2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆ ಆತಿಥ್ಯ ವಹಿಸಲಿವೆ. ಈ ಟೂರ್ನಿಯು 12 ಸ್ಥಳಗಳಲ್ಲಿ ಹೊಸ ಮೂರು ಹಂತದ ಮಾದರಿಯಲ್ಲಿ ನಡೆಯಲಿದ್ದು, ಇದು ಕೆಲವು ವಿವಾದಗಳಿಗೆ ಕಾರಣವಾಗಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ಆಫ್ರಿಕನ್ ಸಂಸ್ಕೃತಿಯನ್ನು ಬಿಂಬಿಸುವ ಅಧಿಕೃತ ಲೋಗೋವನ್ನು ಅನಾವರಣಗೊಳಿಸಲಾಗಿದೆ.
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮುಂಬರುವ 2027ರ ಏಕದಿನ ವಿಶ್ವಕಪ್ ಟೂರ್ನಿಯ ಕುರಿತಾದ ಮಹತ್ವದ ಅಪ್‌ಡೇಟ್ಸ್ ನೀಡಿದೆ. 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ, ನಮೀಬಿಯಾ ಹಾಗೂ ಜಿಂಬಾಬ್ವೆ ಆತಿಥ್ಯ ವಹಿಸಿವೆ. ಇದೀಗ 24 ವರ್ಷಗಳ ಬಳಿಕ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಿರುವ ಆಫ್ರಿಕಾ ಖಂಡದ ಮೂರು ದೇಶಗಳ 12 ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ವಿಶ್ವಕಪ್ ಪಂದ್ಯಗಳು ಆಯೋಜನೆಗೊಳ್ಳಲಿವೆ ಎಂದು ಐಸಿಸಿ ಖಚಿತಪಡಿಸಿದೆ.
2027ರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಈ ಟೂರ್ನಿ ನಡೆಯಲಿದೆ. ಒಟ್ಟು 14 ದೇಶಗಳು ಭಾಗವಹಿಸುವ ಈ ಟೂರ್ನಿಯಲ್ಲಿ 12 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ವಿಶ್ವದ ಏಳು ನೈಸರ್ಗಿಕ ಅದ್ಭುತಗಳಲ್ಲಿ ಒಂದಾದ ಜಿಂಬಾಬ್ವೆಯ ವಿಕ್ಟೋರಿಯಾ ಫಾಲ್ಸ್ ಬಳಿ ಹೊಸದಾಗಿ ನಿರ್ಮಿಸಿರುವ 'ಮೋಸಿ-ಓ-ತುನ್ಯಾ ಅಂತರಾಷ್ಟ್ರೀಯ ಸ್ಟೇಡಿಯಂ' ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ.
ದಕ್ಷಿಣ ಆಫ್ರಿಕಾದ 8 ಮೈದಾನಗಳು ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ
ವಾಂಡರರ್ಸ್ ಸ್ಟೇಡಿಯಂ (ಜೋಹಾನ್ಸ್‌ಬರ್ಗ್), ಸೂಪರ್‌ಸ್ಪೋರ್ಟ್ ಪಾರ್ಕ್ (ಸೆಂಚೂರಿಯನ್), ನ್ಯೂಲ್ಯಾಂಡ್ಸ್ (ಕೇಪ್ ಟೌನ್), ಕಿಂಗ್ಸ್‌ಮೀಡ್ (ಡರ್ಬನ್), ಸೇಂಟ್ ಜಾರ್ಜ್ ಪಾರ್ಕ್ (ಗೆಬೆಹಾ), ಮಂಗಾಂಗ್ ಓವಲ್ (ಬ್ಲೂಮ್‌ಫಾಂಟೈನ್), ಬೋಲಾಂಡ್ ಪಾರ್ಕ್ (ಪಾರ್ಲ್), ಮತ್ತು ಬಫಲೋ ಪಾರ್ಕ್ (ಪೂರ್ವ ಲಂಡನ್ / ಕೂಗೋಂಬೊ).
ಜಿಂಬಾಬ್ವೆಯ 3 ಮೈದಾನಗಳು ವಿಶ್ವಕಪ್‌ಗೆ ವೇದಿಕೆ
ಮೋಸಿ-ಓ-ತುನ್ಯಾ ಅಂತರಾಷ್ಟ್ರೀಯ ಸ್ಟೇಡಿಯಂ (ವಿಕ್ಟೋರಿಯಾ ಫಾಲ್ಸ್), ಹರಾರೆ ಸ್ಪೋರ್ಟ್ಸ್ ಕ್ಲಬ್ (ಹರಾರೆ), ಮತ್ತು ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ (ಬುಲವಾಯೊ) ಜಿಂಬಾಬ್ವೆಯ ಸ್ಥಳಗಳಾಗಿವೆ. ನಮೀಬಿಯಾದಲ್ಲಿ ಕೇವಲ ಒಂದು ಮೈದಾನದಲ್ಲಿ ಪಂದ್ಯ ನಡೆಯಲಿದೆ. ವಿಂಡ್‌ಹೋಕ್‌ನಲ್ಲಿರುವ ನಮೀಬಿಯಾ ಕ್ರಿಕೆಟ್ ಗ್ರೌಂಡ್ ವಿಶ್ವಕಪ್‌ಗೆ ವೇದಿಕೆಯಾಗಲಿದೆ.
