ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಚಿನ್ನದ ಪದಕ ಗೆದ್ದಿದೆ. 212 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ 192 ರನ್ ಗಳಿಸಲಷ್ಟೇ ಶಕ್ತವಾಯಿತು. ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಅವರ ಅತ್ಯುತ್ತಮ ಬೌಲಿಂಗ್ ಭಾರತದ ಗೆಲುವಿಗೆ ಕಾರಣವಾಯಿತು.

ಟೋಕಿಯೋ: ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ ಬದ್ದ ಎದುರಾಳಿ ಪಾಕಿಸ್ತಾನವನ್ನು ಫೈನಲ್‌ನಲ್ಲಿ ರೋಚಕವಾಗಿ ಸೋಲಿಸುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಮತ್ತೊಮ್ಮೆ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ ಆಫ್ಘಾನಿಸ್ತಾನ ಮಣಿಸಿ ಚಿನ್ನ ಗೆದ್ದಿದ್ದ ಟೀಂ ಇಂಡಿಯಾ, ಈ ಬಾರಿ ಬದ್ದ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದು ಭಾರತ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. ಹಸನ್ ನವಾಜ್ ಕೆಚ್ಚೆದೆಯ ಹೋರಾಟದ ಹೊರತಾಗಿಯೂ ಭಾರತ ಕೊನೆಗೂ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.

ಭಾರತ ಎದುರು ಮತ್ತೆ ಮಂಡಿಯೂರಿದ ಪಾಕ್

ಗೆಲ್ಲಲು 212 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 192 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೂ ಶಿವಂ ದುಬೆ ತಲಾ ಎರಡು ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2025ರಲ್ಲಿ ಏಷ್ಯಾಕಪ್‌ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದಿದ್ದ ಭಾರತ ಇದೀಗ ಮತ್ತೊಮ್ಮೆ ಸಾಂಪ್ರದಾಯಿಕ ಎದುರಾಳಿಗೆ ಸೋಲಿನ ಶಾಕ್ ನೀಡುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಆರಂಭದಲ್ಲೇ ವೈಭವ್ ಸೂರ್ಯವಂಶಿ ಹಾಗೂ ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡಿತು. ಆದರೆ ಮತ್ತೋರ್ವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಮುಗಿಲೆತ್ತರದ ಸಿಕ್ಸರ್ ಸಹಿತ ಸ್ಪೋಟಕ 61 ರನ್ ಸಿಡಿಸಿ ಪಾಕ್ ಬೌಲರ್‌ಗಳ ಚಳಿ ಬಿಡಿಸಿದರು. ಇನ್ನು ನಾಯಕ ಶ್ರೇಯಸ್ ಅಯ್ಯರ್ 21 ರನ್ ಗಳಿಸಿ ಅಬ್ರಾರ್ ಅಹಮದ್‌ಗೆ ವಿಕೆಟ್‌ ಒಪ್ಪಿಸಿದರು./

ಮತ್ತೆ ಪಾಕ್‌ಗೆ ಸಿಂಹಸ್ವಪ್ನರಾದ ತಿಲಕ್ ವರ್ಮಾ:

ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಎದುರು ಕೊಂಚ ಮಂಕಾಗಿದ್ದ ತಿಲಕ್ ವರ್ಮಾ, ಪಾಕ್ ಎದುರಿನ ಫೈನಲ್‌ನಲ್ಲಿ ಮತ್ತೊಮ್ಮೆ ಪಾಕಿಸ್ತಾನ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. 2025ರ ಏಷ್ಯಾಕಪ್ ಟೂರ್ನಿಯಲ್ಲೂ ತಿಲಕ್ ವರ್ಮಾ ಪಾಕ್ ಬೌಲರ್‌ಗಳ ನಿದ್ದೆಗೆಡಿಸಿದ್ದರು. ಇದೀಗ ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ತಿಲಕ್ ವರ್ಮಾ ಕೇವಲ 22 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 51 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಅಂತಿಮವಾಗಿ ಭಾರತ ತಂಡವು 6 ವಿಕೆಟ್ ಕಳೆದುಕೊಂಡು 211 ರನ್ ಕಲೆಹಾಕಿತು.

ಇನ್ನು ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಮೊದಲ 6.1 ಓವರ್‌ಗಳಲ್ಲಿ 39 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಇದಾದ ಬಳಿಕ ನಾಲ್ಕನೇ ವಿಕೆಟ್‌ಗೆ ಹಸನ್ ನವಾಜ್ ಹಾಗೂ ಸೈಮ್ ಆಯೂಬ್ ಆಕರ್ಷಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆಯೂಬ್ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಅಬ್ದುಲ್ ಸಮದ್ ಬ್ಯಾಟಿಂಗ್ ಕೇವಲ 9 ರನ್‌ಗಳಿಗೆ ಸೀಮಿತವಾಯಿತು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಹಸನ್ ನವಾಜ್ 51 ಎಸೆತಗಳಲ್ಲಿ 96 ರನ್ ಸಿಡಿಸಿದಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 192 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತ 19 ರನ್‌ಗಳ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕ ಜಯಿಸಿತು.