ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಮೂರನೇ ಸೀಸನ್‌ನಿಂದ ಪಾಕಿಸ್ತಾನ ತಂಡ ಅಧಿಕೃತವಾಗಿ ಹಿಂದೆ ಸರಿದಿದೆ. ಭಾರತೀಯ ಆಟಗಾರರು ಲಿಖಿತ ಕ್ಷಮೆ ಕೇಳಬೇಕೆಂಬ ಪಿಸಿಬಿಯ ವಿಚಿತ್ರ ಷರತ್ತನ್ನು ಆಯೋಜಕರು ತಿರಸ್ಕರಿಸಿದ್ದೇ ಇದಕ್ಕೆ ಪ್ರಮುಖ ಕಾರಣ. ಇದರಿಂದಾಗಿ ಅಕ್ಟೋಬರ್ 10ರಂದು ನಡೆಯಬೇಕಿದ್ದ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯ ರದ್ದಾಗಿದೆ.

ದುಬೈ: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಮೂರನೇ ಸೀಸನ್‌ನಿಂದ ಪಾಕಿಸ್ತಾನ ಚಾಂಪಿಯನ್ಸ್ ತಂಡ ಅಧಿಕೃತವಾಗಿ ಹಿಂದೆ ಸರಿದಿದೆ. ಟೂರ್ನಿಯಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿಧಿಸಿದ್ದ ಕಠಿಣ ಷರತ್ತುಗಳನ್ನು ಆಯೋಜಕರು ತಿರಸ್ಕರಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಭಾರತ ತಂಡ ನಿರಾಕರಿಸಿತ್ತು. ಇದನ್ನೇ ಈಗ ಪಟ್ಟು ಹಿಡಿದ ಪಾಕ್, ಭಾರತೀಯ ಆಟಗಾರರಿಂದ ವಿಚಿತ್ರ ಬೇಡಿಕೆಯಿಟ್ಟಿತ್ತು.

ಪಾಕ್ ಬೇಡಿಕೆಗೆ ಸೊಪ್ಪು ಹಾಕದ ಆಯೋಜಕರು

ಹೌದು, ಕಳೆದ ಸೀಸನ್ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಗ್ರೂಪ್ ಹಂತ ಹಾಗೂ ಸೆಮಿಫೈನಲ್ ಪಂದ್ಯಗಳನ್ನು ಭಾರತ ಬಹಿಷ್ಕರಿಸಿದ್ದರಿಂದ, ಪಾಕಿಸ್ತಾನ ವಾಕ್ ಓವರ್ ಪಡೆದು ಫೈನಲ್ ತಲುಪಿತ್ತು. ಅಂದು ಪಾಕ್ ಆಟಗಾರರೊಂದಿಗೆ ಕೈಕುಲುಕಲು ಕೂಡ ಭಾರತೀಯ ಆಟಗಾರರು ಸಿದ್ಧರಿರಲಿಲ್ಲ. ಕಳೆದ ವರ್ಷದ ಈ ಘಟನೆಗಳ ಬಗ್ಗೆ ಭಾರತದ ಆಟಗಾರರು ಲಿಖಿತವಾಗಿ ಕ್ಷಮೆ ಕೇಳಬೇಕು ಮತ್ತು ಈ ಬಾರಿ ಕೈಕುಲುಕಲು ಒಪ್ಪಬೇಕು ಎಂಬುದು ಪಿಸಿಬಿಯ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಈ ಷರತ್ತುಗಳನ್ನು ಒಪ್ಪಿಕೊಳ್ಳಲು ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಆಡಳಿತ ಮಂಡಳಿ ನಿರಾಕರಿಸಿದೆ.

ಭಾರತ-ಪಾಕಿಸ್ತಾನ ಮ್ಯಾಚ್ ರದ್ದು..!

