪಾತ್ರ ವಹಿಸಿದ್ದರು. ಇದಷ್ಟೇ ಅಲ್ಲದೇ ಕಳೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಇನ್ನು ರಿಷಭ್ ಪಂತ್ ಕೂಡಾ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಿದ್ದೂ ಅಶ್ವಿನ್, ಪಂತ್‌ಗೆ ಬ್ಯಾಕ್‌ಅಪ್ ವಿಕೆಟ್ ಕೀಪರ್ ರೂಪದಲ್ಲೂ ಸ್ಥಾನ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.