ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆ ಇದೀಗ ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದೆ. ಈ ಅಂತ್ಯಕ್ರಿಯೆಯಲ್ಲಿ ಪೆಹಲ್ಗಾಂ ಉಗ್ರ ದಾಳಿಯ ಮಾಸ್ಟರ್ ಮೈಂಡ್ , ಲಷ್ಕರ್ ಇ ತೈಬಾದ ಹಲವು ಉಗ್ರರು ಪಾಲ್ಗೊಂಡಿದ್ದಾರೆ.
ಇಸ್ಲಾಮಾಬಾದ್ (ಜೂ.27) ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆ ಇದೀಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಅಂತ್ಯಕ್ರಿಯೆಯಲ್ಲಿ ಭಾರತದ ಮೋಸ್ಟ್ ವಾಂಟೆಡ್ ಉಗ್ರರು ಪಾಲ್ಗೊಂಡಿದ್ದಾರೆ. ಈ ಪೈಕಿ ಲಷ್ಕರ್ ಇ ತೈಬಾ ಹಾಗೂ ಪೆಹಲ್ಗಾಂ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿ ಸೈರಿದಂತೆ ಹಲವು ಪ್ರಮುಖ ಉಗ್ರರು ಪಾಲ್ಗೊಂಡಿದ್ದಾರೆ. ಈ ಮೂಲಕ ಪಾಕಿಸ್ತಾನ ಸರ್ಕಾರದ ನೆರವಿನಿಂದ ಉಗ್ರರು ಪಾಕಿಸ್ತಾನದಲ್ಲಿ ತಿರುಗಾಡುತ್ತಿರುವುದು ಜಾಗತಿಕ ಮಟ್ಟದಲ್ಲಿ ಬಹಿರಂಗವಾಗಿದೆ.
ಹಲವು ಉಗ್ರರು ಭಾಗಿ
ಶೋಯೆಬ್ ಅಕ್ತರ್ ಸಹೋದರ ಶಾಹಿದ್ ಅಕ್ತರ್ ಜೂನ್ 24ರಂದು ನಿಧನಗೊಂಡ ಹಿನ್ನಲೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಅಂತ್ಯಕ್ರಿಯೆ ನಡೆದಿತ್ತು. ಕೇವಲ ಪೆಹಲ್ಗಾಂ ಮಾತ್ರವಲ್ಲ 26-11ರ ಮುಂಬೈ ದಾಳಿಯ ಉಗ್ರರು ಈ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸೈಫುಲ್ಲಾ ಕಸೂರಿ ಜೊತೆ ಎಲ್ಇಟಿ ವಿಭಾಗವಾಗಿರುವ ಪಾಕಿಸ್ತಾನ ಮರ್ಕಾಜಿ ಮುಸ್ಲಿಮ್ ಲೀಗ್ ಇನಾಮ್ ಯುಆರ್ ರಹೆಮಾನ್ ಸೇರಿದಂತೆ ಹಲವು ಉಗ್ರರು ಈ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ವಿಶ್ವಸಂಸ್ಥೆ ಘೋಷಣೆ ಮಾಡಿದ ಉಗ್ರರು ಈ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ವಿಶ್ವಸಂಸ್ಥೆ ಘೋಷಿಸಿದ ಹಲವು ಉಗ್ರರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪಾಕಿಸ್ತಾನ ಪದೇ ಪದೇ ಹೇಳುತ್ತಲೇ ಬಂದಿದೆ.ಆದರೆ ಈ ಅಂತ್ಯಕ್ರಿಯೆಯಲ್ಲಿ ವಿಶ್ವಸಂಸ್ಥೆ ಘೋಷಿಸಿದ ಉಗ್ರರು ಪಾಲ್ಗೊಂಡಿದ್ದಾರೆ. ವಿಶ್ವಸಂಸ್ಥೆ ಘೋಷಿತ ಉಗ್ರ ಹಫೀಜ್ ಸಯೀದ್ PMML , ಜಮಾತ್ ಉದ್ ದಾವಾ, ಮಿಲಿ ಮುಸ್ಲಿಂ ಲೀಗ್ ಕೂಡ ಪಾಕಿಸ್ತಾನ ಚುನಾವಣೆಯಲ್ಲಿ ಸ್ಪರ್ದಿಸಿದೆ. ಈ ಉಗ್ರರು ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಶೋಯೆಬ್ ಅಕ್ತರ್ 2011ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಬಳಿಕ ಕಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ವೇದಿಕೆಗಳಲ್ಲಿ ಭಾರತೀಯ ಕಮೆಂಟೇಟರ್ ಜೊತೆ ಇಂಡೋ ಪಾಕ್ ಪಂದ್ಯದ ವೀಕ್ಷಣೆ ವಿವರಣೆ ನೀಡಿದ್ದಾರೆ. ಐಪಿಎಲ್ ಟೂರ್ನಿಯಲ್ಲೂ ಕಮೆಂಟ್ರಿ ನೀಡಿದ್ದಾರೆ.
22, 2025ರಲ್ಲಿ ಕಾಶ್ಮೀರದ ಪೆಹಲ್ಗಾಂ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿದ್ದರು. ಹಿಂದೂ ಪ್ರವಾಸಿಗರ ಗುರಿಯಾಗಿಸಿ ಈ ದಾಳಿ ನಡೆದಿತ್ತು. ಧರ್ಮ ಕೇಳಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈ ದಾಳಿಯಲ್ಲಿ 25 ಅಮಾಯಕರ ಪ್ರವಾಸಿಗರು ಬಲಿಯಾಗಿದ್ದರು. ಈ ಪೆಹಲ್ಗಾಂ ದಾಳಿಯ ಮಾಸ್ಟರ್ ಮೈಂಡ್‌ಗಳಲ್ಲಿ ಸೈಫುಲ್ಲಾ ಕಸೂರಿ ಒಬ್ಬ. ಈ ದಾಳಿಗೆ ಪ್ರತಿಯಾಗಿ ಭಾರತ , ಪಾಕಿಸ್ತಾನದ ಜೊತೆಗಿನ ಇಂಡಸ್ ನೀರು ಒಪ್ಪಂದ ರದ್ದುಗೊಳಿಸಿತು. ಬಳಿಕ ನೇರವಾಗಿ ಆಪರೇಶನ್ ಸಿಂದೂರ್ ಮೂಲಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನ ಗಡಿಯೊಳಕ್ಕೆ ನುಗ್ಗಿ ಭಾರತ ದಾಳಿ ಮಾಡಿತ್ತು.