ಆಯೋಜಕರು ಕೇವಲ ವಾಣಿಜ್ಯ ಷರತ್ತುಗಳನ್ನು ಮಾತ್ರ ಒಪ್ಪಿಕೊಂಡಿದ್ದಾರೆ. ಕ್ಷಮೆ ಕೇಳಬೇಕೆಂಬ ಪಿಸಿಬಿ ಬೇಡಿಕೆಯನ್ನು ಆಯೋಜಕರು ತಳ್ಳಿಹಾಕಿದ ತಕ್ಷಣ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎನ್‌ಒಸಿ (NOC) ನೀಡಲು ನಿರಾಕರಿಸಿತು. ಹೀಗಾಗಿ ಪಾಕಿಸ್ತಾನ ಟೂರ್ನಿಯಿಂದಲೇ ಹೊರಬಿದ್ದಿದೆ. ಅಕ್ಟೋಬರ್ 10ರಂದು ಅಭಿಮಾನಿಗಳು ಕಾಯುತ್ತಿದ್ದ ಭಾರತ-ಪಾಕಿಸ್ತಾನ ಪಂದ್ಯ ನಿಗದಿಯಾಗಿತ್ತು. ಆದರೆ ಪಾಕ್ ಹಿಂದೆ ಸರಿದಿದ್ದರಿಂದ ಈ ಪಂದ್ಯ ರದ್ದಾಗಿದೆ.

ಶಾಹಿದ್ ಅಫ್ರಿದಿ ನಾಯಕತ್ವದ ಪಾಕಿಸ್ತಾನ ತಂಡದ ಮೊದಲ ಪಂದ್ಯಗಳನ್ನು ತಾಂತ್ರಿಕ ಕಾರಣಗಳಿಂದ ಈ ಹಿಂದೆಯೇ ಮುಂದೂಡಲಾಗಿತ್ತು. ಕಳೆದ ಎರಡು ಸೀಸನ್‌ಗಳಲ್ಲಿ ರನ್ನರ್ ಅಪ್ ಆಗಿದ್ದ ಪಾಕಿಸ್ತಾನಕ್ಕೆ ಈ ಬಾರಿ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಎನ್‌ಒಸಿ ಸಿಗದ ಕಾರಣ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಮತ್ತು ಮಂಡಳಿಯ ನಿರ್ಧಾರವನ್ನು ಗೌರವಿಸುವುದಾಗಿ ಪಾಕಿಸ್ತಾನ ಚಾಂಪಿಯನ್ಸ್ ಮ್ಯಾನೇಜ್‌ಮೆಂಟ್ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಏಷ್ಯಾಡ್‌ನಲ್ಲೇ ಗರಿಷ್ಠ ವೀಕ್ಷಣೆ ದಾಖಲೆ ಬರೆದ ಭಾರತ-ಪಾಕ್‌ ಪಂದ್ಯ

ನಗೋಯಾ: ಇತ್ತೀಚೆಗೆ ನಡೆದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹಾಕಿ ಸೆಮಿಫೈನಲ್‌ ಹಾಗೂ ಕ್ರಿಕೆಟ್‌ ಫೈನಲ್‌, ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲೇ ಗರಿಷ್ಠ ವೀಕ್ಷಣೆ ಪಂದ್ಯಗಳು ಎಂದು ಒಲಿಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾ(ಒಸಿಎ) ತಿಳಿಸಿದೆ. ಆದರೆ ವೀಕ್ಷಣೆ ಅಂಕಿಅಂಶ, ಈ ಎರಡು ಪಂದ್ಯಗಳ ಪೈಕಿ ಯಾವುದು ಹೆಚ್ಚು ವೀಕ್ಷಿಸಲ್ಪಟ್ಟ ಪಂದ್ಯ ಎಂಬುದನ್ನು ಬಹಿರಂಗಪಡಿಸಿಲ್ಲ.

ಈ ಬಗ್ಗೆ ಮಾತನಾಡಿರುವ ಒಸಿಎ ಸಮನ್ವಯ ಸಮಿತಿ ಅಧ್ಯಕ್ಷ ತಯ್ಯಬ್‌ ಇಕ್ರಮ್‌, ‘ಏಷ್ಯಾಡ್‌ನ 2 ಪಂದ್ಯಗಳು ವೀಕ್ಷಣೆಯಲ್ಲಿ ದಾಖಲೆ ನಿರ್ಮಿಸಿವೆ. ಭಾರತ-ಪಾಕ್‌ ಕ್ರಿಕೆಟ್ ಫೈನಲ್‌, ಹಾಕಿ ಸೆಮಿಫೈನಲ್‌ ಪಂದ್ಯಗಳು ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯಗಳು’ ಎಂದಿದ್ದಾರೆ.