ಏಕದಿನ ವಿಶ್ವಕಪ್ ಲೋಗೋ ಅನಾವರಣ:
ಜೋಹಾನ್ಸ್‌ಬರ್ಗ್‌ನ ಇನಾಂಡಾ ಪೋಲೋ ಕ್ಲಬ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿಶ್ವಕಪ್ ಲೋಗೋವನ್ನು ಅನಾವರಣಗೊಳಿಸಲಾಯಿತು. ದಕ್ಷಿಣ ಆಫ್ರಿಕಾದ ಮಾಜಿ ನಾಯಕರಾದ ಗ್ರೇಮ್ ಸ್ಮಿತ್, ಹಾಶೀಮ್ ಆಮ್ಲಾ, ತೆಂಬಾ ಬವುಮಾ, ಕಗಿಸೊ ರಬಾಡ ಮತ್ತು ಜಿಂಬಾಬ್ವೆ ಆಟಗಾರ ಹ್ಯಾಮಿಲ್ಟನ್ ಮಸಕದ್ಜಾ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. "ನಾವಿರುವುದರಿಂದ ನಾನು" ಎಂಬ ಅರ್ಥದ 'ಉಬುಂಟು' ಎಂಬ ಆಫ್ರಿಕನ್ ತತ್ವದ ಆಧಾರದ ಮೇಲೆ "ಮೇಕ್ ದಿ ಸರ್ಕಲ್ ಬಿಗ್ಗರ್" (Make The Circle Bigger) ಎಂಬ ಟ್ಯಾಗ್‌ಲೈನ್ ಸಿದ್ಧಪಡಿಸಲಾಗಿದೆ.
ಆಫ್ರಿಕಾದ ಸಾಂಪ್ರದಾಯಿಕ ನೇಯ್ಗೆ ಬುಟ್ಟಿಗಳ ಶೈಲಿಯಲ್ಲಿ ಲೋಗೋವನ್ನು ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ 'ಜಿಂಬಾಬ್ವೆ ಚಿಲ್ಲಿ', 'ನಮೀಬ್ ಡ್ಯೂನ್', 'ಹರಾರೆ ಡಾನ್' ಮತ್ತು 'ಟು ಓಶಿಯನ್ಸ್' ಎಂಬ ಸ್ಥಳೀಯ ಬಣ್ಣಗಳನ್ನು ಬಳಸಲಾಗಿದೆ. ಆಫ್ರಿಕಾ ಖಂಡದ ಸಾಂಸ್ಕೃತಿಕ ಪರಂಪರೆ ಮತ್ತು ಕ್ರೀಡಾ ಪ್ರೀತಿಯನ್ನು ಒಗ್ಗೂಡಿಸುವ ಅದ್ಭುತ ಟೂರ್ನಿ ಇದಾಗಲಿದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಹೊಸ ಮಾದರಿಯಲ್ಲಿ ಏಕದಿನ ವಿಶ್ವಕಪ್ ಟೂರ್ನಿ:
14 ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ ಒಟ್ಟು 57 ಪಂದ್ಯಗಳು ನಡೆಯಲಿವೆ. ಆದರೆ, ಐಸಿಸಿ ಈ ಟೂರ್ನಿಗಾಗಿ ತಂದಿರುವ ಮೂರು ಹಂತದ ಹೊಸ ಮಾದರಿಯು ಈಗಾಗಲೇ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸೂಪರ್ ಸೀರೀಸ್‌ನಲ್ಲಿ ಅರ್ಹತೆ ಪಡೆಯುವ ಕಡಿಮೆ ಶ್ರೇಯಾಂಕದ 3 ತಂಡಗಳು ಸೆಣಸಾಡಲಿವೆ. ಗ್ರೂಪ್ ಹಂತದಲ್ಲಿ ತಲಾ 6 ತಂಡಗಳ 2 ಗುಂಪುಗಳಾಗಿ 30 ಪಂದ್ಯಗಳು ನಡೆಯಲಿವೆ. ನಂತರ, ಅತ್ಯುತ್ತಮ 7 ತಂಡಗಳು ಸೂಪರ್ ಸೆವೆನ್ ರೌಂಡ್‌ನಲ್ಲಿ ಸೆಣಸಾಡಲಿದ್ದು, ಇದರಲ್ಲಿ 21 ಪಂದ್ಯಗಳು ನಡೆಯಲಿವೆ. ಸೂಪರ್ 7 ಹಂತದಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿವೆ.
ಈ ಹೊಸ ಮಾದರಿಯು ಬೆಳೆಯುತ್ತಿರುವ ಅಸೋಸಿಯೇಟ್ ದೇಶಗಳಿಗೆ ಮತ್ತಷ್ಟು ಅಡೆತಡೆಗಳನ್ನು ಸೃಷ್ಟಿಸುತ್ತದೆ ಎಂದು ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್, ಸ್ಕಾಟ್ಲೆಂಡ್ ನಾಯಕ ರಿಚಿ ಬೆರಿಂಗ್ಟನ್ ಮತ್ತು ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಆರೋಪಿಸಿದ್ದಾರೆ. ಇನ್ನು, ಫೈನಲ್ ತಲುಪುವ ತಂಡವು 15 ಪಂದ್ಯಗಳನ್ನು ಆಡಬೇಕಾಗುವುದರಿಂದ, ತಂಡದ ಆಟಗಾರರ ಸಂಖ್ಯೆಯನ್ನು 17ಕ್ಕೆ ಹೆಚ್ಚಿಸಬೇಕೆಂದು ಆಸ್ಟ್ರೇಲಿಯಾದ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಒತ್ತಾಯಿಸಿದ್ದಾರೆ.


